ಮಂಗಳವಾರ, ಜೂನ್ 22, 2021
23 °C
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೊಡುಗೆ

ಕೋವಿಡ್ ಕೇರ್‌ ಕೇಂದ್ರಕ್ಕೆ ₹ 50 ಲಕ್ಷ ಮೌಲ್ಯದ ಉಪಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ (ಬೆಳಗಾವಿ ಜಿಲ್ಲೆ): ‘ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ವಸತಿ ಶಾಲೆಯಲ್ಲಿ 60 ಹಾಸಿಗೆಗಳುಳ್ಳ ಉಚಿತ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸುತ್ತಿದ್ದು, ಶುಕ್ರವಾರದಿಂದ (ಮೇ 14) ಅಧಿಕೃತವಾಗಿ ಚಾಲನೆ ನೀಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಇಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೋವಿಡ್‌ನಿಂದಾಗಿ ಹೊರಗಡೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ ತೊಂದರೆಗೆ ಒಳಗಾದವರ ಅನುಕೂಲಕ್ಕಾಗಿ 10 ಲೀಟರ್ ಹಾಗೂ 15 ಲೀಟರ್ ಸಾಮರ್ಥ್ಯದ 50 ಆಮ್ಲಜನಕ ಕಾನ್‌ಸನ್‌ಟ್ರೇಟರ್‌ಗಳನ್ನು ಈಗಾಗಲೇ ಖರೀದಿಸಲಾಗಿದೆ. ಥರ್ಮಾಮೀಟರ್ ಮತ್ತು ಆಕ್ಸಿಮೀಟರ್‌ಗಳನ್ನು ಕೂಡ ಒದಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಇಲ್ಲಿನ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ ಹಾಗೂ ಔಷಧೋಪಚಾರಗಳು ಸಿಗದೆ ಸಂಕಷ್ಟ ಪರಿಸ್ಥಿತಿಯಲ್ಲಿ ಇರುವ ಜನತೆಗೆ ಸುಸಜ್ಜಿತ ಆಮ್ಲಜನಕ ಕಾನ್‌ಸನ್‌ಟ್ರೇಟರ್‌ಗಳನ್ನು ಮತ್ತು ಹಾಸಿಗೆಯನ್ನು ಒದಗಿಸಲಾಗುವುದು. ಈ ಮೂಲಕ ಜನರಿಗೆ ಅಳಿಲು ಸೇವೆ ಮಾಡುತ್ತಿದ್ದೇನೆ’ ಎಂದರು.

‘ಕೇಂದ್ರಕ್ಕೆ ಬೇಕಾಗುವ ₹ 50 ಲಕ್ಷ ಮೌಲ್ಯದ ಉಪಕರಣಗಳನ್ನು ತಮ್ಮ ಸತ್ಯ-ಸಂಗಮ ಟ್ರಸ್ಟ್‌ನಿಂದ ದಾನದ ರೂಪದಲ್ಲಿ ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದ್ದೇನೆ. ಪ್ರಮುಖವಾಗಿ 7 ಲೀಟರ್ ಸಾಮರ್ಥ್ಯದ 35, 10 ಲೀಟರ್ ಸಾಮರ್ಥ್ಯದ 10 ಆಮ್ಲಜನಕ ಕಾನ್‌ಸನ್‌ಟ್ರೇಟರ್‌ಗಳು, 50 ಥರ್ಮಾ ಮೀಟರ್, ಆಕ್ಸಿಮೀಟರ್ ಒದಗಿಸಲಾಗಿದೆ’ ಎಂದು ವಿವರಿಸಿದರು.

‘ಕೋವಿಡ್ ದೃಢಪಟ್ಟಾಗ ಉದಾಸೀನ ತೋರದೆ ಕೂಡಲೇ ಚಿಕಿತ್ಸೆ ಪಡೆಯಬೇಕು. ಯಾರೂ ಧೈರ್ಯಗೆಡಬಾರದು. ಭಯದಿಂದಾಗಿಯೇ ಅನೇಕರು ಜನ ಜೀವ  ತೆತ್ತಿರುವ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಹೀಗಾಗಿ, ಜನರು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು’ ಎಂದು ಕೋರಿದರು.

‘ಅಥಣಿಯ ಖಾಸಗಿ ವೈದ್ಯರ ಸಹಯೋಗದಲ್ಲಿ 50 ಹಾಸಿಗೆಗಳ ಕೋವಿಡ್‌ ಕೇರ್‌ ಕೇಂದ್ರವನ್ನು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸ್ಥಾಪಿಸಲಾಗುವುದು. ಅಲ್ಲಿ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

‘ಒಂದು ಆಮ್ಲಜನಕ ಘಟಕವನ್ನು ₹ 1 ಕೋಟಿ ವೆಚ್ಚದಲ್ಲಿ ಸ್ಥಾಪಿಸುವ ಸಲುವಾಗಿ ಕೆಲಸ ಮಾಡುತ್ತಿದ್ದೇವೆ. 50 ಹಾಸಿಗೆಗಳಿಗೆ ಬೇಕಾಗುವ ಆಮ್ಲಜನಕವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ಪಾದನೆ ಮಾಡುವ ಘಟಕ ನಿರ್ಮಾಣದ ಕೆಲಸ ಆರಂಭವಾಗಿದೆ. ಇಲ್ಲಿಗೆ ರೆಮ್‌ಡಿಸಿವಿರ್‌ ಚುಚ್ಚುಮದ್ದುಗಳ ಕೊರತೆ ಆಗದಂತೆ ನಾನೇ ಖುದ್ದು ನಿಗಾ ವಹಿಸಿದ್ದೇನೆ’ ಎಂದರು.

ತಹಶೀಲ್ದಾರ್‌ ದುಂಡಪ್ಪ ಕೋಮಾರ ತಾಲ್ಲೂಕು ಆಡಳಿತದ ಪರವಾಗಿ ಸಾಮಗ್ರಿಗಳನ್ನು ಪಡೆದುಕೊಂಡರು. ಸಮಾಜ ಕಲ್ಯಾಣಾಧಿಕಾರಿ ಪ್ರವೀಣ ಪಾಟೀಲ, ಗ್ರೇಡ್–2 ತಹಶೀಲ್ದಾರ್‌ ಮಹಾದೇವ ಬಿರಾದರ, ಗ್ರಾಮ ಲೆಕ್ಕಾಧಿಕಾರಿ ಎಂ.ಎಂ. ಮಿರ್ಜಿ, ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಆರ್. ಘೂಳಪ್ಪನ್ನವರ, ಶ್ರೀಶೈಲ ನಾಯಕ, ಅರುಣ ಭಾಸಿಂಗಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.