ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ತೆಲಂಗಾಣ ಮಾದರಿಯಲ್ಲಿ ಸಾಲ ಮನ್ನಾ ಮಾಡಲು ಆಗ್ರಹ

Published 12 ಫೆಬ್ರುವರಿ 2024, 13:17 IST
Last Updated 12 ಫೆಬ್ರುವರಿ 2024, 13:17 IST
ಅಕ್ಷರ ಗಾತ್ರ

ಬೆಳಗಾವಿ: ‘ತೆಲಂಗಾಣ ಮಾದರಿಯಲ್ಲಿ ಕರ್ನಾಟಕದಲ್ಲೂ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿ ನೇಗಿಲಯೋಗಿ ರೈತ ಸೇವಾ ಸಂಘದ ನೇತೃತ್ವದಲ್ಲಿ ರೈತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಲು ಯತ್ನಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆ ತಡೆದ ರೈತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅವರನ್ನು ತಡೆಯಲು ಮುಂದಾದ ಪೊಲೀಸರ ಮತ್ತು ಕೃಷಿಕರ ಮಧ್ಯೆ ವಾಗ್ವಾದ ನಡೆಯಿತು. ಪೊಲೀಸ್‌ ಅಧಿಕಾರಿಗಳು ರೈತರ ಮನವೊಲಿಕೆಗೆ ಯತ್ನಿಸಿದರು.

‘ಕೃಷಿ ಸಾಲ ನೀತಿ ಬದಲಾಗಬೇಕು. ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಡ್ಡಿ ರಹಿತ ಸಾಲ ಸೌಕರ್ಯ ಒದಗಿಸಬೇಕು. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿಯಲ್ಲಿ ಮಾಡುವ ಮೋಸ ತಪ್ಪಿಸಲು ವೈಜ್ಞಾನಿಕವಾದ ಮಾನದಂಡ ಅಳವಡಿಸಬೇಕು. ಕೃಷಿಗೆ ಬಳಸಲಾಗುವ ಕೀಟನಾಶಕ, ರಸಗೊಬ್ಬರ, ಹನಿ ನೀರಾವರಿ ಪದ್ಧತಿ ಉಪಕರಣಗಳು ಮತ್ತು ಟ್ರ್ಯಾಕ್ಟರ್‌ಗಳ ಬಿಡಿಭಾಗಗಳಿಗೆ ಜಿಎಸ್‌ಟಿ ವಿಧಿಸುತ್ತಿರುವುದನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

‘ಖಾನಾಪುರ ತಾಲ್ಲೂಕು 210 ಗ್ರಾಮ ಮತ್ತು 51 ಗ್ರಾಮ ಪಂಚಾಯ್ತಿ ಹೊಂದಿದೆ. ಇಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿ ಬತ್ತಿಹೋಗಿವೆ. ಜನ–ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಮಹಾರಾಷ್ಟ್ರ ಮತ್ತು ಗೋವಾ ಗಡಿಗೆ ಹೊಂದಿಕೊಂಡ ಈ ತಾಲ್ಲೂಕು ಎಲ್ಲ ಸರ್ಕಾರಗಳ ಅವಧಿಯಲ್ಲೂ ಕಡೆಗಣನೆಗೆ ಒಳಗಾಗಿದೆ. ಇಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕು. ಸಮರ್ಪಕ ಬಸ್‌ ಸೌಕರ್ಯ ಕಲ್ಪಿಸುವುದಕ್ಕಾಗಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು’ ಎಂದು ಆಗ್ರಹಿಸಿದರು.

ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ ಅವರಿಗೆ ಮನವಿ ಸಲ್ಲಿಸಿದರು. ಸಂಘದ ರಾಜ್ಯ ಘಟಕದ ಅಧ್ಯಕ್ಷ ಆರ್‌.ಬಿ.ಪಾಟೀಲ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT