ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ವಿತರಣೆಗೆ ‘ಸರ್ವರ್’ ಅಡ್ಡಿ

4 ತಿಂಗಳ ಬಾಕಿ ಕಮಿಷನ್ ಬಿಡುಗಡೆಗೆ ಆಗ್ರಹ
Last Updated 21 ಸೆಪ್ಟೆಂಬರ್ 2021, 14:03 IST
ಅಕ್ಷರ ಗಾತ್ರ

ಬೆಳಗಾವಿ: ‘ಪಡಿತರ ಸಮರ್ಪಕ ವಿತರಣೆಗೆ ತೊಡಕಾಗಿರುವ ಸರ್ವರ್‌ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು’ ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಸದಸ್ಯರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

‘20 ದಿನಗಳಿಂದಲೂ ಸಮಸ್ಯೆ ಕಾಡುತ್ತಿದೆ. ಆರು ದಿನಗಳಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಇದರಿಂದ ಅಂಗಡಿಕಾರರು ಹಾಗೂ ಪಡಿತರ ಚೀಟಿದಾರರು ತೊಂದರೆ ಅನುಭವಿಸುವಂತಾಗಿದೆ’ ಎಂದು ತಿಳಿಸಿದರು.

‘ಸೆ.1ರಿಂದ 15ವರೆಗೆ ಇ–ಕೆವೈಸಿ (ಪಡಿತರ ಚೀಟಿಯಲ್ಲಿ ಹೆಸರಿರುವ ಸದಸ್ಯರ ಬೆರಳಚ್ಚು ಮೊದಲಾದ ಮಾಹಿತಿ ಸಂಗ್ರಹಿಸುವುದು) ಮಾಡುವ ಪ್ರಕ್ರಿಯೆ ನಡೆಸುವಂತೆ ಸರ್ಕಾರದಿಂದ ಸೂಚಿಸಲಾಗಿತ್ತು. ಆಗಲೂ ಸರ್ವರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಸೆ.16ರಿಂದ ತಿಂಗಳ ಕೊನೆವರೆಗೆ ಪಡಿತರ ವಿತರಣೆಗೆ ಅವಕಾಶ ಕೊಡಲಾಗಿದೆ. ಇದರಿಂದಾಗಿ ಬಹಳಷ್ಟು ಮಂದಿ ಬರುತ್ತಿದ್ದಾರೆ. ಆದರೆ, ನಿಗದಿತ ತಂತ್ರಾಂಶದ ಸರ್ವರ್‌ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ವಿತರಣೆ ಕಾರ್ಯಕ್ಕೆ ತೊಡಕಾಗಿದೆ. ನಗರದಲ್ಲಿ ಶೇ 30ರಿಂದ 40ರಷ್ಟು ಮಂದಿಗೆ ಮಾತ್ರವೇ ಪಡಿತರ ನೀಡಲಾಗಿದೆ. ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲರಿಗೂ ವಿತರಿಸಬೇಕಾದರೆ ಸರ್ವರ್‌ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

ಪರದಾಟ:‘ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಪಡಿತರ ಚೀಟಿದಾರರು, ಪಡಿತರ ಪಡೆಯುವುದಕ್ಕೆ ತಾಂತ್ರಿಕ ಸಮಸ್ಯೆಯಿಂದಾಗಿ ಪರದಾಡುವ ಸ್ಥಿತಿಯು ಎದುರಾಗಿದೆ. ಕೆಲಸ, ಕೂಲಿ ಬಿಟ್ಟು ಅಂಗಡಿಗಳ ಬಳಿ ಕಾಯಬೇಕಾಗಿದೆ. ಈ ಕಾರಣಕ್ಕಾಗಿಯೇ ಅವರು ಅಂಗಡಿಯವರ ಮೇಲೆ ಜಗಳ ತೆಗೆಯುವ ಸಾಧ್ಯತೆಯೂ ಇದೆ. ಜನರಿಗೆ ಅನುಕೂಲ ಆಗಲೆಂದು ನಾವು ಕೋವಿಡ್ ಭೀತಿಯ ನಡುವೆಯೂ ಕೆಲಸ ಮಾಡುತ್ತಿದ್ದೇವೆ. ಈ ನಡುವೆ, ಸರ್ವರ್‌ ಕೈಕೊಡುತ್ತಿರುವುದು ವಿತರಣೆ ಪ್ರಕ್ರಿಯೆಗೆ ಅಡಚಣೆಯಾಗಿ ಪರಿಣಮಿಸಿದೆ’ ಎಂದು ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜಶೇಖರ ತಳವಾರ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 1,730 ನ್ಯಾಯಬೆಲೆ ಅಂಗಡಿಗಳಿವೆ. ನಮಗೆ ಮಾರ್ಚ್‌, ಜೂನ್, ಜುಲೈ ಹಾಗೂ ಆಗಸ್ಟ್‌ ತಿಂಗಳ ಕಮಿಷನ್‌ ಅನ್ನು ಸರ್ಕಾರ ಈವರೆಗೂ ನೀಡಿಲ್ಲ. ಇದರಿಂದ ನಾವೂ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಸಾಲ ಮಾಡಿ ಅಂಗಡಿ ನಿರ್ವಹಣೆ ಮಾಡಬೇಕಾದ ಸ್ಥಿತಿ ಇದೆ. ಅಂಗಡಿಗಳ ಬಾಡಿಗೆ, ಕೆಲಸದವರಿಗೆ ಸಂಬಳ, ವಿದ್ಯುತ್‌ ಬಿಲ್ ಮೊದಲಾದವುಗಳಿಗೆ ಹಣ ಹೊಂದಿಸಲು ಪರದಾಡುತ್ತಿದ್ದೇವೆ. ಹೀಗಾಗಿ, ಕೂಡಲೇ ಬಾಕಿ ಕಮಿಷನ್‌ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಅಂಗಡಿಯೊಂದರ ವ್ಯಾಪ್ತಿಯಲ್ಲಿ ಸರಾಸರಿ 500 ಪಡಿತರ ಚೀಟಿಗಳಿದ್ದರೆ ಹಾಗೂ ಪಡಿತರ ವಿತರಿಸಿದರೆ (ತಿಂಗಳಲ್ಲಿ) ಸರಾಸರಿ ₹ 7,500 ಕಮಿಷನ್ ಬರಬೇಕಾಗುತ್ತದೆ. ಹೆಚ್ಚು ಚೀಟಿಗಳಿದ್ದರೆ ಪ್ರಮಾಣ ಜಾಸ್ತಿಯಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಕಮಿಷನ್ ಬಾಕಿ ಇದ್ದರೆ ನಿರ್ವಹಣೆ ಮಾಡುವುದು ಹೇಗೆ ಎನ್ನುವುದು ನಮ್ಮ ಪ್ರಶ್ನೆಯಾಗಿದೆ. ಅನುದಾನ ಬಿಡುಗಡೆಯಲ್ಲಿ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ನಮಗೆ ಅನುಕೂಲ ಮಾಡಿಕೊಡಬೇಕು’ ಎಂದು ಕೋರುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT