ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಎಫ್‌ಆರ್‌‍ಪಿ ವೈಜ್ಞಾನಿಕ ನಿಗದಿಗೆ ಆಗ್ರಹ

ಸೊಗಲದಲ್ಲಿ ಕಬ್ಬು ಬೆಳೆಗಾರರ ಕಾರ್ಯಾಗಾರ
Last Updated 31 ಜನವರಿ 2022, 16:15 IST
ಅಕ್ಷರ ಗಾತ್ರ

ಬೆಳಗಾವಿ: ‘ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಪ್ರಮಾಣ ಕಡಿಮೆ ತೋರಿಸುತ್ತಿರುವುದು ಮತ್ತು ಹಿಂದಿನ ವರ್ಷದ ಇಳುವರಿ ಪರಿಗಣಿಸಿ ಎಫ್‌ಆರ್‌ಪಿ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ಬೆಲೆ) ನೀಡುತ್ತಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದ್ದು, ಆ ಮಾನದಂಡ ಬದಲಿಸಬೇಕು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದರು.

ಜಿಲ್ಲೆಯ ಸವದತ್ತಿ ತಾಲ್ಲೂಕಿನ ‌ಶ್ರೀಕ್ಷೇತ್ರ ಸೊಗಲದಲ್ಲಿ ಸೋಮವಾರ ನಡೆದ ಕಬ್ಬು ಬೆಳೆಗಾರರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಬ್ಬು ವಿಳಂಬವಾಗಿ ಕಟಾವು ಮಾಡುವುದು, ರೈತರಿಂದಲೇ ಕಟಾವು ಕೂಲಿ ಪಡೆಯುವುದು, ಕಾರ್ಮಿಕರು ಹೆಚ್ಚಿನ ಲಗಾಣಿಗಾಗಿ ಒತ್ತಾಯಿಸುವುದನ್ನು ತಪ್ಪಿಸಲು ಎಫ್‌ಆರ್‌ಪಿಯನ್ನು ರೈತರ ಜಮೀನಿನಲ್ಲಿನ ದರ ಎಂದು ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಆಕಸ್ಮಿಕ ಬೆಂಕಿಗೆ, ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಸುಟ್ಟು ಹೋಗುವ ಕಬ್ಬು ಕಾರ್ಖಾನೆಗೆ ಸರಬರಾಜಾದಾಗ ಶೇ 25ರಷ್ಟು ಕಡಿತಗೊಳಿಸಿ ಹಣ ಕೊಡುವ ಮೂಲಕ ರೈತರನ್ನು ವಂಚಿಸಲಾಗುತ್ತಿದೆ. ಈ ನಿಯಮ ರದ್ದುಗೊಳಿಸಬೇಕು. ನೀರಿನ ಬಳಕೆ, ವ್ಯವಸಾಯದ ಶ್ರಮ ಕಡಿಮೆ ಮಾಡಲು ಮತ್ತು ಇಳುವರಿ ಹೆಚ್ಚಿಸಲು ಕಬ್ಬು ಬೆಳೆಗೆ ಹನಿ ನೀರಾವರಿ ಅಳವಡಿಸುವ ರೈತರಿಗೆ ಹಿಂದಿನ ಪದ್ಧತಿಯಂತೆ ಶೇ 90ರಷ್ಟು ಸಹಾಯಧನ ಕೊಡುವ ಪದ್ಧತಿ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

‘ಎಲ್ಲ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬನ್ನು ಕಡ್ಡಾಯವಾಗಿ ಜೇಷ್ಠತೆ ಆಧಾರದಲ್ಲಿ ಕಟಾವು ಮಾಡಿ ನುರಿಸುವಂತೆ ಸರ್ಕಾರ ನಿರ್ದೇಶನ ನೀಡಬೇಕು. ಉಲ್ಲಂಘಿಸುವ ಕಾರ್ಖಾನೆಗೆ ದಂಡ ವಿಧಿಸುವ ಕಾನೂನು ಜಾರಿಯಾಗಬೇಕು. ರೈತರಿಗೆ ಕಬ್ಬಿನ ಹಣ ವಿಳಂಬವಾಗಿ ಪಾವತಿಸುವ ಕಾರ್ಖಾನೆಗಳು ಶೇ 15ರಷ್ಟು ಬಡ್ಡಿ ಸೇರಿಸಿ ಕೊಡುವಂತೆ ಕಠಿಣ ಆದೇಶ ಹೂರಡಿಸಬೇಕು. ಕಬ್ಬಿನಿಂದ ಉತ್ಪಾದಿಸುವ ಎಥೆನಾಲ್‌ನಿಂದ ಬರುವ ಲಾಭವನ್ನು ಕಬ್ಬು ಪೂರೈಸಿದ ರೈತರಿಗೆ ಹಂಚಿಕೆ ಮಾಡುವ ನಿಯಮ ಜಾರಿಗೆ ಬರಬೇಕು’ ಎಂದು ಒತ್ತಾಯಿಸಿದರು.

ಕಬ್ಬು ಬೇಸಾಯ ಪರಿಣತ ಡಾ.ಆರ್.ಬಿ. ಖಾಂಡಗಾವಿ, ಸಮಗ್ರ ಕೃಷಿ ಪಂಡಿತ ಎಸ್.ಟಿ. ಪಾಟೀಲ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ.ಸಂಜಯ ಪಾಟೀಲ ಮಾತನಾಡಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಸುರೇಶ ಪಾಟೀಲ, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಗುರುಸಿದ್ದಪ್ಪ ಕೋಟಗಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಸಿದ್ನಾಳ, ಮಾರುತಿ ನಲವಾಡೆ, ರಮೇಶ ಹಿರೇಮಠ ಪಾಲ್ಗೊಂಡಿದ್ದರು.

ಬಾಧೆ ತಪ್ಪಿಸಬೇಕು

ಕಬ್ಬು ಬೆಳೆಗೆ ಗೊಣ್ಣೆಹುಳು ಬಾಧೆ ತಪ್ಪಿಸಲು ವಿಶ್ವವಿದ್ಯಾಲಯಗಳು ಸಂಶೋಧನೆ ನಡೆಸಲು ಗಂಭೀರವಾಗಿ ಚಿಂತಿಸಬೇಕು.

–ಕುರುಬೂರು ಶಾಂತಕುಮಾರ್, ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT