ಬೆಳಗಾವಿ: ‘ಮಹಾರಾಷ್ಟ್ರದ ಜತ್ತ ತಾಲ್ಲೂಕಿನ 50 ಹಳ್ಳಿಗಳ ನಿವಾಸಿಗಳಿಗೆ ಕುಡಿಯುವ ನೀರು ಮತ್ತು ಇತರೆ ಮೂಲಸೌಕರ್ಯ ಒದಗಿಸಬೇಕು. ತಾವೇ ಖುದ್ದಾಗಿ ಅಲ್ಲಿಗೆ ಭೇಟಿ ಕೊಡಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
‘ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿರುವ ಮಹಾರಾಷ್ಟ್ರದ 50 ಹಳ್ಳಿಗಳ ಜನರಿಗೆ ಕುಡಿಯುವ ನೀರು ಒದಗಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ. ಅವರ ಹೋರಾಟಕ್ಕೆ ಮಣಿದ ಸರ್ಕಾರ, ಮೈಶಾಳ ಏತ ನೀರಾವರಿ ಯೋಜನೆ ಮೂಲಕ ಕುಡಿಯುವ ನೀರಿನ ಸೌಕರ್ಯ ಒದಗಿಸುವುದಾಗಿ ಭರವಸೆ ಕೊಟ್ಟಿತ್ತು. ಇದಕ್ಕಾಗಿ ₹2 ಸಾವಿರ ಕೋಟಿ ಮೀಸಲಿಡುವುದಾಗಿ ತಿಳಿಸಿತ್ತು. ಆದರೆ, ಈವರೆಗೂ ಬೇಡಿಕೆ ಈಡೇರದ್ದರಿಂದ ಈ ಗ್ರಾಮಗಳ ಜನರು ಆಗಸ್ಟ್ 25ರಂದು ಅಹಮದ್‌ನಗರ- ವಿಜಯಪುರ ರಸ್ತೆ ತಡೆದು, ತಮ್ಮ ಹೋರಾಟ ತೀವ್ರಗೊಳಿಸಲು ಯೋಜಿಸಿದ್ದಾರೆ. ಸರ್ಕಾರ ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಹೊರನಾಡ ಕನ್ನಡಿಗರು ಕರ್ನಾಟಕ ಏಕೀಕರಣ ಸಮಿತಿ ರಚಿಸಲು ಸಿದ್ಧತೆ ನಡೆಸಿದ್ದಾರೆ. ಕರ್ನಾಟಕಕ್ಕೆ ಸೇರಲು ಒಲವು ವ್ಯಕ್ತಪಡಿಸಿದ್ದಾರೆ. ನಾವು ಅವರ ಹೋರಾಟ ಬೆಂಬಲಿಸುತ್ತೇವೆ. ಕನ್ನಡ ಭಾಷಿಕರ ಬಗ್ಗೆ ಮಹಾರಾಷ್ಟ್ರದ ಮಲತಾಯಿ ಧೋರಣೆ ಮುಂದುವರಿಸಿದರೆ, ಕನ್ನಡ ಸಂಘಟನೆಗಳು ಸಹಿಸುವುದಿಲ್ಲ. ನಾವು ಮಹಾರಾಷ್ಟ್ರ ಪ್ರವೇಶಿಸಿ, ನಿಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.