ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ವಿಳಂಬ’

ಬ್ಯಾಂಕ್ ಅಧಿಕಾರಿಗಳ ಜಿಲ್ಲಾ ಮಟ್ಟದ ಸಲಹಾ ಸಮಿತಿ, ಸಮೀಕ್ಷೆ ಸಮಿತಿ ಸಭೆಯಲ್ಲಿ ಈರಣ್ಣ ಕಡಾಡಿ ಬೇಸರ
Published 22 ಜೂನ್ 2023, 16:29 IST
Last Updated 22 ಜೂನ್ 2023, 16:29 IST
ಅಕ್ಷರ ಗಾತ್ರ

ಬೆಳಗಾವಿ: ‘ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷದಿಂದ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ಬಾಕಿಯಿರುವ ಎಲ್ಲ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು. ಯೋಜನೆಗಳ ಅನುಷ್ಠಾನ ಚುರುಕಾಗಬೇಕು’ ಎಂದು ಸಂಸದ ಈರಣ್ಣ ಕಡಾಡಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ನಡೆದ ವಿವಿಧ ಬ್ಯಾಂಕ್ ಅಧಿಕಾರಿಗಳ ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ಸಮೀಕ್ಷೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಜನಸಾಮಾನ್ಯರು, ವಿದ್ಯಾವಂತ ನಿರುದ್ಯೋಗಿಗಳು, ಮಹಿಳಾ ಸ್ವ ಸಹಾಯ ಸಂಘಗಳು ಹಾಗೂ ಕೃಷಿಕರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ನಿಮ್ಮ ನಿರ್ಲಕ್ಷ್ಯದಿಂದ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ’ ಎಂದು ಹರಿಹಾಯ್ದರು.

‘ಜಿಲ್ಲೆಯ 16 ಗ್ರಾಮಗಳಲ್ಲಿ ಹೊಸ ಬ್ಯಾಂಕ್ ಶಾಖೆ ತೆರೆಯಲು ಜನ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಚರ್ಚಿಸಲಾಗಿದೆ. ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕೂಡಲೇ ಹೊಸ ಶಾಖೆಗಳ ಪ್ರಾರಂಭಕ್ಕೆ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

‘ಗ್ರಾಮೀಣ ಪ್ರದೇಶದ ಜನರ ಮನೆಬಾಗಿಲಿಗೆ ಯೋಜನೆಗಳ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇವುಗಳ ಬಗ್ಗೆ ಕಳೆದ ಬಾರಿ ಸಭೆ ನಡೆಸಿ, ಸೂಚನೆ ನೀಡಿದರೂ ಒಂದು ಅರ್ಜಿಯೂ ವಿಲೇವಾರಿ ಆಗಿಲ್ಲ. ಅರ್ಹರಿಗೆ ಸೌಲಭ್ಯ ನೀಡಲು ವಿಳಂಬ ಧೋರಣೆ ಬಿಟ್ಟು ಶೀಘ್ರ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು’ ಎಂದು ತಾಕೀತು ಮಾಡಿದರು.

‘ಕೃಷಿ, ಶಿಕ್ಷಣ, ಸ್ವಯಂ ಉದ್ಯೋಗ, ಗೃಹ ಸಾಲ ಹಾಗೂ ಸ್ವ ಸಹಾಯ ಸಂಘಗಳ ಸಾಲ ಸೇರಿದಂತೆ ಬ್ಯಾಂಕುಗಳಿಗೆ ಸಲ್ಲಿಕೆಯಾದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಅವಶ್ಯ ದಾಖಲೆಗಳನ್ನು ಪರಿಶೀಲಿಸಿ, ಕೂಡಲೇ ಸಾಲ ಮಂಜೂರು ಮಾಡಲು ಸೂಚಿಸಬೇಕು’ ಎಂದು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸ್ವ ಉದ್ಯೋಗ ತರಬೇತಿ
‘ಆರ್.ಸಿಟಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಈಗಾಗಲೇ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಗ್ರಾಮೀಣ ಭಾಗದ ಯುವಕ– ಯುವತಿಯರಿಗೆ ಹೈನುಗಾರಿಕೆ ಕುರಿ ಸಾಕಣೆ ಬ್ಯೂಟಿ ಪಾರ್ಲರ್ ಸೇರಿದಂತೆ ವಿವಿಧ ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತದೆ. ಈಗಾಗಲೇ ನಿಗದಿಪಡಿಸಿದ ಗುರಿಗಿಂತ ಹೆಚ್ಚು ಪ್ರಮಾಣದ ಗುರಿ ಸಾಧಿಸಲಾಗಿದೆ’ ಎಂದು ಕೆನರಾ ಬ್ಯಾಂಕ್‌ ಆರ್.ಸಿಟಿ ನಿರ್ದೇಶಕ ಸಿದ್ದನಗೌಡ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ‘ಸ್ವ ಉದ್ಯೋಗ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜಿಲ್ಲೆಯ ಎಲ್ಲ ಭಾಗಗಳಲ್ಲಿ ತರಬೇತಿ ನೀಡುವ ಕುರಿತು ಯೋಜನೆ ರೂಪಿಸಬೇಕು. ತರಬೇತಿ ಕಾರ್ಯಾಗಾರದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ತಲುಪಲು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸಾರ್ವಜನಿಕರ ಅನುಕೂಲಕ್ಕೆ ಕಾರ್ಯ ನಿರ್ವಹಿಸಬೇಕು. ಬ್ಯಾಂಕ್ ಗ್ರಾಹಕರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿರುವ ಪ್ರಕರಣಗಳ ಕಂಡುಬಂದಿವೆ. ಕೂಡಲೇ ಸಂಬಂಧಿತ ಬ್ಯಾಂಕ್ ಶಾಖೆಯ ಅಧಿಕಾರಿಗಳು ಸಿಬ್ಬಂದಿಗೆ ತಿಳಿಹೇಳಬೇಕು’ ಎಂದು ಸೂಚಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ ಕುಲಕರ್ಣಿ, ನಬಾರ್ಡ್ ಡಿಡಿಎಂ ಭಾರದ್ವಾಜ, ಡಿಸಿಸಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಕಲಾವಂತ, ಕೆನರಾ ಬ್ಯಾಂಕ್ ಮ್ಯಾನೇಜರ್ ಸಂಜೀವ ವನಜೇರಿ ಹಾಗೂ ವಿವಿಧ ಬ್ಯಾಂಕುಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಬ್ಯಾಂಕುಗಳಲ್ಲಿ ಗ್ರಾಹಕರೊಂದಿಗೆ ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡಬೇಕು. ಅರ್ಜಿ ಮಾಹಿತಿ ಎಲ್ಲ ವ್ಯವಹಾರಗಳನ್ನು ಕನ್ನಡಲ್ಲೇ ನಡೆಸಬೇಕು
ಗಂಗಾಧರ, ಮುಖ್ಯ ಯೋಜನಾ ನಿರ್ದೇಶಕ ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT