ಭಾನುವಾರ, ಜೂನ್ 20, 2021
24 °C

ಈದ್ ಉಲ್ ಫಿತ್ರ್ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ‘ಈದ್ ಉಲ್ ಫಿತ್ರ್‌’ ಹಬ್ಬವನ್ನು ಶುಕ್ರವಾರ ಸರಳವಾಗಿ ಆಚರಿಸಿದರು.

ತಮ್ಮ ಮನೆಗಳಿಗೆ ಸೀಮಿತವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸಿ ‘ಅಲ್ಲಾಹ್’ನ ಕೃಪೆಗಾಗಿ ಪ್ರಾರ್ಥಿಸಿದರು. ಕೋವಿಡ್ ಕಾರಣದಿಂದ ಹೋದ ವರ್ಷವೂ ಸರಳವಾಗಿಯೇ ಆಚರಿಸಲಾಗಿತ್ತು.

ಪ್ರತಿ ವರ್ಷ ಹಬ್ಬದಂದು ನಗರದ ಅಂಜುಮನ್-ಇ-ಇಸ್ಲಾಂ ಸಂಸ್ಥೆ ಆವರಣದಲ್ಲಿರುವ ಈದ್ಗಾ ಮೈದಾನ, ಕೋಟೆ ಒಳಗಿರುವ ಮಸೀದಿ ಹಾಗೂ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಗುತ್ತಿತ್ತು. ಆದರೆ, ಕೊರೊನಾ ಸೋಂಕು ವ್ಯಾಪಿಸುತ್ತಿರುವುದನ್ನು ನಿಯಂತ್ರಿಸುವ ಉದ್ದೇಶದಿಂದ ಮುಸ್ಲಿಮರು ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು. ‘ದೇಶವನ್ನು ಕೊರೊನಾ ಸಂಕಟದಿಂದ ಪಾರು ಮಾಡು. ಸೋಂಕಿನಿಂದ ಬಳಲುತ್ತಿರುವವರನ್ನು ರಕ್ಷಿಸು’ ಎಂದು ಕೋರಿದರು.

ಸಂಬಂಧಿಕರು, ಗೆಳೆಯರು ಮತ್ತು ಹಿತೈಷಿಗಳಿಗೆ ಆಲಿಂಗನದ ಬದಲಿಗೆ ಸಾಮಾಜಿಕ ಜಾಲತಾಣ ಅಥವಾ ಮೊಬೈಲ್‌ ಫೋನ್‌ ಸಂದೇಶದ ಮೂಲಕ ಶುಭಾಶಯ ಕೋರಿದರು. ಮನೆಗಳಲ್ಲಿ ವಿಶೇಷ ಭೋಜನ ಸವಿದು ಸಂಭ್ರಮಿಸಿದರು. ಉಳ್ಳವರು ಬಡವರಿಗೆ ಆಹಾರ ಧಾನ್ಯಗಳ ಕಿಟ್ ಮೊದಲಾದವುಗಳನ್ನು ದಾನ ಮಾಡಿದರು.

‘ಪ್ರತಿ ಬಾರಿ ಈದ್ ಉಲ್‌ ಫಿತ್ರ್ ಮಾರನೇ ದಿನದಂದು ಮುಸ್ಲಿಮರು ದರ್ಗಾಗಳಿಗೆ ಭೇಟಿ ನೀಡುತ್ತಾರೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲರೂ ತಮ್ಮ ಮನೆಗಳಲ್ಲೇ ಇರಬೇಕು’ ಎಂದು ಇಸ್ಲಾಂ ಧರ್ಮಗುರು ಖಾರಿ ಜಾಕೀರ್ ಹುಸೇನ್ ಆರೀಫ್ ಖಾನ್ ಕೋರಿದ್ದಾರೆ.

ತೆಲಸಂಗ ವರದಿ:

ಗ್ರಾಮದಲ್ಲಿ ಮುಸ್ಲಿಮರು ಈದ್ ಉಲ್ ಫಿತ್ರ್ ಅನ್ನು ಮನೆಗಳಲ್ಲಿಯೇ ಸಡಗರ ಸಂಭ್ರಮದಿಂದ ಆಚರಿಸಿದರು. ತಿಂಗಳ ಕಾಲ ಅಲ್ಲಾಹನ ಕೃಪೆಗಾಗಿ ಉಪವಾಸ ವ್ರತ ಕೈಗೊಂಡ ಅವರು, ಪರಸ್ಪರ ಮೊಬೈಲ್‌ ಫೋನ್‌ನಲ್ಲೇ ಶುಭಾಶಯ ವಿನಿಮಯ ಮಾಡಿಕೊಂಡರು.

ಎಂ.ಕೆ. ಹುಬ್ಬಳ್ಳಿ ವರದಿ:

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮುಸ್ಲಿಮರು ಈದ್ ಉಲ್ ಫಿತ್ರ್‌ ಹಬ್ಬವನ್ನು ಸರಳವಾಗಿ ಆಚರಿಸಿದರು. ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು