ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಮಾರುಕಟ್ಟೆ: ತಿಂಗಳಲ್ಲಿ ತನಿಖೆ

ಸಭೆಯಲ್ಲಿ ಭರವಸೆ ನೀಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ
Last Updated 11 ಜನವರಿ 2022, 13:24 IST
ಅಕ್ಷರ ಗಾತ್ರ

ಬೆಳಗಾವಿ: ‘ಹೊರವಲಯದ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ–4ರ ಸಮೀಪದಲ್ಲಿ ಉದ್ಘಾಟನೆಗೊಂಡಿರುವ ಜೈಕಿಸಾನ್‌ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ನಿರ್ಮಾಣದ ಕುರಿತು ತನಿಖೆ ನಡೆಸಲಾಗುವುದು. ಗಂಭೀರವಾಗಿ ನ್ಯೂನತೆಗಳು ಕಂಡುಬಂದಲ್ಲಿ ಕ್ರಮಕ್ಕಾಗಿ ಸರ್ಕಾರಕ್ಕೆ ಬರೆಯಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಖಾಸಗಿ ಮಾರುಕಟ್ಟೆ ವಿರುದ್ಧ ಆಕ್ಷೇಪಗಳು ವ್ಯಕ್ತವಾಗಿರುವುದರಿಂದ ಮಂಗಳವಾರ ಕರೆದಿದ್ದ ರೈತ ಹೋರಾಟಗಾರರು, ಎಪಿಎಂಸಿಯವರು ಹಾಗೂ ಖಾಸಗಿ ಮಾರುಕಟ್ಟೆ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತನಿಖೆ ನಡೆಸುವುದಕ್ಕಾಗಿ ಒಂದು ತಿಂಗಳು ಸಮಯ ಕೊಡುವಂತೆ ಕೋರಿದರು. ‘ಅಧಿಕಾರಿಇಗಳು ದಾಖಲೆಗಳನ್ನು ತಿರುಚಿದ್ದಾರೆ. ಅಕ್ರಮವಾಗಿ ಅನುಮತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿವೆ. ಹೀಗಾಗಿ, ಇದೆಲ್ಲವನ್ನೂ ಪರಿಶೀಲಿಸಲಾಗುವುದು’ ಎಂದರು.

ಡಿ.ಸಿ. ವಿರುದ್ಧ ಅಸಮಾಧಾನ:

ಇದಕ್ಕೆ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ವಿರೋಧ ವ್ಯಕ್ತಪಡಿಸಿದರು. ‘ಎಪಿಎಂಸಿಯಲ್ಲಿ ಮಾರುಕಟ್ಟೆ ಇದ್ದರೂ ಖಾಸಗಿ ಮಾರುಕಟ್ಟೆಗೆ ಅವಕಾಶ ಕೊಟ್ಟು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ. ಹಲವು ಅಧಿಕಾರಿಗಳು ಶಾಮೀಲಾಗಿ ಅಕ್ರಮ ಎಸಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ. ಆದರೆ, ಜಿಲ್ಲಾಧಿಕಾರಿ ಪಲಾಯನ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕ್ರಮ ನಮಗೆ ತೃಪ್ತಿ ತಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಪಿಎಂಸಿಯಲ್ಲಿ ಲಕ್ಷಾಂತರ ರೂಪಾಯಿ ಕೊಟ್ಟು ವ್ಯಾಪಾರಿಗಳು ಅಂಗಡಿಗಳನ್ನು ಖರೀದಿಸಿ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಅನ್ಯಾಯವಾಗಲಿದೆ. ಖಾಸಗಿ ಮಾರುಕಟ್ಟೆ ಸ್ಥಾಪನೆ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡವಿದೆ’ ಎಂದು ದೂರಿದರು.

‘ದೇಶದಾದ್ಯಂತ ಖಾಸಗೀಕರಣ ವಿರೋಧಿಸಿ ಚಳವಳಿ ನಡೆಯುತ್ತಿದೆ. ಎಪಿಎಂಸಿ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ಕೇಂದ್ರ ಸರ್ಕಾರವು ರೈತರ ಹೋರಾಟದ ಪರಿಣಾಮ ಹಿಂಪಡೆದಿದೆ. ಹೀಗಿರುವಾಗ, ಇಲ್ಲಿ ಖಾಸಗಿ ಮಾರುಕಟ್ಟೆಗೆ ಅವಕಾಶ ಕೊಟ್ಟಿರುವುದು ಕಾನೂನು ಬಾಹಿರವಾಗಿದೆ’ ಎಂದು ತಿಳಿಸಿದರು.

ಕ್ರಮ ವಹಿಸಲಿಲ್ಲ

ಸಭೆಯಲ್ಲಿ ಪರ–ವಿರೋಧ ಅಭಿಪ್ರಾಯಗಳು ಕೇಳಿಬಂದವು. ಸಿದ್ದಗೌಡ ಮೋದಗಿ ಹಾಗೂ ರೈತ ಮುಖಂಡ ರವಿ ಪಾಟೀಲ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

‘ಸರ್ಕಾರಿ ಎಪಿಎಂಸಿ ನಿರ್ದೇಶಕರು ಹಾಗೂ ಆಡಳಿತ ಮಂಡಳಿಯವರು ರೈತರ ಬೆನ್ನಿಗೆ ನಿಲ್ಲುತ್ತಿಲ್ಲ. ರೈತರಿಗೆ ಅನ್ಯಾಯ ಆಗುತ್ತಿರುವುದಾಗಿ ಎಪಿಎಂಸಿಯವರಿಗೆ ತಿಳಿಸಿದ್ದೆವು. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ರವಿ ಪಾಟೀಲ ದೂರಿದರು.

ಜೈಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಅಧ್ಯಕ್ಷ ದಿವಾಕರ ಪಾಟೀಲ ಮಾತನಾಡಿ, ‘ಈ ಹಿಂದೆ ಕ್ಯಾಂಪ್‌ ಪ್ರದೇಶದಲ್ಲಿದ್ದ ಮಾರುಕಟ್ಟೆ ಮುಚ್ಚಿದಿರಿ. ಈಗ ನಮ್ಮ ಮಾರುಕಟ್ಟೆಯನ್ನೂ ಬಂದ್ ಮಾಡುತ್ತಿರಾ? ನಾವು ಕೇವಲ ಬಾಡಿಗೆ ಕೊಡುವುದಕ್ಕೆ ಎಪಿಎಂಸಿಗೆ ವ್ಯಾಪಾರಕ್ಕೆ ಬರಬೇಕಾ?’ ಎಂದು ಕೇಳಿದರು.

‘ನಮ್ಮ ಬಗ್ಗೆ ಬಂದಿರುವ ಎಲ್ಲ ಆರೋಪಗಳಿಗೆ ಸೂಕ್ತ ಪ್ರಾಧಿಕಾರದ ಎದುರು ಉತ್ತರ ಕೊಡುತ್ತೇವೆ. ಜಿಲ್ಲಾಧಿಕಾರಿ ನೀಡುವ ನೋಟಿಸ್‌ಗೂ ಉತ್ತರ ಕೊಡಲು ಸಿದ್ಧರಿದ್ದೇವೆ. ನಾವು ಯಾರ ಮೇಲೂ ದಾದಾಗಿರಿ ಮಾಡಿಲ್ಲ. ಅಕ್ರಮವನ್ನೂ ಎಸಗಿಲ್ಲ’ ಎಂದರು.

ಇದಕ್ಕೂ ಮುನ್ನ ಎಪಿಎಂಸಿಯಿಂದ ಮೆರವಣಿಗೆ ನಡೆಸಲು ಮುಂದಾದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಮುಖಂಡರಾದ ಸಿದಗೌಡ ಮೋದಗಿ, ರಾಜಕುಮಾರ ಟೋಪಣ್ಣವರ, ಸುಜಿತ್ ಮುಳಗುಂದ ಮೊದಲಾದವರು ಪಾಲ್ಗೊಂಡಿದ್ದರು.

ಹೋರಾಟ ಮಾಡಬೇಕಾಗುತ್ತದೆ

ಜಿಲ್ಲಾಧಿಕಾರಿ ತಿಂಗಳಲ್ಲಿ ವರದಿ ಪಡೆದು ಅಕ್ರಮಗಳ ಕುರಿತು ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ತಿಳಿದು ಹೋರಾಟ ಮಾಡಬೇಕಾಗುತ್ತದೆ.

–ಸಿದಗೌಡ ಮೋದಗಿ, ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ (ಸಂಯುಕ್ತ)

ಅಕ್ರಮ ಮಾಡಿಲ್ಲ

ಸರ್ಕಾರದ ಮಾರುಕಟ್ಟೆ ನಡೆಯಲಿ. ನಾವೂ ನಡೆಸುತ್ತೇವೆ. ಇದರಿಂದ ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುತ್ತದೆ. ನಾವು ಯಾವ ಅಕ್ರಮವನ್ನೂ ಮಾಡಿಲ್ಲ.

–ದಿವಾಕರ ಪಾಟೀಲ, ಅಧ್ಯಕ್ಷ, ಜೈಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT