ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಸಾರಿಗೆ ವ್ಯವಸ್ಥೆಗೆ ಕ್ರಮ: ಡಾ.ಕೆ.ಹರೀಶ್‌ಕುಮಾರ್‌

ಜಿಲ್ಲಾಧಿಕಾರಿ ಡಾ.ಕೆ.ಹರೀಶ್‌ಕುಮಾರ್‌ ಹೇಳಿಕೆ
Last Updated 4 ಏಪ್ರಿಲ್ 2021, 13:36 IST
ಅಕ್ಷರ ಗಾತ್ರ

ಬೆಳಗಾವಿ: ‘ಸಾರಿಗೆ ಸಂಸ್ಥೆಯ ನೌಕರರು ಏ.7ರಿಂದ ಅನಿರ್ದಿಷ್ಟ ಅವಧಿಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತದಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ತಿಳಿಸಿದರು.

ಇಲ್ಲಿ ಭಾನುವಾರ ನಡೆದ ವಿವಿಧ ವರ್ಗಗಳ ವಾಹನಗಳ ಪ್ರವರ್ತಕರ ಸಂಘದ ಪ್ರತಿನಿಧಿಗಳು ಹಾಗೂ ಪ್ರವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾರಿಗೆ ಸಂಸ್ಥೆಯ ನೌಕರರು ಒಂದು ವೇಳೆ ಮುಷ್ಕರ ಆರಂಭಿಸಿದರೆ ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಖಾಸಗಿ ಪ್ರವರ್ತಕರಿಗೆ ಕೆಲ ಮಾರ್ಗಗಳಲ್ಲಿ ಮೋಟಾರು ವಾಹನ ಕಾಯ್ದೆಯಲ್ಲಿ ತಾತ್ಕಾಲಿಕ ಪರ್ಮಿಟ್ (ಪರವಾನಗಿ) ನೀಡಲು ನಿರ್ಧರಿಸಲಾಗಿದೆ. ಖಾಸಗಿ ಬಸ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳಿಗೆ ಏ.7ರಿಂದ ಈ ರೀತಿಯ ತಾತ್ಕಾಲಿಕ ಪರ್ಮಿಟ್‌ಗಳನ್ನು ನೀಡಬಹುದಾಗಿದೆ. ಬಸ್, ಮ್ಯಾಕ್ಸಿ ಕ್ಯಾಬ್ ಅಲ್ಲದೇ ಅಗತ್ಯಬಿದ್ದರೆ ಇನ್ನಿತರ ವಾಹನಗಳಿಗೂ ಪರ್ಮಿಟ್ ನೀಡಿ ಸಾರ್ವಜನಿಕರ ಅನುಕೂಲಕ್ಕೆ ಬಳಸಿಕೊಳ್ಳಲಾಗುವುದು’ ಎಂದು ಹೇಳಿದರು.

ಕಠಿಣ ಕ್ರಮದ ಎಚ್ಚರಿಕೆ:

‘ರಾಜ್ಯ ಸಾರಿಗೆ ನೌಕರರ ಒಕ್ಕೂಟ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಸಂದರ್ಭದಲ್ಲಿ ಇತರ ಖಾಸಗಿ ಪ್ರವರ್ತಕರು, ಸಾರಿಗೆ ಸಂಸ್ಥೆಯವರು ಅತಿ ಹೆಚ್ಚು ದರ ಆಕರಿಸುವ ಮೂಲಕ ಪ್ರಯಾಣಿಕರ ಶೋಷಣೆ ಮಾಡಿದರೆ ಅಂಥವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಜಿಲ್ಲಾಡಳಿತ ಮತ್ತು ಸರ್ಕಾರದ ನಿರ್ದೇಶನಗಳ ಪ್ರಕಾರ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸಲಾಗುವುದು’ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಪ್ರವರ್ತಕರು ಭರವಸೆ ನೀಡಿದರು.

ಎಎಸ್ಪಿ ಅಮರನಾಥ್ ರೆಡ್ಡಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ, ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್, ಚಿಕ್ಕೋಡಿ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ, ಬೈಲಹೊಂಗಲ ಎ.ಆರ್.ಟಿ.ಒ.ನಾಗೇಶ್ ಮುಂಡಾಸ, ರಾಮದುರ್ಗ ಎ.ಆರ್.ಟಿ.ಒ. ಧರ್ಮರಾಜ ಪವಾರ, ಗೋಕಾಕ ಎ.ಆರ್.ಟಿ.ಒ ಹೇಮಾವತಿ, ನಾಗರಿಕ ವೇದಿಕೆ ಅಧ್ಯಕ್ಷ ವಿಕಾಸ ಕಲಘಟಗಿ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳ ಪ್ರವರ್ತಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT