ಶುಕ್ರವಾರ, ಜೂನ್ 18, 2021
28 °C

ಹಂದಿಗುಂದ: ಪ್ರಾಥಮಿಕ ಆರೋಗ್ಯ ಕೇಂದ್ರ ಆಗುವುದು ಯಾವಾಗ?

ಎಸ್.ಎಸ್. ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಹಂದಿಗುಂದ (ಬೆಳಗಾವಿ ಜಿಲ್ಲೆ): ಇಲ್ಲಿ ಸಂಚಾರಿ ಆರೋಗ್ಯ ಘಟಕವಿದ್ದು, ಅದನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಕೂಗಿಗೆ ಮನ್ನಣೆ ಸಿಕ್ಕಿಲ್ಲ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಾದರೂ ಸೌಲಭ್ಯಗಳನ್ನು ಕಲ್ಪಿಸಿ ರೋಗಿಗಳಿಗೆ ನೆರವಾಗಬೇಕು ಎಂಬ ಆಗ್ರಹ ಕೇಳಿಬಂದಿದೆ.

ಜಿಲ್ಲಾ ‍ಪಂಚಾಯಿತಿ ಮಾಜಿ ಸದಸ್ಯ ರಾಮನಗೌಡ ಪಾಟೀಲ ಅವರ ಪ್ರಯತ್ನದಿಂದ ಘಟಕ ಸ್ಥಾಪನೆಯಾಗಿದೆ. 10 ವರ್ಷಗಳಿಂದಲೂ ಮೇಲ್ದರ್ಜೇಗೆ ಏರದೆ ಜನರಿಗೆ ಹೆಚ್ಚಿನ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಹೋದ ವರ್ಷ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ₹ 1 ಲಕ್ಷ ವಂತಿಕೆಯನ್ನು ಆರೋಗ್ಯ ಇಲಾಖೆಗೆ ಠೇವಣಿಯಾಗಿ ನೀಡಿ, ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಕ್ರಮ ಕೈಗೊಳ್ಳದಿರುವುದು ಇಲ್ಲಿನವರ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಈ ಆರೋಗ್ಯ ಕೇಂದ್ರದಲ್ಲಿ ಫಾರ್ಮಸಿಸ್ಟ್, ದ್ವಿತೀಯ ದರ್ಜೆ ಸಹಾಯಕ ಹಾಗೂ ಡಿ ಗ್ರೂಪ್‌ ನೌಕರ ಇದ್ದಾರೆ. ವೈದ್ಯಾಧಿಕಾರಿ, ಕಿರಿಯ ಆರೋಗ್ಯ ಮಹಿಳಾ ಸಹಾಯಕಿ, ಕಿರಿಯ ಆರೋಗ್ಯ ಪುರುಷ ಸಹಾಯಕ, ಆಂಬುಲೆನ್ಸ್ ಚಾಲಕ ಹುದ್ದೆಗಳು ಖಾಲಿ ಇವೆ. ಗಾಯರಾಣ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ 2 ಎಕರೆ ಜಮೀನು ಮಂಜೂರಾತಿಗಾಗಿ ತಹಶೀಲ್ದಾರ್‌ ಮೂಲಕ ಕಂದಾಯ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪಿಡಿಒ ಸವಿತಾ ಚಿನಗುಂಡಿ ಹಾಗೂ ಗ್ರಾ.ಪಂ. ಅಧ್ಯಕ್ಷ ಶ್ರೀಶೈಲ ಪಾಟೀಲ ತಿಳಿಸಿದರು.

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಆಯುಕ್ತರಿಗೆ 2019ರಲ್ಲೇ ಮನವಿ ಸಲ್ಲಿಸಲಾಗಿದೆ. ಅದರಿಂದ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಮೇ 13ರಂದು ಮನವಿ ಸಲ್ಲಿಸಲಾಗುವುದು. ದಿನದ 24 ಗಂಟೆಯೂ ಆರೋಗ್ಯ ಸೇವೆ ಸಿಕ್ಕರೆ ಈ ಭಾಗದ ಜನರಿಗೆ ಬಹಳ ಅನುಕೂಲವಾಗಲಿದೆ’ ಎಂದು ಮುಖಂಡ ರಾಮನಗೌಡ ಪಾಟೀಲ ತಿಳಿಸಿದರು.

‘ಜನರ ಅಪೇಕ್ಷೆಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಆಗಲಿದೆ. ಶಾಸಕರ ಪ್ರಯತ್ನದಿಂದ ಬೇಡಿಕೆ ಈಡೇರುವುದು ಖಚಿತ’ ಎಂದು ಬಿಜೆಪಿ ಕುಡಚಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು