ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ರೋಗಿಗಳ ವಾರ್ಡ್‌ಗಳಲ್ಲಿ ಸಿಸಿಟಿವಿ ಅಳವಡಿಸಲು ರಮೇಶ ಜಾರಕಿಹೊಳಿ ಸೂಚನೆ

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ
Last Updated 20 ಜುಲೈ 2020, 8:39 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್‌ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರಕುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್‌) ಆಸ್ಪತ್ರೆಯಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಸಿಸಿಟಿವಿ ಅಳವಡಿಸಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೋವಿಡ್- 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪ್ರವಾಸಿಮಂದಿರದಲ್ಲಿ ಸೋಮವಾರ ಉನ್ನತಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರೋಗಿಗಳನ್ನು ಇಡಲಾಗಿರುವ ಪ್ರತಿಯೊಂದು ವಾರ್ಡ್‌ಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಆಸ್ಪತ್ರೆಯ ಹೊರಗೆ ದೊಡ್ಡ ಪರದೆಯ ಮೇಲೆ ಈ ದೃಶ್ಯಾವಳಿಗಳನ್ನು ಪ್ರಸಾರ ಮಾಡಬೇಕು. ವಾರ್ಡ್‌ಗಳ ಒಳಗೆ ಯಾವ ರೀತಿಯ ಚಿಕಿತ್ಸೆ ದೊರಕುತ್ತಿದೆ ಎನ್ನುವುದು ಜನರಿಗೂ ತಿಳಿಯಬೇಕಾಗಿದೆ’ ಎಂದು ಹೇಳಿದರು.

‘ಮರಣ ಪ್ರಕರಣಗಳು ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು. ಸಕಾಲಕ್ಕೆ ಚಿಕಿತ್ಸೆ, ಆಂಬುಲೆನ್ಸ್‌ ಹಾಗೂ ಊಟೋಪಹಾರ ಒದಗಿಸಬೇಕು. ಆಂಬುಲೆನ್ಸ್‌ ಕೊರತೆಯಾದರೆ, ಖಾಸಗಿ ವಾಹನಗಳನ್ನು ಬಾಡಿಗೆ ಪಡೆದುಕೊಳ್ಳಬೇಕು. ಕೋವಿಡ್‌ಗಿಂತ ಹೆಚ್ಚಾಗಿ ಇತರೆ ವೈದ್ಯಕೀಯ ಚಿಕಿತ್ಸೆ ಸಿಗದಿರುವುದರಿಂದ ಜನರು ಭಯಭೀತರಾಗಿದ್ದಾರೆ. ಆದ್ದರಿಂದ ಇತರೆ ಚಿಕಿತ್ಸೆ ಒದಗಿಸಲು ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.

ರ‍್ಯಾಪಿಡ್‌ ಕಿಟ್‌:‘ರ‍್ಯಾಪಿಡ್‌ ಕಿಟ್‌ಗಳನ್ನು ತರಿಸಲಾಗಿದ್ದು, 15 ನಿಮಿಷದಲ್ಲಿ ಕೋವಿಡ್‌ ಸೋಂಕು ಇದೆಯೋ, ಇಲ್ಲವೋ ಗೊತ್ತಾಗುತ್ತದೆ. ಇದನ್ನು ಬಳಸಿಕೊಂಡು ಖಾಸಗಿ ಆಸ್ಪತ್ರೆಯವರು ಇತರ ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು’ ಎಂದು ಹೇಳಿದರು.

ಗುಣಮಟ್ಟದ ಆಹಾರಕ್ಕೆ ಸೂಚನೆ:‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಆಹಾರವನ್ನು ಪೂರೈಸಬೇಕು. ಕುಡಿಯುವ ನೀರು, ಅಗತ್ಯಕ್ಕೆ ತಕ್ಕಂತೆ ಸ್ನಾನದ ಕೊಠಡಿಗಳು ಮತ್ತು ಶೌಚಾಲಯ ಕಲ್ಪಿಸಬೇಕು’ ಎಂದು ತಿಳಿಸಿದರು.

‘ಬಿಮ್ಸ್ ನಲ್ಲಿ ಸದ್ಯಕ್ಕೆ 740 ಬೆಡ್ ಗಳಿವೆ. ಇನ್ನೂ 300 ಬೆಡ್ ಹೆಚ್ಚಿಸಲಾಗುತ್ತಿದೆ. ಈ ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮಾತ್ರ ಮೀಸಲಿಟ್ಟು, ಉಳಿದವರನ್ನು ಖಾಸಗಿ ಆಸ್ಪತ್ರೆಗೆ ಕಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

‘ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲು ಖಾಸಗಿ ಆಸ್ಪತ್ರೆ ಸಿಬ್ಬಂದಿ, ಹೊಸದಾಗಿ ಕೋರ್ಸ್ ಪೂರ್ಣಗೊಳಿಸಿದವರನ್ನು ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಬೇಕು’ ಎಂದು ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಸಲಹೆ ನೀಡಿದರು.

ಶಾಸಕ ಮಹೇಶ್ ಕುಮಠಳ್ಳಿ ಮಾತನಾಡಿ, ‘ಅಥಣಿಯಲ್ಲಿ ಇದೀಗ ಸೋಂಕು ಹೆಚ್ಚಳವಾಗುತ್ತಿದೆ. ಬಿಮ್ಸ್ ದೂರ ಆಗಿರುವುದರಂದ ಸ್ಥಳೀಯವಾಗಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಬೇಕಿದೆ. ಅಥಣಿಯಿಂದ ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಮಾತ್ರ ಬಿಮ್ಸ್ ಕಳಿಸಬೇಕು’ ಎಂದು ಸಲಹೆ ನೀಡಿದರು.

‘ಸೋಂಕಿನ ಲಕ್ಷಣ ಇರುವವರನ್ನು ಸ್ಥಳೀಯವಾಗಿಯೇ ಪತ್ತೆ ಮಾಡಲು ಗ್ರಾಮ ಪಂಚಾಯತಿ ಮಟ್ಟದಲ್ಲೂ ಬಿಪಿ, ಶುಗರ್ ಮತ್ತು ಜ್ವರ ಇರುವ ಬಗ್ಗೆ ತಪಾಸಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದರು.

‘ಇದುವರೆಗೆ ಕೋವಿಡ್ ಜತೆಗೆ ಇತರರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಕೋವಿಡ್ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡುತ್ತಿರುವುದರಿಂದ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ಲಭಿಸಲಿದ್ದಾರೆ. ಆದ್ದರಿಂದ ಮುಂದೆ ಅನುಕೂಲವಾಗಲಿದೆ’ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದರು.

ಪೊಲೀಸ್ ಆಯುಕ್ತರಾದ ತ್ಯಾಗರಾಜನ್, ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT