ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಸರಿಗಷ್ಟೆ ಕೋವಿಡ್ ವಾರ್‌ ರೂಂ ಎನಿಸದಿರಲಿ’

Last Updated 13 ಮೇ 2021, 12:31 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ತಕ್ಷಣಕ್ಕೆ‌‌ ನೆರವಾಗುವ ಉದ್ಧೇಶದಿಂದ ವಾರ್ ರೂಂ ಆರಂಭಿಸಲಾಗಿದೆ. ಆಮ್ಲಜನಕ ಕೊರತೆ, ಹಾಸಿಗೆಗಳ ಲಭ್ಯತೆ ಹಾಗೂ ರೆಮ್‌ಡಿಸಿವಿರ್ ಮೊದಲಾದವುಗಳ ಬಗ್ಗೆ ವಿಚಾರಿಸಲು ಕರೆ ಮಾಡುವವರಿಗೆ ಸಮರ್ಪಕ ಮಾಹಿತಿ ಒದಗಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ಸ್ಮಾರ್ಟ್ ಸಿಟಿಯ ಕಮಾಂಡ್ ಕಂಟ್ರೋಲ್ ರೂಂನಲ್ಲಿ ಆರಂಭಿಸಲಾಗಿರುವ ಕೋವಿಡ್ ವಾರ್ ರೂಂಗೆ ಗುರುವಾರ ಭೇಟಿ ನೀಡಿ ಅವರು ಪರಿಶೀಲಿಸಿದರು.

‘ಈ ವಾರ್‌ ರೂಂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇಷ್ಟೆಲ್ಲ ತಂತ್ರಜ್ಞಾನ ಹಾಗೂ‌ ಮಾನವ ಸಂಪನ್ಮೂಲ ಹೊಂದಿದ್ದರೂ ಪರಿಣಾಮಕಾರಿಯಾಗಿ ಕೆಲಸ ಮಾಡಿದಾಗ ಮಾತ್ರ ಜನರಿಗೆ ಅನುಕೂಲವಾಗುತ್ತದೆ.‌ ಇಲ್ಲದಿದ್ದರೆ ಇದು ‌ನಾಮ್‌ಕಾವಾಸ್ತೆ ಆಗುತ್ತದೆ. ಹಾಗಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಬಂದ ಕರೆಗಳು, ಕೇಳಿದ ಮಾಹಿತಿ, ಸಿಬ್ಬಂದಿ ಕೈಗೊಂಡ ಕ್ರಮ ಮತ್ತಿತರ ವಿವರಗಳನ್ನು ಒಳಗೊಂಡಿರುವ ಲಾಗ್ ಬುಕ್ ಅನ್ನು ಸಚಿವರು ಖುದ್ದಾಗಿ ಪರಿಶೀಲಿಸಿದರು.

‘ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಹಾಗೂ ಸಂಬಂಧಿಸಿದ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ವಾರ್ ರೂಂ ಸಿಬ್ಬಂದಿ ಹೊಂದಿರಬೇಕು. ಜಿಲ್ಲಾಡಳಿತ, ಬಿಮ್ಸ್, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳ ಜೊತೆಗೆ ಸಮನ್ವಯತೆ ಸಾಧಿಸಿ ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು’ ಎಂದು ತಿಳಿಸಿದರು.

ಕೋವಿಡ್ ವಾರ್ ರೂಮ್ ನೋಡಲ್ ಅಧಿಕಾರಿಯಾದ ಕಾಡಾ ಆಡಳಿತಾಧಿಕಾರಿ ಶಾರದಾ ಕೋಲಕಾರ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ. ಮುನ್ಯಾಳ, ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ, ಡಾ.ಎಂ.ಎಸ್. ಪಲ್ಲೇದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT