ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿರಹಿತರ ನಿವೇಶನಕ್ಕೆ 2 ಎಕರೆ ಜಮೀನು

ಭೈರನಟ್ಟಿ ಗ್ರಾಮದಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮ
Last Updated 18 ಜೂನ್ 2022, 16:11 IST
ಅಕ್ಷರ ಗಾತ್ರ

ಮೂಡಲಗಿ:‘ಗ್ರಾಮ ವಾಸ್ತವ್ಯದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಶೇ10ರಷ್ಟು ಅರ್ಜಿಗಳು ಬಂದಿದ್ದು, ಉಳಿದಂತೆ ಅಹವಾಲುಗಳು ರಸ್ತೆ ಸುಧಾರಣೆ, ಚರಂಡಿ, ಮನೆ ನಿರ್ಮಾಣಕ್ಕೆ ಸಂಬಂಧಿಸಿದ್ದಾಗಿವೆ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು.

ತಾಲ್ಲೂಕಿನ ಭೈರನಟ್ಟಿ ಗ್ರಾಮದಲ್ಲಿ ಶನಿವಾರ ‘ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮದ ಜನರು ವಿವಿಧ ಇಲಾಖೆಗೆ ಸಂಬಂಧಿಸಿದ ನೂರಕ್ಕೂ ಅಧಿಕ ಮನವಿಗಳನ್ನು ನೀಡಿದ್ದಾರೆ. ಕೆಲವೊಂದು ಸ್ಥಳದಲ್ಲಿ ಇತ್ಯರ್ಥಗೊಳಿಸಲಾಗಿದೆ’ ಎಂದರು.

ವಿಧವಾ ವೇತನ, ಭೂಮಿ ಖಾತಾ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಅಹವಾಲುಗಳನ್ನು ಸ್ಥಳದಲ್ಲಿಇತ್ಯರ್ಥಗೊಳಿಸಲಾಗಿದೆ. ಗ್ರಾಮದ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಗೆ ಮತ್ತು ಗ್ರಾಮ ಪಂಚಾಯ್ತಿಗೆ ಸೂಚಿಸಲಾಗಿದೆ ಎಂದರು.

ಭೈರನಟ್ಟಿ ಗ್ರಾಮದಲ್ಲಿ 165 ಎಕರೆ ಸರ್ಕಾರಿ ಭೂಮಿ ಇದ್ದು, ಗ್ರಾಮದಲ್ಲಿ ವಸತಿ ರಹಿತರನ್ನು ಗುರುತಿಸಿ ಅವರಿಗಾಗಿ 2 ಎಕರೆಯಲ್ಲಿ ನಿವೇಶನ ನೀಡಲಾಗುವುದು. ರುದ್ರಭೂಮಿಗಾಗಿ 2 ಎಕರೆಯನ್ನು ಕೊಡಲಾಗುವುದು. ಅಕ್ರಮ– ಸಕ್ರಮಕ್ಕೆ ಸಂಬಂಧಿಸಿದ ಕೆಲವು ಅರ್ಜಿಗಳನ್ನು ಸಹ ಪರಿಗಣಿಸಿ ಅವರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದರು.

ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ಮೂಡಲಗಿ ತಹಶೀಲ್ದಾರ್ ಡಿ.ಜಿ. ಮಹಾತ್‌, ಗೋಕಾಕ ಪ್ರಕಾಶ ಹೊಳೆಪ್ಪಗೋಳ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಆಡಳಿತದ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ರುದ್ರಭೂಮಿಗೆ ಆದ್ಯತೆ: ಜಿಲ್ಲೆಯಲ್ಲಿ ಯಾವ ಗ್ರಾಮದಲ್ಲಿ ರುದ್ರಭೂಮಿ ಇಲ್ಲ ಅಲ್ಲಿ ಸರ್ಕಾರಿ ಭೂಮಿಯನ್ನು ನೀಡಲಾಗುವುದು. ಕಂದಾಯ ಇಲಾಖೆಯ ಭೂಮಿ ಇಲ್ಲದಿದ್ದರೂ ಸಹ ಖಾಸಗಿ ಭೂಮಿಯನ್ನು ಖರೀದಿಸಿ ರುದ್ರಭೂಮಿಗಾಗಿ ನೀಡಲಾಗುತ್ತಿದ್ದು, ಆಯಾ ಗ್ರಾಮದ ಜನರು ಭೂಮಿಯನ್ನು ನೀಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಸಂಚಾರಿ ಪಶು ಚಿಕಿತ್ಸಾ ವಾಹನ: ಬೆಳಗಾವಿ ಜಿಲ್ಲೆಗೆ 17 ಪಶು ಚಿಕಿತ್ಸಾ ಸಂಚಾರಿ ವಾಹನಗಳು ಸರ್ಕಾರವು ಒದಗಿಸಿದ್ದು, ಅದರಲ್ಲಿ ಮೂಡಲಗಿಗೆ ಒಂದು ಪಶು ಚಿಕಿತ್ಸಾ ಸಂಚಾರಿ ವಾಹನವನ್ನು ನೀಡಲಾಗಿದೆ. ವಾಹನದಲ್ಲಿ ಪಶು ವೈದ್ಯರ ನಿಯೋಜನೆಗೊಂಡಿದ್ದು, ರೈತರಿಂದ ಪೋನ್‌ ಕರೆ ಬಂದಲ್ಲಿ ಸ್ಥಳಕ್ಕೆ ಬಂದು ಪಶು ಚಿಕಿತ್ಸೆ ನೀಡುವರು. ಮೂಡಲಗಿಗೆ ಪಾಲಿಕ್ಲಿನಿಕ್‌ ಆಸ್ಪತ್ರೆ ಪ್ರಾರಂಭಗೊಳ್ಳುವ ಸಲುವಾಗಿ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುವ ಬಗ್ಗೆ ತಿಳಿಸಿದರು.

ಹನಿ ನೀರಾವರಿ ಸೌಲಭ್ಯ ಒದಗಿಸುವಂತೆ ಗ್ರಾಮದ ಕೆಲವರಿಂದ ಬೇಡಿಕೆ‌ ಕೇಳಿಬಂತು. ಇದಕ್ಕೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ, ಸ್ಥಳದಲ್ಲಿಯೇ ಅರ್ಜಿ ನಮೂನೆ ಹಾಗೂ ಮಹಿಳೆಯರಿಗೆ ವಿಧವಾವೇತನ ಪ್ರಮಾಣಪತ್ರಗಳನ್ನು ವಿತರಿಸಿದರು.

ಗ್ರಾಮದಲ್ಲಿ ರಸ್ತೆ, ಚರಂಡಿ, ವಸತಿ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು. ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಮೂಲಕ ಸ್ಥಳೀಯವಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ಮೂಡಲಗಿ ತಹಶೀಲ್ದಾರ್‌ ಡಿ.ಜಿ.ಮಹಾತ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT