ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಮೀರದಿದ್ದರೆ ಹಕ್ಕುಪತ್ರ

ಸಫಾಯಿ ಕರ್ಮಚಾರಿಗಳ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿಕೆ
Last Updated 29 ಜೂನ್ 2022, 16:30 IST
ಅಕ್ಷರ ಗಾತ್ರ

ಬೆಳಗಾವಿ: ‘ಪೌರಕಾರ್ಮಿಕರ ವಸತಿ ಗೃಹಗಳಲ್ಲಿ ವಾಸ ಮಾಡುತ್ತಿರುವವರು ಬೇರೆ ಯೋಜನೆಗಳಲ್ಲಿ ಪಡೆದುಕೊಂಡಿರುವ ನಿವೇಶನವನ್ನು ಬಿಟ್ಟುಕೊಟ್ಟರೆ, ಅವರಿಗೆ ಒಂದು ವಾರದೊಳಗೆ ಹಕ್ಕುಪತ್ರ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಸಫಾಯಿ ಕರ್ಮಚಾರಿಗಳ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕೆಲವರು ಪೌರಕಾರ್ಮಿಕರ ವಸತಿ ಗೃಹಗಳಲ್ಲಿ ಇದ್ದುಕೊಂಡೂ ಬೇರೆ ನಿವೇಶನ ಪಡೆದಿದ್ದಾರೆ. ಅಂಥವರು ಹಕ್ಕುಪತ್ರ ಪಡೆಯಲು ಆಗುವುದಿಲ್ಲ’ ಎಂದರು.

‘ಬೆಳಗಾವಿ ನಗರದ ಪಿ.ಕೆ ವಸತಿಗೃಹಗಳಲ್ಲಿ ಸದ್ಯಕ್ಕೆ ಇರುವ ಕುಟುಂಬಗಳ ಸಮೀಕ್ಷೆ ನಡೆಸಬೇಕು. ಸಮಗ್ರ ಸಮೀಕ್ಷೆ ಬಳಿಕ ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಬಹುದು’ ಎಂದು ತಿಳಿಸಿದರು.

‘1973ಕ್ಕಿಂತ ಮುಂಚೆಯಿಂದಲೂ ಇರುವ ವಸತಿಗೃಹದಲ್ಲಿ ವಾಸಿಸುತ್ತಿರುವ ಪೌರಕಾರ್ಮಿಕರಿಗೆ ನಿಯಮಾವಳಿ ಪ್ರಕಾರ ವಸತಿಗೃಹದ ಹಕ್ಕುಪತ್ರ ನೀಡಬೇಕು. ಒಂದು ವೇಳೆ ನಿವೃತ್ತ ಪೌರಕಾರ್ಮಿಕರು ನಿಧನರಾಗಿದ್ದರೆ ಅವರ ವಾರಸುದಾರರಿಗೆ ನೀಡಲಾಗುವುದು’ ಎಂದರು.

‘ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಇಲ್ಲ. ಇಂಥವರಿಗೆ ಗುರುತಿನಚೀಟಿ ನೀಡಲು ಅವಕಾಶವಿಲ್ಲ. ಒಂದು ವೇಳೆ ಅಂಥವರು ಇದ್ದರೆ ಅವರನ್ನು ಕರೆತಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಸ್ವಚ್ಛತಾ ಗುತ್ತಿಗೆ ನೀಡುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗುತ್ತಿಗೆದಾರರಿಗೆ ನೀಡಬೇಕು ಎಂದು ಸರ್ಕಾರದ ನಿರ್ದೇಶನ ಇಲ್ಲ. ನಿವೃತ್ತ ಪೌರಕಾರ್ಮಿಕರು ಸರ್ಕಾರಿ ವಸತಿಗೃಹಗಳಲ್ಲಿ ಇರುವಂತಿಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲಿಸಬೇಕು’ ಎಂದೂ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘1973ಕ್ಕಿಂತ ಮುಂಚೆಯಿಂದಲೂ ಪೌರಕಾರ್ಮಿಕ ಆಗಿರುವವರಿಗೆ ಪಿ.ಕೆ ವಸತಿಗೃಹಗಳಲ್ಲಿ ಮನೆ ಒದಗಿಸಲು ಅವಕಾಶವಿದ್ದರೆ ಒದಗಿಸಬೇಕು. ಕೆಲವು ಪೌರಕಾರ್ಮಿಕರು ಎರಡು ಮೂರು ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆದುಕೊಂಡಿದ್ದರೆ ನಿಯಮಾವಳಿ ಪ್ರಕಾರ ಪರಿಶೀಲಿಸಿ, ಸೌಲಭ್ಯ ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.

‘ಗುರುತಿನ ಚೀಟಿ ಇಲ್ಲದ ಪೌರ ಕಾರ್ಮಿಕರಿಗೆ ತಕ್ಷಣ ಗುರುತಿನ ಚೀಟಿ ವಿತರಣೆ ಮಾಡಬೇಕು. ಮಳೆಗಾಲದಲ್ಲಿ ರೇನ್‌ಕೋಟ್ ನೀಡಬೇಕು. ಟೆಂಡರ್ ಮೂಲಕ ಬೇಗ ಗುರುತಿನ ಚೀಟಿ ಒದಗಿಸಲು ಸಾಧ್ಯವಾಗದೆ ಇದ್ದಲ್ಲಿ, ಪಾಲಿಕೆಯ ಮೂಲಕ ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದರ್ಶನ್ ಎಚ್.ವಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಉಮಾ ಸಾಲಿಗೌಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

*

ಕುಡಿಯುವ ನೀರಿನ ಸಂಪರ್ಕ ನೀಡಿ

‘ನಗರದ ಆನಂದ ವಾಡಿಯಲ್ಲಿ ಜಿಮ್, ಗ್ರಂಥಾಲಯ ನಿರ್ಮಾಣ ಮಾಡಲು ಕಾಮಗಾರಿಗೆ ಟೆಂಡರ್‌ಗಳನ್ನು ಕರೆಯಲಾಗಿದೆ. ಸದ್ಯದಲ್ಲೇ ಕುಡಿಯುವ ನೀರಿನ ಸಂಪರ್ಕಗಳನ್ನು ಕೂಡ ಕಲ್ಪಿಸಲಾಗುವುದು’ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ ತಿಳಿಸಿದರು.

‘ಪೌರಕಾರ್ಮಿಕರ ವಸತಿಗೃಹದ ಅವರಣದಲ್ಲಿ ಸದ್ಯದ ಮಟ್ಟಿಗೆ ಬೋರ್‌ವೆಲ್ ವ್ಯವಸ್ಥೆ ಕಲ್ಪಿಸಿ, ತಕ್ಷಣ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT