ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ಸೀಮಿತವಾದ ‘ಈದ್ ಉಲ್ ಫಿತ್ರ್’

ಕೊರೊನಾ ಭೀತಿಯಿಂದಾಗಿ ಸಾಮೂಹಿಕ ಪ್ರಾರ್ಥನೆ ಇರಲಿಲ್ಲ
Last Updated 25 ಮೇ 2020, 10:30 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮುಸ್ಲಿಮರು ‘ಈದ್ ಉಲ್ ಫಿತ್ರ್’ ಹಬ್ಬವನ್ನು ಸೋಮವಾರ ಮನೆಗಳಲ್ಲೇ ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಸರಳವಾಗಿ ಮತ್ತು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಮಾರಕ ಕೊರೊನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರಲಿಲ್ಲ.

ಮನೆಗಳಲ್ಲಿಯೇ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು, ಮಾರಕ ಕೊರೊನಾದಿಂದ ಎಲ್ಲರನ್ನೂ ಪಾರು ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದರು. ಸ್ನೇಹಿತರು, ಬಂಧುಗಳೊಂದಿಗೆ ಫೋನ್‌ನಲ್ಲೇ ಶುಭಾಶಯ ವಿನಿಮಯ ಮಾಡಿಕೊಂಡರು. ಉಳ್ಳವರು ನೆರೆಹೊರೆಯ ಬಡವರು ಹಾಗೂ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ದಾನ (ಜಕಾತ್) ಮಾಡಿದರು.

ಹಬ್ಬದ ಅಂಗವಾಗಿ ಮನೆಗಳಲ್ಲಿ ಹಾಲಿನಿಂದ ತಯಾರಿಸಿದ ‘ಶೀರ್‌ ಕುರ್ಮಾ’(ಶಾವಿಗೆ ಪಾಯಸ) ಎಂಬ ವಿಶೇಷ ಖಾದ್ಯವನ್ನು ಸವಿದರು. ಬಂಧು–ಮಿತ್ರರಿಗೂ ನೀಡಿ ಸಂಭ್ರಮ ಹಂಚಿಕೊಂಡರು. ಇದರೊಂದಿಗೆ, ಚಿಕನ್ ಬಿರಿಯಾನಿ, ಮಟನ್‌ ಬಿರಿಯಾನಿ, ಚಿಕನ್ ಕಬಾಬ್ ಮೊದಲಾದ ಮಾಂಸಾಹಾರವನ್ನು ಸವಿದು ಹಾಗೂ ಮಿತ್ರರೊಂದಿಗೆ ಹಂಚಿಕೊಂಡು ಹಬ್ಬ ಆಚರಿಸಿದರು.

ವಿವಿಧ ಈದ್ಗಾ ಮೈದಾನಗಳ ಬಳಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹಿಂದಿನ ವರ್ಷಗಳಂತೆ ಅಲ್ಲಿ ಸಂಭ್ರಮದ ವಾತಾವರಣ ಇರಲಿಲ್ಲ.

ನಗರದ ಅಂಜುಮನ್ ಈದ್ಗಾ ಮೈದಾನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಫ್ತಿಅಬ್ದುಲ್ ಅಜೀದ್, ‘ಈ ಬಾರಿ ಕೋವಿಡ್-19 ಲಾಕ್‍ಡೌನ್‍ನಿಂದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿಲ್ಲ. ಸರ್ಕಾರ ಕೊರೊನಾ ನಿಯಂತ್ರಿಸಲು ಕೈಗೊಂಡಿರುವ ಎಲ್ಲ ಕ್ರಮಗಳೂ ಸರಿಯಾಗಿವೆ. ದೇವರು ಆದಷ್ಟು ಬೇಗ ಈ ವೈರಸ್‍ ಅನ್ನು ತೊಲಗಿಸಲಿ ಎಂದು ಪ್ರಾರ್ಥಿಸಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಗಫೂರ್ ಘೀವಾಲೆ, ‘ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಒಳ್ಳೆಯ ಕ್ರಮ ಕೈಗೊಂಡಿದೆ. ಜನರೆಲ್ಲರೂ ಸಹಕಾರ ನೀಡುತ್ತಿದ್ದಾರೆ’ ಎಂದರು.

ಮುಖಂಡ ನಯೀಂ ಖತೀಬ್, ‘ಪ್ರತಿ ವರ್ಷ ಈದ್ಗಾ ಮೈದಾನದಲ್ಲಿ ನಾವು ಪ್ರಾರ್ಥನೆ ಮಾಡುತ್ತಿದ್ದೆವು. ಮಕ್ಕಳು ಆಟಿಕೆಗಳನ್ನು ತೆಗೆಸಿಕೊಂಡು ಖುಷಿಪಡುತ್ತಿದ್ದರು. ಬಂಧು–ಮಿತ್ರರನ್ನು ಆಲಂಗಿಸಿಕೊಂಡು ಶುಭಾಶಯ ಕೋರುತ್ತಿದ್ದೆವು. ಆದರೆ, ಈ ಬಾರಿ ಕೊರೊನಾ ಭೀತಿಯಿಂದ ಸಾಮೂಹಿಕ ಪ್ರಾರ್ಥನೆ ಮಾಡಲು ಸಾಧ್ಯವಾಗದೆ ಇರುವುದಕ್ಕೆ ತುಂಬಾ ನೋವಾಗಿದೆ. ಈ ವೈರಸ್ ವಿರುದ್ಧ ಹೋರಾಡಲು ದೇವರು ಜನರಿಗೆ ಶಕ್ತಿ ಕರುಣಿಸಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT