ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಶ್ರೀಧರ ಮಾಳಗಿ ಸಾಧನೆಗೆ ತೊಡಕಾದ ಆರ್ಥಿಕ ಮುಗ್ಗಟ್ಟು

Published 25 ನವೆಂಬರ್ 2023, 4:18 IST
Last Updated 25 ನವೆಂಬರ್ 2023, 4:18 IST
ಅಕ್ಷರ ಗಾತ್ರ

ಬೆಳಗಾವಿ: 6 ವರ್ಷದ ಬಾಲಕನಿದ್ದಾಗ ಅಪಘಾತದಲ್ಲಿ ಒಂದು ಕೈ ಕಳೆದುಕೊಂಡರೂ ಕುಗ್ಗದ ಇಲ್ಲಿನ ಅಂಗವಿಕಲ ಈಜುಪಟು ಶ್ರೀಧರ ಮಾಳಗಿ, ಒಂದೇ ಕೈಯಿಂದ ಈಜುತ್ತಲೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಆದರೆ, ವಿವಿಧ ಸ್ಪರ್ಧೆಗಳಿಗೆ ಹೋಗುವಾಗ ಸಣ್ಣ–ಪುಟ್ಟ ಖರ್ಚುಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿದ್ದಾರೆ.

ದುಬೈ, ಜರ್ಮನಿ, ಇಂಡೋ ನೇಷ್ಯಾ, ಸಿಂಗಾಪುರ, ಪೋಲ್ಯಾಂಡ್‌ ಮತ್ತಿತರ ದೇಶಗಳಲ್ಲಿ ನಡೆದ 8 ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ತಲಾ ಮೂರು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದ ಅವರು, ಥೈಲ್ಯಾಂಡ್‌ನಲ್ಲಿ ಇದೇ ಡಿಸೆಂಬರ್‌ 1ರಿಂದ 9 ನಡೆಯಲಿರುವ ‘ಎಬಿಲಿಟಿ ವರ್ಲ್ಡ್‌ ಗೇಮ್ಸ್‌’ನಲ್ಲಿ ಭಾಗವಹಿಸಲು ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

‘ನಾನು ಖಾನಾಪುರ ತಾಲ್ಲೂಕಿನ ನಂದಗಡದ ಮಹಾತ್ಮ ಗಾಂಧಿ ಕಾಲೇಜಿನಲ್ಲಿ ಬಿ.ಕಾಂ ಅಂತಿಮ ವರ್ಷ ಓದುತ್ತಿದ್ದೇನೆ. ತಂದೆ ನಾಗಪ್ಪ ಕಾರ್ಖಾನೆಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಾರೆ. ತಾಯಿ ನಿಂಬೆವ್ವ ಬೇರೆಯವರ ಮನೆಗೆ ಪಾತ್ರೆ ತೊಳೆಯುವುದಕ್ಕೆ ಹೋಗುತ್ತಾರೆ. ಮೂವರು ಸಹೋದರಿಯರ ವಿವಾಹ ವಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಬಡತನದಿಂದಾಗಿ ಹೆಚ್ಚಿನ ತರಬೇತಿ ಪಡೆಯಲಾಗುತ್ತಿಲ್ಲ. ಇದರಿಂದ ಸಾಧನೆಗೆ ಹಿನ್ನಡೆಯಾಗುತ್ತಿದೆ’ ಎಂದು ಶ್ರೀಧರ ಮಾಳಗಿ ಬೇಸರಿಸಿದರು.

‘ಪ್ರತಿಬಾರಿ ಅಂತರರಾಷ್ಟ್ರೀಯ ಟೂರ್ನಿಗೆ ತೆರಳುವಾಗ, ಸರ್ಕಾರ ಅಥವಾ ಪ್ರಾಯೋಜಕರು ಸಾರಿಗೆ, ವಸತಿ ಮತ್ತು ಊಟದ ವೆಚ್ಚ ಭರಿಸುತ್ತಾರೆ. ಆದರೆ, ಸಣ್ಣ–ಪುಟ್ಟ ಖರ್ಚಿಗೂ ನನ್ನ ಬಳಿ ಹಣವಿಲ್ಲ. ಕೆಲವೊಮ್ಮೆ ಮನೆಯಿಂದ ಬಸ್‌ ನಿಲ್ದಾಣದವರೆಗೆ ಆಟೋದಲ್ಲಿ ಹೋಗುವುದು ಕಷ್ಟವಾಗಿದೆ. ಹಾಗಾಗಿ ಬೇರೆಯವರಿಂದ ಅಷ್ಟಿಷ್ಟು ಸಾಲ ಪಡೆದು ಟೂರ್ನಿಗೆ ಹೋಗುತ್ತಿದ್ದೇನೆ. ಈ ಬಾರಿ ಥೈಲ್ಯಾಂಡ್‌ಗೆ ಹೋಗುತ್ತಿರುವ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ’ ಎಂದರು.

‘ನನ್ನ ಈ ಸಾಧನೆಗೆ ತರಬೇತುದಾರ ಉಮೇಶ ಕಲಘಟಗಿ ಅವರೇ ಕಾರಣ. 2012ರಿಂದ ಅವರ ಬಳಿ ತರಬೇತಿ ಪಡೆಯುತ್ತಿದ್ದೇನೆ. 2017ರಲ್ಲಿ ದುಬೈನಲ್ಲಿ ನಡೆದ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ 1 ಬೆಳ್ಳಿ, 2 ಕಂಚಿನ ಪದಕ ಗಳಿಸಿದೆ. ಅಲ್ಲಿಂದ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸುವುದು ಆರಂಭವಾಯಿತು. ಇದಲ್ಲದೆ, ರಾಷ್ಟ್ರಮಟ್ಟದಲ್ಲಿ 37 ಚಿನ್ನ, 6 ಬೆಳ್ಳಿ ಮತ್ತು 1 ಕಂಚಿನ ಪದಕ ಗಳಿಸಿದ್ದೇನೆ’ ಎಂದರು.

‘ಕ್ರೀಡಾ ರಂಗದಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಹಂಬಲವಿದೆ. ಕಷ್ಟದ ಮಧ್ಯೆಯೂ ಹೆತ್ತವರು ನನ್ನ ಅಭಿರುಚಿ  ಪ್ರೋತ್ಸಾಹಿಸುತ್ತಿದ್ದಾರೆ. ಭವಿಷ್ಯದಲ್ಲಿ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತರುವುದೇ ನನ್ನ ಗುರಿ. ಇದಕ್ಕಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದೇನೆ. ಆದರೆ, ಆರ್ಥಿಕ ತೊಂದರೆಯಿಂದ ಕೆಲವು ಅವಕಾಶ ಕೈತಪ್ಪುತ್ತಿವೆ. ಪ್ರತಿ ಟೂರ್ನಿಯಲ್ಲಿ ಪ್ರಾಯೋಜಕರನ್ನು ಹುಡುಕುವುದಕ್ಕೆ ಸಮಸ್ಯೆಯಾಗಿದೆ. ಹೆಚ್ಚಿನ ಕ್ರೀಡಾ ಸಾಧನೆಗಾಗಿ ಯಾವುದಾದರೂ ಸಂಘ–ಸಂಸ್ಥೆಗಳು ಅಥವಾ ಗಣ್ಯರು ನೆರವಾದರೆ ಅಭಾರಿಯಾಗಿರುತ್ತೇನೆ’ ಎಂದು ಶ್ರೀಧರ ಕೋರಿದರು. ಅವರ ಸಂಪರ್ಕ ಸಂಖ್ಯೆ ಮೊ.ಸಂ.8197136353.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT