ಗುರುವಾರ , ನವೆಂಬರ್ 21, 2019
20 °C

ಉಪಚುನಾವಣೆ | ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವೆ: ಪ್ರಚಾರ ಆರಂಭಿಸಿದ ಲಖನ್

Published:
Updated:

ಬೆಳಗಾವಿ: 'ಗೋಕಾಕ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವೆ. ಈಗಾಗಲೇ ಪ್ರಚಾರವನ್ನೂ ಆರಂಭಿಸಿದ್ದೇನೆ. ಎದುರಾಳಿ ಯಾರು ಎನ್ನುವುದು ಗೊತ್ತಿಲ್ಲ' ಎಂದು ಮುಖಂಡ ಲಖನ್ ಜಾರಕಿಹೊಳಿ ಹೇಳಿದರು.

ಗೋಕಾಕ ಕ್ಷೇತ್ರದ ಧುಪದಾಳದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, '25 ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದೇನೆ. ವರಿಷ್ಠರಿಗೆ ಮನವಿ ಮಾಡಿದ್ದೇನೆ. ಟಿಕೆಟ್ ಸಿಗುವ ವಿಶ್ವಾಸ ಇದೆ. ಗೋಕಾಕ್ ಮತದಾರರ ನಾಡಿಮಿಡಿತ ನನಗೆ ಗೊತ್ತು. ನಮ್ಮ ಭಾಗದ ಜನರಿಗೆ ಬಹಳ ಅನ್ಯಾಯ ಆಗಿದೆ ಅದನ್ನು ಸರಿಪಡಿಸಬೇಕಿದೆ' ಎಂದರು.

'ಉಪಚುನಾವಣೆ ಐಎಎಸ್‌ ಪರೀಕ್ಷೆ ಇದ್ದಂತೆ. ನಮ್ಮ ಪರೀಕ್ಷೆ ಆರಂಭ‌ವಾಗಿದೆ. ರಮೇಶ್ ಜಾರಕಿಹೊಳಿ ಅವರ ರಾಜಕೀಯ ಗೊತ್ತು. ಅದಕ್ಕೆ ತಡವಾಗಿ ಕಣಕ್ಕಿಳಿದಿದ್ದೇನೆ' ಎಂದರು.

'ರಮೇಶ್ ಜಾರಕಿಹೊಳಿ ಮೂವರು ಅಳಿಯರ ಮಾತು ಕೇಳಿ ಬಿಜೆಪಿ ಸೇರಿದ್ದಾರೆ. ಗೋಕಾಕದಲ್ಲಿ ಅವರ ಅಳಿಯಂದರ ಭ್ರಷ್ಟಾಚಾರ ಬಹಳವಾಗಿದೆ. ಇದಕ್ಕೆ ಕಡಿವಾಣ ಹಾಕಲು ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಈಗ ಟಾಸ್ ಆಗಿದೆ. ನಾನು ಬ್ಯಾಟಿಂಗ್ ತೆಗೆದುಕೊಂಡಿದ್ದೇನೆ. ಪಂದ್ಯ ಬಳಿಕ ಆರಂಭವಾಗಲಿದೆ' ಎಂದು ಮಾರ್ಮಿಕವಾಗಿ ಹೇಳಿದರು.

'ಸತೀಶ್ ಜಾರಕಿಹೊಳಿ ನನ್ನ ತಲೆ ಕೆಡಸಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರಿ, ಒಳ್ಳೆಯದಾಗುತ್ತದೆ ಎಂದು ರಮೇಶಗೆ ಹೇಳಿದ್ದೆ. ಕೇಳಲಿಲ್ಲ. ಅವರ ಅಳಿಯಂದಿರು ತ್ರಿ ಇಡಿಯಟ್ಸ್ ಇದ್ದ ಹಾಗೆ. ಚುನಾವಣೆ ಮಾಡುವರೊಬ್ಬರು, ದುಡಿಯುವವರು ಒಬ್ಬರು, ಆಮೇಲೆ ಬಂದು ಮೇಯುವರೊಬ್ಬರು. ಅವರ ಭ್ರಷ್ಟಾಚಾರದ ಬಗ್ಗೆ ಹೇಳಲು ದಿನ‌ ಸಾಲದು' ಎಂದು ಟಾಂಗ್ ನೀಡಿದರು.

'ಬ್ಲಾಕ್ ಮೇಲ್ ಮತ್ತು ಗೂಂಡಾಗಿರಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ನಮ್ಮ ಕ್ಷೇತ್ರದ ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರನ್ನು ಬದುಕಿಸುವ ಸಲುವಾಗಿ ನಾನು ಸ್ಪರ್ಧಿಸುತ್ತಿದ್ದೇನೆ' ಎಂದರು.

ಪ್ರತಿಕ್ರಿಯಿಸಿ (+)