ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಬೇಟೆ: ಬಹಿರಂಗ ಪ್ರಚಾರ ಅಂತ್ಯ; ಮನೆಗಳಿಗೆ ಭೇಟಿ ನೀಡಿ ಮತಯಾಚಿಸಲು ಅವಕಾಶ

Last Updated 21 ಏಪ್ರಿಲ್ 2019, 15:27 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಬೆಳಗಾವಿ ಹಾಗೂ ಲೋಕಸಭಾ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಬಹಿರಂಗ ಮತ್ತು ಅಬ್ಬರದ ಪ್ರಚಾರಕ್ಕೆ ಭಾನುವಾರ ತೆರೆ ಬಿದ್ದಿತು.

ಏ. 23ರಂದು ಮತದಾನ ನಡೆಯಲಿದ್ದು, ಮುನ್ನಾ ದಿನವಾದ ಸೋಮವಾರ ಅಭ್ಯರ್ಥಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರು ಮತದಾರರ ಮನೆಗಳಿಗೆ ತೆರಳಿ ಮತ ಕೋರುವುದಕ್ಕೆ ಅವಕಾಶವಿದೆ.

ಬೆಳಗಾವಿ ಕ್ಷೇತ್ರದಲ್ಲಿ 57 ಹಾಗೂ ಚಿಕ್ಕೋಡಿ ಕ್ಷೇತ್ರದಲ್ಲಿ 11 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ, ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ– ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಕಂಡುಬಂದಿದೆ. ಬೆಳಗಾವಿಯಲ್ಲಿ ಬಿಜೆಪಿಯ ಸುರೇಶ ಅಂಗಡಿ–ಕಾಂಗ್ರೆಸ್‌ನ ಡಾ.ವಿ.ಎಸ್. ಸಾಧುನವರ, ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಹಾಗೂ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ನಡುವೆ ತುರುಸಿನ ಪೈಪೋಟಿ ನಡೆದಿದೆ. ಅಖಾಡದಲ್ಲಿ, ಇಬ್ಬರು ಹಾಲಿ ಸಂಸದರ ವಿರುದ್ಧ ಹೊಸಬರು ತೊಡೆ ತಟ್ಟಿರುವುದು ವಿಶೇಷ. ಕಾಂಗ್ರೆಸ್‌ ಜೊತೆ ಮೈತ್ರಿ ಇರುವುದರಿಂದಾಗಿ ಜೆಡಿಎಸ್‌ನವರು ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿಲ್ಲ. ಮೈತ್ರಿಕೂಟದ ಅಭ್ಯರ್ಥಿಗಳಿಗೆ ಜೆಡಿಎಸ್‌ ಬೆಂಬಲ ನೀಡಿದೆ.

ಎರಡೂ ಪಕ್ಷಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಬಿರುಸಿನ ಪ್ರಚಾರ ನಡೆಸಿದರು. ರೋಡ್ ಶೋ, ಸಮಾವೇಶಗಳ ಮೂಲಕ ತಮ್ಮ ಅಭ್ಯರ್ಥಿಗಳು, ಪಕ್ಷವನ್ನು ಬೆಂಬಲಿಸುವಂತೆ ಕೋರಿದರು.

ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಚಿಕ್ಕೋಡಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದರು. ಉಳಿದಂತೆ, ಕೇಂದ್ರ ಸಚಿವ ಡಾ.ಹರ್ಷವರ್ಧನ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ನಾಯಕರಾದ ಜಗದೀಶ ಶೆಟ್ಟರ, ಕೆ.ಎಸ್‌. ಈಶ್ವರಪ್ಪ, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ತೇಜಸ್ವಿನಿ ಅನಂತ್‌ಕುಮಾರ್, ತಾರಾ ಅನುರಾಧ, ಶ್ರುತಿ, ಮಾಳವಿಕಾ ಅವಿನಾಶ್, ಬಸನಗೌಡ ಪಾಟೀಲ ಯತ್ನಾಳ ಮತ್ತಿತರರು ಪ್ರಚಾರ ಕೈಗೊಂಡರು.

ಕಾಂಗ್ರೆಸ್ ಪರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಇದಲ್ಲದೇ, ನಾಯಕರಾದ ಸಿದ್ದರಾಮಯ್ಯ, ಎಚ್‌.ಕೆ. ಪಾಟೀಲ, ಆರ್‌.ವಿ. ದೇಶಪಾಂಡೆ, ಯಶೋಮತಿ ಠಾಕೂರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮೊದಲಾದವರು ಪ್ರಚಾರ ನಡೆಸಿದರು. ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರೆಡ್ಡಿ ಕೂಡ ಭಾಗವಹಿಸಿ ಮತ ಯಾಚಿಸಿದರು.

ಉತ್ತಮ ಪ್ರಜಾಕೀಯ ಪಕ್ಷದ ಪರವಾಗಿ ಚಿತ್ರನಟ ಉಪೇಂದ್ರ ಪ್ರಚಾರ ಮಾಡಿದರು. ಎರಡೂ ಕ್ಷೇತ್ರಗಳಲ್ಲಿ ಪಕ್ಷೇತರರಿಂದ ಅಬ್ಬರದ ಪ್ರಚಾರವೇನೂ ಕಂಡುಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT