ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌–3 ವಾಹನಗಳ ನೋಂದಣಿ ಮಾಡಿಸಿಕೊಳ್ಳಲು ಸೂಚನೆ

ಮಾರ್ಚ್‌ 31ಕ್ಕಿಂತ ಮುಂಚೆ ಖರೀದಿಸಿದ್ದ ವಾಹನಗಳು;
Last Updated 10 ಸೆಪ್ಟೆಂಬರ್ 2018, 13:52 IST
ಅಕ್ಷರ ಗಾತ್ರ

ಬೆಳಗಾವಿ:ಮಾರ್ಚ್‌ 31ಕ್ಕಿಂತ ಮುಂಚೆ ಖರೀದಿಸಿದ್ದ ಬಿಎಸ್‌– 3 ವಾಹನಗಳನ್ನು ಯಾರಾದರೂ ಆರ್‌ಟಿಒ ಕಚೇರಿಯಲ್ಲಿ ನೋಂದಣಿ ಮಾಡಿಸಿರದಿದ್ದರೆ ಇದೇ 15ರೊಳಗಾಗಿ ಮಾಡಿಸಿಕೊಳ್ಳಬೇಕು ಎಂದು ಉಪಸಾರಿಗೆ ಆಯುಕ್ತ ಶಿವಾನಂದ ಮಗುದುಮ್ಮ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಪ್ರಿಲ್‌ 1ರಿಂದ ಬಿಎಸ್‌–3 ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ. ಇದಕ್ಕಿಂತ ಮುಂಚೆ ಯಾರಾದರೂ ಇಂತಹ ವಾಹನಗಳನ್ನು ಖರೀದಿಸಿದ್ದು, ನೋಂದಣಿ ಮಾಡಿಸಿರದವರಿಗೆ ಇದು ಕೊನೆಯ ಅವಕಾಶ’ ಎಂದು ಎಚ್ಚರಿಸಿದರು.

‘ಕಚೇರಿಯಲ್ಲಿ ಇದೇ 21ರಿಂದ ವಾಹನ– 4 ಸಾಫ್ಟ್‌ವೇರ್‌ ಅಳವಡಿಸಲಾಗುತ್ತದೆ. ಈ ಸಾಫ್ಟ್‌ವೇರ್‌ನಲ್ಲಿ ಬಿಎಸ್‌–3 ವಾಹನಗಳ ನೋಂದಣಿ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಹೊಸ ಸಾಫ್ಟ್‌ವೇರ್‌ ಕಾರ್ಯಾರಂಭ ಮಾಡುವುದರೊಳಗೆ ಬಾಕಿ ಉಳಿದಿರುವ ವಾಹನಗಳ ನೋಂದಣಿ ಪೂರ್ಣಗೊಳ್ಳಲಿ ಎನ್ನುವ ಉದ್ದೇಶ ನಮಗಿದೆ’ ಎಂದು ತಿಳಿಸಿದರು.

ವಾಹನ ವಶಕ್ಕೆ

ನಿಗದಿತ ಸಮಯದೊಳಗೆ ನೋಂದಣಿ ಮಾಡಿಸಿಕೊಳ್ಳದೇ ಇದ್ದರೆ ಇಂತಹ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಹಾಗೂ ಅವುಗಳನ್ನು ಗುಜರಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೊಸ ಸಾಫ್ಟ್‌ವೇರ್‌ ಅಳವಡಿಸುವ ಉದ್ದೇಶದಿಂದ ಇದೇ 15ರಿಂದ ಒಂದು ವಾರಗಳ ಕಾಲ ಆನ್‌ಲೈನ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ನಂತರ ಹೊಸ ಸಾಫ್ಟ್‌ವೇರ್‌ ವಾಹನ– 4 ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

ಆಟೊಗಳ ವಿರುದ್ಧ ಕ್ರಮ: ಪ್ರಯಾಣ ದರ ಮೀಟರ್‌ ಹಾಕದೇ ಓಡಿಸುತ್ತಿರುವ ಆಟೊಗಳ ವಿರುದ್ಧ ಪ್ರತಿದಿನ ಪ್ರಕರಣ ದಾಖಲಿಸಲಾಗುತ್ತಿದೆ. ಚಾಲಕರು ದಂಡ ಕಟ್ಟಿಹೋಗುತ್ತಿದ್ದಾರೆ, ಆದರೆ ಮೀಟರ್‌ ಅಳವಡಿಸಿಕೊಳ್ಳುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ವಾಹನ ಸವಾರರ ಮನೋಭಾವ ಬದಲಾಗಬೇಕಾಗಿದೆ. ಸಂಚಾರ ನಿಯಮಗಳು ನಮ್ಮ ಸುರಕ್ಷತೆಗಾಗಿ ಇವೆ. ಅವುಗಳನ್ನು ಪಾಲಿಸಬೇಕು ಎನ್ನುವ ಭಾವನೆ ಬರಬೇಕು. ಅಂದಾಗ ಮಾತ್ರ ಸುಧಾರಣೆ ಕಾಣಲು ಸಾಧ್ಯ ಎಂದು ಹೇಳಿದರು.

ರಿಂಗ್‌ ರಸ್ತೆ; ಹೊರ ವರ್ತುಲ (ರಿಂಗ್‌) ರಸ್ತೆ ಇಲ್ಲದ ಕಾರಣಕ್ಕಾಗಿ ಟ್ರಕ್‌ ಸೇರಿದಂತೆ ಭಾರಿ ವಾಹನಗಳು ನಗರದೊಳಗೆ ಸಂಚರಿಸುತ್ತಿವೆ. ಹೊರ ವರ್ತುಲ ರಸ್ತೆ ನಿರ್ಮಾಣ ಮಾಡುವ ಯೋಜನೆ ಸರ್ಕಾರದ ಮುಂದೆ ಇದೆ. ಇದು ನಿರ್ಮಾಣವಾದರೆ ಭಾರಿ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಕಚೇರಿ ಸೂಪರಿಟೆಂಡೆಂಟ್‌ ಶರಣಪ್ಪ ಹುಗ್ಗಿ, ಅಕೌಂಟ್‌ ಸೂಪರಿಟೆಂಡೆಂಟ್‌ ಬಿ.ಎಸ್‌. ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT