ಮಂಗಳವಾರ, ಮಾರ್ಚ್ 28, 2023
33 °C

ಕಸದ ಡಬ್ಬಿ ಕೊಡಿ, ವೆಚ್ಚ ತೆರಿಗೆಯಲ್ಲಿ ಸೇರಿಸಿ: ಎಲ್.ಕೆ.ಅತೀಕ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನಗರದಲ್ಲಿ ಕಸ ವಿಂಗಡಣೆ ಮತ್ತು ವಿಲೇವಾರಿಗೆ ಸಮರ್ಪಕ ಕ್ರಮ ಕೈಗೊಳ್ಳಬೇಕು. ಪ್ರತಿ ಮನೆಗೆ ನೀಲಿ ಹಾಗೂ ಹಸಿರು ಡಬ್ಬಿಗಳನ್ನು ಪಾಲಿಕೆಯಿಂದಲೇ ವಿತರಿಸಿ ಆ ವೆಚ್ಚವನ್ನು ಆಸ್ತಿ ತೆರಿಗೆಯಲ್ಲಿ ಸೇರ್ಪಡೆಗೆ ಪರಿಶೀಲಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಾಲಿಕೆಯೇ ಡಬ್ಬಿಗಳನ್ನು ಪೂರೈಸಿದರೆ ಕಸ ವಿಂಗಡಣೆ ಸುಲಭವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ಕೆಆರ್‌ಐಡಿಎಲ್ ವತಿಯಿಂದ ನಿರ್ಮಿಸಲಾಗುತ್ತಿರುವ ಕಟ್ಟಡ ಹಾಗೂ ರಸ್ತೆ ಕಾಮಗಾರಿಗಳ ಪ್ರಗತಿಯ ಕುರಿತು ಸಮಗ್ರ ವರದಿ ಸಲ್ಲಿಸಬೇಕು. ಸಣ್ಣ ನೀರಾವರಿ, ಕೃಷಿ, ಸಾಮಾಜಿಕ ಅರಣ್ಯ ಇಲಾಖೆಯವರು ಸಮನ್ವಯತೆಯೊಂದಿಗೆ ಸಣ್ಣ ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು’ ಎಂದು ತಿಳಿಸಿದರು.

ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ:

‘ಜಿಲ್ಲೆಯಲ್ಲಿ ಜುಲೈ‌ ತಿಂಗಳಲ್ಲಿ ಈವರೆಗೆ ವಾಡಿಕೆಗಿಂತ ಕಡಿಮೆ‌ ಮಳೆಯಾಗಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯ ಶೇ.44ರಷ್ಟು ಮಾತ್ರವೇ ಭರ್ತಿ ಆಗಿರುವುದರಿಂದ ಸದ್ಯಕ್ಕೆ ಪ್ರವಾಹ ಪರಿಸ್ಥಿತಿ ಇಲ್ಲ. ಪ್ರವಾಹದಿಂದ ಬಾಧಿತಗೊಳ್ಳಬಹುದಾದ ನದಿ ತೀರದ 377 ಗ್ರಾಮಗಳಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ವಿವರಿಸಿದರು.

‘ಜಾನುವಾರು ರಕ್ಷಣೆಗೆ 208 ಕೇಂದ್ರಗಳನ್ನು ಕೂಡ ಗುರುತಿಸಲಾಗಿದೆ’ ಎಂದು ತಿಳಿಸಿದರು.

‘ಸಿಂಧುತ್ವ ಪ್ರಮಾಣಪತ್ರಗಳನ್ನು ತಕ್ಷಣವೇ ನೀಡಲು ಅನುಕೂಲ ಆಗುವಂತೆ ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಹೆಚ್ಚು ಪೂರೈಕೆಯಾದರೆ ಅನುಕೂಲ:

‘ಪದವಿ ವಿದ್ಯಾರ್ಥಿಗಳ ಪೈಕಿ ಶೇ.64.14ರಷ್ಟು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಅನೇಕರು ಲಸಿಕೆ ಪಡೆದಿದ್ದಾರೆ. ಜಿಲ್ಲೆಗೆ ನಿತ್ಯವೂ ಕನಿಷ್ಠ 50ಸಾವಿರ ಡೋಸ್ ಪೂರೈಕೆಯಾದರೆ ಲಸಿಕಾಕರಣವನ್ನು ಇನ್ನಷ್ಟು ಚುರುಕುಗೊಳಿಸಿ ಹೆಚ್ಚಿನ ಪ್ರಗತಿ ಸಾಧಿಸಬಹುದು’ ಜಿಲ್ಲಾ ಲಸಿಕಾಧಿಕಾರಿ ಡಾ.ಐ.ಪಿ. ಗಡಾದ ಗಮನಸೆಳೆದರು.

‘ಗಡಿ ಮೂಲಕ ಪ್ರತಿ ದಿನ ಸಂಚರಿಸುವವರಿಗೂ ಕಡ್ಡಾಯವಾಗಿ ಲಸಿಕೆ ನೀಡಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ತಿಳಿಸಿದರು.

‘ಜಿಲ್ಲೆಯಾದ್ಯಂತ 427 ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ. 197 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, 67 ಜನರಿಗೆ ಶಸ್ತ್ರಚಿಕಿತ್ಸೆ  ಮಾಡಲಾಗಿದೆ. ಬಿಮ್ಸ್‌ನಲ್ಲಿ 39 ಮಂದಿ ಆಮ್ಲಜನಕ ಪಡೆಯುತ್ತಿದ್ದಾರೆ’ ಎಂದು ಬಿಮ್ಸ್ ಸೂಪರಿಟೆಂಡೆಂಟ್ ಡಾ.ಗಿರೀಶ ದಂಡಗಿ ಹೇಳಿದರು.

ಉಸ್ತುವಾರಿ ಕಾರ್ಯದರ್ಶಿ ಸೂಚನೆಗಳು

* ಪಿಎಂಜಿಎಸ್‌ವೈನಲ್ಲಿ ನಿರ್ಮಿಸಿದ ರಸ್ತೆಗಳ ಎರಡೂ ಬದಿಗೆ ನರೇಗಾ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಡಬೇಕು.

* ನಗರದಲ್ಲಿ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಸಸಿಗಳನ್ನು ನೆಡಬೇಕು.

* ಸಂಭವನೀಯ ಕೋವಿಡ್ 3ನೇ ಅಲೆ ನಿರ್ವಹಣೆಗೆ ಸಂಬಂಧಿಸಿದಂತೆ ಅದರಲ್ಲೂ ವಿಶೇಷವಾಗಿ ಮಕ್ಕಳ ರಕ್ಷಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

* ಸೋಂಕಿತ ಮಕ್ಕಳ ಚಿಕಿತ್ಸೆ ವೇಳೆ ತಾಯಿಯೂ ಜೊತೆಗೆ ಇರಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ತಯಾರಿ ನಡೆಸಬೇಕು.

* ಜಾನುವಾರುಗಳ ಚಿಕಿತ್ಸೆಗೆ ಅಗತ್ಯ ಔಷಧಿಗಳನ್ನು ಖರೀದಿಸಬೇಕು.

* ಜಾನುವಾರು ಲಸಿಕಾಕರಣ ಕಾರ್ಯಕ್ರಮದಲ್ಲಿ ಶೇ 100 ಪ್ರಗತಿ ಸಾಧಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು