ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಸಂಜೆ ಕಾಲೇಜು: ವಿದ್ಯಾರ್ಥಿಗಳಿಂದ ಹಾಸ್ಟೆಲ್‌ಗೆ ಬೇಡಿಕೆ

Published 19 ನವೆಂಬರ್ 2023, 4:34 IST
Last Updated 19 ನವೆಂಬರ್ 2023, 4:34 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ 11 ಜಿಲ್ಲೆಗಳಲ್ಲಿ ಸಂಜೆ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತು ಶಿಷ್ಯವೇತನ ಸೌಲಭ್ಯಕ್ಕೆ ಮೊರೆ ಇಟ್ಟಿದ್ದಾರೆ. 

ಉದ್ಯೋಗದ ಜೊತೆ ಪದವಿ ಶಿಕ್ಷಣ ಪಡೆಯಲು ಇಚ್ಛಿಸುವವರ ಅನುಕೂಲಕ್ಕೆ ಸರ್ಕಾರವು ಆರಂಭಿಸುವ ಕಾಲೇಜುಗಳಲ್ಲಿ ಪ್ರಸಕ್ತ ವರ್ಷ 526 ವಿದ್ಯಾರ್ಥಿಗಳು ಬಿ.ಕಾಂ ಹಾಗೂ ಬಿಸಿಎ ಪ್ರಥಮ ವರ್ಷದ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಅವರಲ್ಲಿ ದುಡಿಮೆ ಜೊತೆ ಕಲಿಯುವವರು ಅಲ್ಲದೇ ಇತರ ವಿದ್ಯಾರ್ಥಿಗಳೂ ಇದ್ದಾರೆ. ಅವರಿಗೆ ಹಾಸ್ಟೆಲ್‌ನ ಅಗತ್ಯವಿದ್ದು, ದಾವಣಗೆರೆ ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳಲ್ಲಿ ಬೇಡಿಕೆ ವ್ಯಕ್ತವಾಗಿದೆ.

ಆಯುಕ್ತರಿಗೆ ಪತ್ರ

‘ದಾವಣಗೆರೆಯ ಸಂಜೆ ಕಾಲೇಜಿನಲ್ಲಿ ಬಿ.ಕಾಂ ಮತ್ತು ಬಿಸಿಎ ಓದುತ್ತಿರುವ 194 ವಿದ್ಯಾರ್ಥಿಗಳು ಇದ್ದಾರೆ. ಅವರಲ್ಲಿ ಗ್ರಾಮೀಣ ಭಾಗದ ಬಡ ಕುಟುಂಬದವರೇ ಹೆಚ್ಚು. ಯಾವ ಉದ್ಯೋಗ ಇಲ್ಲದಿದ್ದರೂ ಅವರು ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಶಿಷ್ಯವೇತನ ಸೌಲಭ್ಯ ಕಲ್ಪಿಸಬೇಕಿದೆ’ ಎಂದು ಕಾಲೇಜಿನ ಪ್ರಾಚಾರ್ಯ ಸಿ.ಕೆ.ಕೊಟ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುತೇಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಿಸಿಎ ಕೋರ್ಸ್‌ ಲಭ್ಯವಿಲ್ಲ. ಖಾಸಗಿ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಿರುವ ಕಾರಣ ಸಾಮಾನ್ಯ (ರೆಗೂಲ್ಯರ್) ವಿದ್ಯಾರ್ಥಿಗಳು ನಮ್ಮಲ್ಲಿ ಪ್ರವೇಶ ಪಡೆದಿದ್ದಾರೆ. ನಿಯಮ ಸಡಿಲಿಸಿ ಹಾಸ್ಟೆಲ್‌ ಮತ್ತು ಶಿಷ್ಯವೇತನ ಸೌಲಭ್ಯ ಕಲ್ಪಿಸಿದರೆ, ಅವರ ಓದಿಗೆ ಅನುಕೂಲವಾಗುತ್ತದೆ’ ಎಂದರು.

ಇದರ ಹಿನ್ನೆಲೆಯಲ್ಲಿ ಕೊಟ್ರಪ್ಪ ನವೆಂಬರ್ 7ರಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಎಲ್ಲೆಲ್ಲಿ ಎಷ್ಟು ವಿದ್ಯಾರ್ಥಿಗಳು?

ಪ್ರಸಕ್ತ ವರ್ಷ 2023–24 ನೇ ಸಾಲಿನಲ್ಲಿ ರಾಜ್ಯದ 11 ಸಂಜೆ ಕಾಲೇಜುಗಳಲ್ಲಿ ಒಟ್ಟು 526 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಬೆಂಗಳೂರಿನ ಕಾಲೇಜಿನಲ್ಲಿ 165 ತುಮಕೂರಿನಲ್ಲಿ 130 ದಾವಣಗೆರೆಯಲ್ಲಿ 103 ವಿಜಯಪುರದಲ್ಲಿ 54 ಮೈಸೂರಿನಲ್ಲಿ 35 ಶಿವಮೊಗ್ಗದಲ್ಲಿ 25 ಮಂಗಳೂರಿನಲ್ಲಿ 12 ಬಳ್ಳಾರಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಇದ್ದಾರೆ. ಬೆಳಗಾವಿ ಧಾರವಾಡ ಮತ್ತು ಕಲಬುರಗಿಯಲ್ಲಿ ಯಾರೂ ಪ್ರವೇಶ ಪಡೆದಿಲ್ಲ.

ನಮ್ಮಲ್ಲಿ ಉದ್ಯೋಗ ಮಾಡುತ್ತ ಕಲಿಯುವವರ ಜೊತೆ ಸಾಮಾನ್ಯ ವಿದ್ಯಾರ್ಥಿಗಳು ಸಂಜೆ ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ. ಅವರಿಗೆ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ
ಬಿ.ಚಂದ್ರಶೇಖರ, ಪ್ರಾಚಾರ್ಯ, ಸರ್ಕಾರಿ ಆರ್‌.ಸಿ. ಕಾಲೇಜು, ಬೆಂಗಳೂರು
ಸಂಜೆ ಕಾಲೇಜುಗಳಲ್ಲಿ ಸಾಮಾನ್ಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಪಾಲಿಸಿದ ಮಾನದಂಡ ಯಾವುದು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವೆ. ನಂತರ ಹಾಸ್ಟೆಲ್‌ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳುವೆ. –
ಜಿ.ಜಗದೀಶ, ಆಯುಕ್ತ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT