ಬುಧವಾರ, ಜೂನ್ 16, 2021
22 °C

ಸಕಲ ಜೀವರಾಶಿಯ ಒಳಿತಿಗೆ ಪ್ರಾರ್ಥಿಸೋಣ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್ ಸಂಕಷ್ಟದ ಕಾಲದಲ್ಲಿ ನಾವೆಲ್ಲರೂ ಸಿಲುಕಿದ್ದೇವೆ. ಜನರು ಸಾವು–ನೋವು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದುಂದು ವೆಚ್ಚ, ಅದ್ಧೂರಿ ಹಾಗೂ ಸಂಭ್ರಮಕ್ಕೆ ಅವಕಾಶ ಕೊಡಬಾರದು. ಈದ್ಗಾ ಮೈದಾನಗಳ ಬದಲಿಗೆ ನಮ್ಮ ಮನೆಗಳಲ್ಲೇ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು. ಸಕಲ ಜೀವರಾಶಿಯ ಒಳಿತಿಗೆ ಪ್ರಾರ್ಥಿಸಬೇಕು.

ಪ್ರತಿ ವರ್ಷ ಹಬ್ಬಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದೆವು. ಈ ಬಾರಿ ಅದು ಬೇಡ. ವ್ಯಯಿಸಬಹುದಾದಷ್ಟು ಹಣವನ್ನು ಸಂಕಷ್ಟದಲ್ಲಿರುವವರಿಗೆ ನೀಡಿ ಹಬ್ಬವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಬೇಕು ಹಾಗೂ ಈ ಮೂಲಕ ಸಾರ್ಥಕತೆ ಪಡೆಯಬೇಕು. ನಾವೂ ನಮ್ಮ ಮಸೀದಿಯಲ್ಲಿ, ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ದಿನಸಿ ಸಾಮಗ್ರಿಗಳ ಕಿಟ್ ತಯಾರಿಸಿ ಬಡವರಿಗೆ ಹಂಚಲಿದ್ದೇವೆ. ಹೀಗೆ ಪ್ರತಿಯೊಬ್ಬ ಮುಸ್ಲಿಮರೂ ಅಗತ್ಯವಿರುವವರಿಗೆ ಜಾತಿ–ಧರ್ಮ ನೋಡದೆ ನೆರವು ಕಲ್ಪಿಸಬೇಕು.

ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಸೇನಾನಿಗಳನ್ನು ಗೌರವಿಸಬೇಕು. ಸಂಬಂಧಿಕರು ಅಥವಾ ಹಿತೈಷಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿಗೆ ಆಹ್ವಾನಿಸಿ ‘ದಾವತ್‌’ಗಳನ್ನು ಆಯೋಜಿಸಬಾರದು. ಕೋವಿಡ್ ಹರಡುವುದನ್ನು ನಿಯಂತ್ರಿಸಲು ಜಾರಿಗೊಳಿಸಲಾಗಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸೋಂಕು ನಿವಾರಣೆಯಾಗುವಂತೆ ಸಹಕರಿಸಬೇಕು. ಕೊರೊನಾ ನಿಯಂತ್ರಣದ ಜವಾಬ್ದಾರಿ ಸರ್ಕಾರದ್ದು ಮಾತ್ರವಲ್ಲ; ನಾವೂ ಸಹಕಾರ ನೀಡಬೇಕು. ಇದು ನಮ್ಮ ಕರ್ತವ್ಯವೂ ಆಗಿದೆ. ಇದನ್ನು ಎಲ್ಲರೂ ಮನಗಾಣಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೊರೊನಾ ಅಬ್ಬರ ಇಳಿಮುಖ ಆಗುವವರೆಗೂ, ಇಸ್ಲಾಂ ಧರ್ಮದ ಎಲ್ಲ ಧಾರ್ಮಿಕ ಆಚರಣೆಗಳನ್ನು ಮನೆಗಳಲ್ಲೇ ಕೈಗೊಳ್ಳಬೇಕು.

ಹಬ್ಬದ ವೇಳೆ ಹಸ್ತಲಾಘವ, ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ. ಹಲವರು ದರ್ಗಾಗಳಿಗೆ ಭೇಟಿ ಕೊಡುತ್ತಾರೆ. ಆದರೆ, ಈಗ ಸೋಂಕು ವ್ಯಾಪಿಸುತ್ತಿರುವುದರಿಂದಾಗಿ ಹಸ್ತಲಾಘವ ಮೊದಲಾದ ಆಚರಣೆಗಳನ್ನು ಮಾಡಬಾರದು. ಮೊಬೈಲ್ ಫೋನ್‌ ಸಂದೇಶ ಅಥವಾ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಶುಭಾಶಯ ಕಳುಹಿಸುವುದು ಒಳ್ಳೆಯದು.

ದೇಶದಲ್ಲಿರುವ ಎಲ್ಲರೂ ನಮ್ಮವರೇ. ಅವರಲ್ಲಿ ಬಹಳಷ್ಟು ಮಂದಿ ದುಃಖದಲ್ಲಿರುವಾಗ ನಾವು ಹೇಗೆ ಸಂತೋಷದಿಂದ ಇರಲು ಸಾಧ್ಯ?. ಆದ್ದರಿಂದ ಹಬ್ಬವನ್ನು ಸರಳ ಅಥವಾ ಸಾಂಕೇತಿಕವಾಗಿ ಆಚರಿಸೋಣ.

ದೇವರು ನಮ್ಮನ್ನೆಲ್ಲರನ್ನೂ ಆದಷ್ಟು ಬೇಗ ಈ ಸಂಕಷ್ಟದಿಂದ ಪಾರು ಮಾಡಲಿ. ಸೋಂಕಿಗೆ ಸಿಲುಕಿದವರ ಮೊಗದಲ್ಲೂ ಮಂದಹಾಸ ಮೂಡುವಂತಾಗಲಿ. ಸರ್ವರ ಬದುಕು ಕೂಡ ಹಸನಾಗಲಿ ಎನ್ನುವುದು ನನ್ನ ಪ್ರಾರ್ಥನೆಯಾಗಿದೆ. ಎಲ್ಲರಿಗೂ ಈದ್ ಮುಬಾರಕ್.

-ಮಹಮ್ಮದ್ ಷರೀಫ್ ಮಲಂಗಸಾಬ್ ಬುಡನಖಾನ್, ಇಸ್ಲಾಂ ಧರ್ಮಗುರುಗಳು, ಉಗರಗೋಳ, ಸವದತ್ತಿ ತಾಲ್ಲೂಕು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.