ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಹೆಚ್ಚಿದ ಡೆಂಗಿ ಹಾವಳಿ, ಆಸ್ಪತ್ರೆಗಳು ಫುಲ್ -ಹೈರಾಣಾದ ಜನರು

Last Updated 18 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಅಥಣಿ: ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಡೆಂಗಿ ಜ್ವರದ ಹಾವಳಿ ಹೆಚ್ಚಾಗಿದ್ದು, ಜನರನ್ನು ಹೈರಾಣಾಗಿಸುತ್ತಿದೆ.

ಎರಡೂವರೆ ತಿಂಗಳುಗಳಿಂದ ಪ್ರವಾಹದಿಂದ ಸಂತ್ರಸ್ತರಾಗಿರುವ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿದ್ದು, ಹಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ನೆರೆ ಇಳಿದ ನಂತರ ಚರಂಡಿಗಳಲ್ಲಿ ತ್ಯಾಜ್ಯ, ಮಲಿನ ನೀರು ತುಂಬಿದೆ. ಹೀಗಾಗಿ, ಸೊಳ್ಳೆಗಳ ಉತ್ಪಾದನೆಯೂ ಹೆಚ್ಚಾಗುತ್ತಿದೆ. ಇದನ್ನು ತಡೆಯುವಲ್ಲಿ ಸ್ಥಳೀಯ ಸಂಸ್ಥೆಯವರು ವಿಫಲವಾಗಿದ್ದಾರೆ.

ಎಚ್ಚೆತ್ತುಕೊಳ್ಳದ ಇಲಾಖೆಗಳು:ಪಟ್ಟಣದಲ್ಲಿ ವಾರದ ಅವಧಿಯಲ್ಲಿ ಶಂಕಿತ ಡೆಂಗಿಯಿಂದ ಇಬ್ಬರು ಮೃತಪಟ್ಟ ವರದಿಯಾಗಿದೆ. ಆದರೆ, ಸಂಬಂಧಿಸಿದ ಆರೋಗ್ಯಇಲಾಖೆ, ಪುರಸಭೆ ಹಾಗೂ ಪಂಚಾಯ್ತಿಗಳು ಸ್ವಚ್ಛತೆ, ಜಾಗೃತಿಗೆ ಸಂಬಂಧಿಸಿದಂತೆ ಎಚ್ಚೆತ್ತುಕೊಂಡಿಲ್ಲ. ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿಲ್ಲ. ಪರಿಣಾಮ ರೋಗ ಉಲ್ಬಣಿಸುತ್ತಿದೆ. ಇದು ಜನರ ಅಕ್ರೋಶಕ್ಕೆ ಕಾರಣವಾಗಿದೆ.

‘ವಿಕ್ರಂಪುರ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ನಮ್ಮ ಬಡಾವಣೆಯೊಂದರಲ್ಲೇ 40ಕ್ಕೂ ಹೆಚ್ಚು ಮಂದಿ ಡೆಂಗಿ ಜ್ವರದಿಂದ ಬಳಲುತ್ತಿದ್ದಾರೆ. ನಮ್ಮ ಮನೆಯಲ್ಲೂ ಮೂವರಿಗೆ ಜ್ವರ ಬಂದಿದೆ’ ಎಂದು ಖಾಸಗಿ ವೈದ್ಯ ಎನ್.ಎನ್. ಅಸ್ಕಿ ತಿಳಿಸಿದರು.

ನಡೆಯದ ಸ್ವಚ್ಛತೆ ಕಾರ್ಯ:ಸರ್ಕಾರಿ ಆಸ್ಪತ್ರೆ ಸುತ್ತಮುತ್ತ, ಚರ್ಮಾಲಯ, ಲಿಡ್ಕರ್‌ ಕಾಲೊನಿ, ಮರಾಠ ಗಲ್ಲಿ, ಗಸ್ತೆ ಪಾಲ್ಟ, ಶಂಕರ ನಗರ, ವಿಕ್ರಂಪುರ ಮೊದಲಾದ ವಾರ್ಡ್‌ಗಳಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ‌ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೀರಜ್‌ ಹಾಗೂ ಬೆಳಗಾವಿ ಆಸ್ಪತ್ರೆಗಳತ್ತ ರೋಗಿಗಳು ಹೋಗುತ್ತಿರುವುದು ಸಾಮಾನ್ಯವಾಗಿದೆ.

ಪಟ್ಟಣದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಇದೆ. ಆದರೆ, ವೈದ್ಯರು ಮತ್ತು ಸಿಬ್ಬಂದಿ ಸಕಾಲಕ್ಕೆ ಬರುವುದಿಲ್ಲ. ಸೌಲಭ್ಯ ಹಾಗೂ ಔಷಧಿಗಳ ಕೊರತೆಯೂ ಇದೆ. ಹೀಗಾಗಿ, ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಸಾಮಾನ್ಯವಾಗಿದೆ ಎನ್ನಲಾಗುತ್ತಿದೆ.

ಪುರಸಭೆ ಮತ್ತು ಪಂಚಾಯ್ತಿಗಳು ಸ್ವಚ್ಛತೆ ಕಡೆಗಣಿಸಿವೆ. ಹೀಗಾಗಿ, ಜನರ ಆರೋಗ್ಯ ಹದಗೆಡುತ್ತಿದೆ. ಕೂಡಲೇ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಕಸ ವಿಲೇವಾರಿಗೆ ತುರ್ತು ಕ್ರಮ ಕೈಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

‘ಪಟ್ಟಣದ ಎಲ್ಲ ರಸ್ತೆಗಳಲ್ಲೂ ನಿತ್ಯ ಸ್ವಚ್ಛತೆ ಮಾಡಿಸುತ್ತಿದ್ದೇವೆ. ಡಿಡಿಟಿ ಫೌಡರ್ ಕೂಡ ಹಾಕಿಸಿದ್ದೇವೆ. ಅಗತ್ಯವಿದಲ್ಲಿ ಪಾಗಿಂಗ್ ಮಾಡಲಾಗಿದೆ. ಜನರು, ನೀರನ್ನು ಕಾಯಿಸಿ, ಆರಿಸಿ ಕುಡಿಯಬೇಕು. ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಡೆಂಗಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಮಾಹಿತಿ ಬಂದಿದೆ. ಆರೋಗ್ಯ ಇಲಾಖೆ ಜೊತೆ ಚರ್ಚಿಸಿ ಜನರಿಗೆ ತಿಳಿವಳಿಕೆ ಮೂಡಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT