ಬುಧವಾರ, ಮಾರ್ಚ್ 29, 2023
30 °C
ಪ.ಜಾತಿ, ಪಂಗಡಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಡಿ.ಸಿ.

ಸ್ಮಶಾನಕ್ಕೆ ಭೂಮಿ: ಶೀಘ್ರದಲ್ಲೆ ಮಂಜೂರಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸ್ಮಶಾನ ಭೂಮಿ ಒದಗಿಸಲು ಸರ್ಕಾರಿ ಜಮೀನು ಗುರುತಿಸಿ ಪ್ರಸ್ತಾವ ಸಲ್ಲಿಸುವಂತೆ ಎಲ್ಲ ತಹಶೀಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿದ್ದು, ತಕ್ಷಣವೇ ಮಂಜೂರಾತಿ ಕೊಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಂಜಿ. ಹಿರೇಮಠ ತಿಳಿಸಿದರು.

ಇಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೈಲಹೊಂಗಲ, ಅಥಣಿ ಹಾಗೂ ಇತರ ತಾಲ್ಲೂಕುಗಳಲ್ಲಿ ಸ್ಮಶಾನಕ್ಕೆ ಜಾಗ ನೀಡುವ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ನಡೆಸಿ ಪರೀಶಿಲನೆ ನಡೆಸಲಾಗಿದೆ. ಖಾಸಗಿ ಭೂ ಮಾಲೀಕರೂ ಸ್ವ ಇಚ್ಛೆಯಿಂದ ಜಾಗ ಕೊಡಬೇಕು’ ಎಂದರು.

ಮದಕರಿ ನಾಯಕ ಪ್ರತಿಮೆ: ‘ನಗರದ ಆರ್.ಪಿ.ಡಿ. ವೃತ್ತದಲ್ಲಿ ವೀರ ಮದಕರಿ ನಾಯಕ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ನಿಯಮಾವಳಿ ಪ್ರಕಾರ ಪ್ರಕ್ರಿಯೆ ಆರಂಭಿಸಬೇಕು’ ಎಂದು ನಿರ್ದೇಶನ ನೀಡಿದರು.

‘ನಿಪ್ಪಾಣಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯ ಭೂಮಿ ಖರೀದಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದಿನ ಸಭೆಗಳಿಗೆ ಡಿ.ಎಸ್.ಪಿ.ಗಳು ಕೂಡ ಕಡ್ಡಾಯವಾಗಿ ಹಾಜರಾಗಬೇಕು’ ಎಂದು ಸೂಚಿಸಿದರು.

‘ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ 2021ರ ಫೆಬ್ರುವರಿಯಿಂದ ಮೇವರೆಗೆ ₹ 69 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗಿದೆ. ಬಾಕಿ ಇಲ್ಲ’ ಎಂದರು.

ಸಮರ್ಪಕ ತನಿಖೆಗೆ ಕ್ರಮ: ‘ನ್ಯಾಯಾಲಯದಲ್ಲಿ ದೌರ್ಜನ್ಯ ಪ್ರಕರಣಗಳನ್ನು ಸಮರ್ಪಕ ನಿರ್ವಹಣೆಗೆ ಒಬ್ಬ ಅಧಿಕಾರಿಯನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ’ ಎಂದು ಎಎಸ್ಪಿ ಅಮರನಾಥ ರೆಡ್ಡಿ ತಿಳಿಸಿದರು.

ಡಿಸಿಪಿ ವಿಕ್ರಂ ಅಮಟೆ ಮಾತನಾಡಿ, ‘ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಿಯಮಾವಳಿ ಪ್ರಕಾರ ತನಿಖೆ ಕೈಗೊಂಡು ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತಿದೆ. ಯಾವುದೇ ಪ್ರಕರಣಗಳಲ್ಲಿ ‘ಬಿ’ ವರದಿ ಹಾಕುವುದು ಸುಲಭವಲ್ಲ; ಹಿರಿಯ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸುತ್ತಾರೆ’ ಎಂದು ಸದಸ್ಯರ ಗಮನಕ್ಕೆ ತಂದರು.

ಸಮಿತಿಯ ಸದಸ್ಯ ಅಶೋಕ ಅಸೋದೆ, ‘ನೆರೆ ಮೊದಲಾದ ಕಾರಣದಿಂದ ನೂರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದರೂ ಉತಾರ ಇಲ್ಲದಿರುವ ಕಾರಣಕ್ಕೆ ಪರಿಹಾರ ಮತ್ತಿತರ ಸೌಲಭ್ಯ ಸಿಗುತ್ತಿಲ್ಲ. ಅಂತಹ ಕುಟುಂಬಗಳಿಗೆ ಉತಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ವಿದ್ಯಾರ್ಥಿವೇತನ ಬಾಕಿ ಇದೆ: ‘ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ವಿದ್ಯಾರ್ಥಿವೇತನ ಬಾಕಿ ಇದ್ದು, ಬೇಗ ಬಿಡುಗಡೆ ಮಾಡಬೇಕು’ ಎಂದು ಕೋರಿದರು. ‘ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸದಸ್ಯ ಸುರೇಶ ತಳವಾರ, ‘ಕೋವಿಡ್ 2ನೇ ಅಲೆಯಲ್ಲಿ ಕೋವಿಡ್‌ನಿಂದ ಮೃತರಾದವರ ಕುಟುಂಬಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಹಾಯಧನ ನೀಡಲಾಗುತ್ತಿದೆ. ಅಂತೆಯೇ ಮೊದಲ ಅಲೆಯಲ್ಲಿ ಮೃತರಾದವರ ಕುಟುಂಬದವರಿಗೂ ಪರಿಹಾರ ದೊರಕಿಸಬೇಕು’ ಎಂದು ಆಗ್ರಹಿಸಿದರು.

ಸದಸ್ಯ ವಿಜಯ ತಳವಾರ ಮಾತನಾಡಿ, ‘ಸಾರ್ವಜನಿಕರಿಗೆ ಮುಕ್ತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದರೂ ಕೆಲ ರಾಜಕೀಯ ವ್ಯಕ್ತಿಗಳು ತಮಗೆ ಬೇಕಾದವರಿಗೆ ಮಾತ್ರ ಟೋಕನ್ ನೀಡುವ ಮೂಲಕ ಲಸಿಕಾಕರಣವನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಮಹಾನಗರ ಪಾಲಿಕೆ‌ ಆಯುಕ್ತ ಕೆ.ಎಚ್. ಜಗದೀಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.