ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲದಲ್ಲಿ ಇದ್ದಾರೆ ‘ಹತ್ತು ರೂಪಾಯಿ’ ಡಾಕ್ಟ್ರು

ಬಡ ರೋಗಿಗಳ ಮೆಚ್ಚುಗೆಗೆ ಪಾತ್ರವಾದ ಹಿರಿಯ ವೈದ್ಯ ಎ.ಎನ್.ಬಾಳಿ       
ರವಿಕುಮಾರ ಹುಲಕುಂದ
Published 1 ಜುಲೈ 2024, 8:31 IST
Last Updated 1 ಜುಲೈ 2024, 8:31 IST
ಅಕ್ಷರ ಗಾತ್ರ

ಬೈಲಹೊಂಗಲ: ಇದು ದುಬಾರಿ ಯುಗ. ಇಂದು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಶುಲ್ಕ ಜನರ ಕೈಸುಡುತ್ತಿದೆ. ಆದರೆ, ಪಟ್ಟಣದ ಇಂಚಲ ರಸ್ತೆಯಲ್ಲಿನ ಕ್ಲಿನಿಕ್‌ಗೆ ಕಾಲಿಟ್ಟರೆ ನಿಮಗೆ ಅಚ್ಚರಿಯಾಗುತ್ತದೆ. ಇಲ್ಲಿ ವೈದ್ಯ ಡಾ.ಎ.ಎನ್.ಬಾಳಿ ತಮ್ಮ ಬಳಿ ಚಿಕಿತ್ಸೆಗಾಗಿ ಬರುವ ರೋಗಿಗಳಿಂದ ಪಡೆಯುವುದು ₹10 ಮಾತ್ರ.

ಬೈಲಹೊಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿಯಲ್ಲಿ ಸಹಾಯಕ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸೆಕರಾಗಿ ಸೇವೆ ಸಲ್ಲಿಸಿ, ಅವರು ನಿವೃತ್ತಿ ಹೊಂದಿದ್ದಾರೆ. 31 ವರ್ಷ ಸರ್ಕಾರಿ ಸೇವೆ ಸಲ್ಲಿಸಿದ ನಂತರ ಅವರು ಕೈಕಟ್ಟಿ ಕುಳಿತಿಲ್ಲ.

ಬದಲಿಗೆ, ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಶ್ರಮಿಸುತ್ತಿದ್ದಾರೆ. ‘ಹತ್ತು ರೂಪಾಯಿ ಡಾಕ್ಟ್ರು’ ಎಂದೇ ಈ ಭಾಗದಲ್ಲಿ ಗುರುತಿಸಿಕೊಂಡಿದ್ದಾರೆ.

ಈ ಆಸ್ಪತ್ರೆ ಸದಾ ಜನರಿಂದ ಕಿಕ್ಕಿರಿದು ತುಂಬಿರುತ್ತದೆ. ಇಲ್ಲಿ ಚಿಕಿತ್ಸೆಗಾಗಿ ಬೈಲಹೊಂಗಲ ತಾಲ್ಲೂಕು ಮಾತ್ರವಲ್ಲ;  ಜಿಲ್ಲೆಯ ವಿವಿಧೆಡೆಯಿಂದ ರೋಗಿಗಳು ಬರುತ್ತಾರೆ.

‘ನನಗೀಗ 84 ವರ್ಷ ವಯಸ್ಸು. 26 ವರ್ಷಗಳ ಹಿಂದೆ ಸ್ವಂತ ಕ್ಲಿನಿಕ್ ತೆರೆದಿದ್ದೇನೆ. ₹10 ಶುಲ್ಕ ಪಡೆದು, ಜನರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿದ್ದೇನೆ. ಇದರಲ್ಲಿ ನನಗೂ ಏನೋ ಸಂತೃಪ್ತಿ. ನನ್ನ ಪತ್ನಿ, ವೈದ್ಯರಾಗಿರುವ ಮಗ ಮತ್ತು ಸೊಸೆಯೂ ನನ್ನ ಸೇವೆಗೆ ಬೆಂಬಲ ನೀಡಿದ್ದಾರೆ’ ಎಂದು ಎ.ಎನ್.ಬಾಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಡಾ.ಎ.ಎನ್.ಬಾಳಿ
ಡಾ.ಎ.ಎನ್.ಬಾಳಿ
- ನಾನು ಹಲವು ವರ್ಷಗಳಿಂದ ಇಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದೇನೆ. ಚುಚ್ಚುಮದ್ದಿಗೆ ₹10 ಪಡೆಯುತ್ತಾರೆ. ಬಡ ಜನರಿಗೆ ಬಾಳಿ ಅವರು ಉತ್ತಮ ಚಿಕಿತ್ಸೆ ಕೊಡುತ್ತಿದ್ದಾರೆ
–ರಾಜು ದಳವಾಯಿ ಸ್ಥಳೀಯ
ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದು ನಮಗೆಲ್ಲ ಕಷ್ಟ. ಬಾಳಿ ಡಾಕ್ಟರ್‌ ನಮಗೆ ಆಸರೆಯಾಗಿದ್ದಾರೆ
–ಯಲ್ಲವ್ವ ಅವಕ್ಕನವರ ಸ್ಥಳೀಯ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT