ಸೋಮವಾರ, ಸೆಪ್ಟೆಂಬರ್ 20, 2021
22 °C
ಮಹದಾಯಿ ಯೋಜನೆ ಅನುಷ್ಠಾನ, ಸುವರ್ಣ ವಿಧಾನಸೌಧಕ್ಕೆ ಶಕ್ತಿ ತುಂಬಬೇಕು

ಉತ್ತರ ಕರ್ನಾಟಕ: ಹೊಸ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ನಿರೀಕ್ಷೆಗಳ ‘ಮಹಾಪೂರ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಈ ಭಾಗದವರೇ ಆಗಿರುವ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ, ಜಿಲ್ಲೆಯ ಜನರ ನಿರೀಕ್ಷೆಗಳು ಗರಿಗೆದರಿವೆ.

ಅಭಿವೃದ್ಧಿಯಲ್ಲಿ ಆಗಿರುವ ಹಿನ್ನಡೆ, ಗಡಿ–ಭಾಷೆಗೆ ಸಂಬಂಧಿಸಿದ ಸಮಸ್ಯೆಗಳು, ನೀರಾವರಿ ಯೋಜನೆಗಳ ಸ್ಥಿತಿಗತಿ ಹಾಗೂ ಇಲ್ಲಿನ ಜನರ ಬಹು ವರ್ಷಗಳ ಬೇಡಿಕೆಗಳ ಪರಿಚಯ ಉಳ್ಳವರಾಗಿರುವುದರಿಂದಾಗಿ ಜನರಿಗೆ ಸಹಜವಾಗಿಯೇ ಅವರ ಮೇಲಿನ ನಿರೀಕ್ಷೆ ಹೆಚ್ಚಿದೆ.

ಮಹದಾಯಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಹತ್ವದ್ದಾಗಿದೆ. ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಈ ಬಾರಿಯ ಬಜೆಟ್‌ನಲ್ಲಿ ‘ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ₹ 1,677 ಕೋಟಿ ಅನುದಾನ ಒದಗಿಸಲಾಗುವುದು’ ಎಂದು ಹೇಳಿದ್ದರು. ಹಿಂದಿನ ವರ್ಷದ ಬಜೆಟ್‌ನಲ್ಲೂ ಇದನ್ನು ಘೋಷಿಸಲಾಗಿತ್ತು. ಆಗ ₹ 500 ಕೋಟಿ ಮೀಸಲಿಡಲಾಗಿತ್ತು. ಆ ಹಣ ಬಳಕೆಯೇ ಆಗಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ಆರಂಭಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿಯೇ ದೊರೆತಿಲ್ಲ!

ಸಂಚಾಲಕರೂ ಆಗಿದ್ದರು:

ಈ ಬಾರಿ ಹೆಚ್ಚಿನ ಪ್ರಮಾಣದ ಅನುದಾನ ಘೋಷಿಸಲಾಗಿದೆ. ಇದನ್ನು ಬಳಸಿಕೊಂಡು ಕಾಮಗಾರಿಗೆ ಚಾಲನೆ ನೀಡುವ ಹೊಣೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮೇಲಿದೆ. ಕಳಸಾ ಬಂಡೂರಿ ಮಹದಾಯಿ ನದಿ ತಿರುವ ಯೋಜನೆಯ ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದರು. ಜಲಸಂಪನ್ಮೂಲ ಸಚಿವರೂ ಆಗಿದ್ದರಿಂದ ಯೋಜನೆಯ ಮಹತ್ವದ ಬಗ್ಗೆ ಅವರಿಗೆ ಅರಿವಿದೆ. ಮಹದಾಯಿ ನ್ಯಾಯಮಂಡಳಿಯ ತೀರ್ಪಿನಂತೆ ನಮ್ಮ ಪಾಲಿನ ನೀರನ್ನು ನಾವು ಪಡೆದುಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಅನುಷ್ಠಾನದ ವಿಷಯದಲ್ಲಿ ಮುಖ್ಯಮಂತ್ರಿ ಬದ್ಧತೆ ತೋರುತ್ತಾರೆಯೇ ಎನ್ನುವ ಕುತೂಹಲವೂ ಜನರಲ್ಲಿದೆ.

ಇಲ್ಲಿನ ಸುವರ್ಣ ವಿಧಾನಸೌಧವನ್ನು ಉತ್ತರ ಕರ್ನಾಟಕದ ಶಕ್ತಿಕೇಂದ್ರವನ್ನಾಗಿ ಮಾಡುವ ಕೆಲಸ ನಡೆದಿಲ್ಲ. ಇಲ್ಲಿನ ಜನರ ಬೇಡಿಕೆಯಂತೆ ಜನರಿಗೆ ಅನುಕೂಲವಾಗುವ ರಾಜ್ಯಮಟ್ಟದ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸಬೇಕು ಎನ್ನುವ ಆಗ್ರಹ ಹಿಂದಿನಿಂದಲೂ ಇದೆ. ಮಠಾಧೀಶರು ಮತ್ತು ಹೋರಾಟಗಾರರು ಈ ಬಗ್ಗೆ ದನಿ ಎತ್ತುತ್ತಲೇ ಬಂದಿದ್ದಾರೆ. ಆಗಾಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಯ ಕೂಗು ಕೂಡ ಕೇಳಿಬರುತ್ತಿದೆ. ಪ್ರಾದೇಶಿಕ ಅಸಮತೋಲನ ನಿವಾರಿಸುವ ಮೂಲಕ ಪ್ರತ್ಯೇಕ ರಾಜ್ಯದ ಕೂಗು ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಮುಖ್ಯಮಂತ್ರಿ ಮೇಲಿದೆ ಎನ್ನುತ್ತಾರೆ ಹೋರಾಟಗಾರರು.

ಕಾಮಗಾರಿ ಆರಂಭವಾಗಲಿ: ಗಡಿ ಮತ್ತು ನೆಲದ ಭಾಷೆಯ ವಿಚಾರ ಬಂದಾಗ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ತಗಾದೆ ತೆಗೆಯುತ್ತಲೇ ಬಂದಿದೆ. ನಾಡ ವಿರೋಧಿ ಧೋರಣೆ ತಳೆಯುತ್ತಲೇ ಬಂದಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎನ್ನುವುದು ಕನ್ನಡ ಹೋರಾಟಗಾರರ ಆಗ್ರಹವಾಗಿದೆ.

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ಪರಿಶ್ರಮದ ಫಲವಾಗಿ ಘೋಷಣೆ ಆಗಿರುವ ಧಾರವಾಡ–ಕಿತ್ತೂರು–ಬೆಳಗಾವಿ ನಡುವೆ 73 ಕಿ.ಮೀ. ಉದ್ದದ ಹೊಸ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ₹ 463 ಕೋಟಿ ಅನುದಾನ ಮೀಸಲಿಡಲಾಗಿದೆ. ಆದರೆ, ಇದಕ್ಕೆ ಅತ್ಯಗತ್ಯವಾಗಿರುವ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ. ಈ ನಿಟ್ಟಿನಲ್ಲೂ ಗಮನಹರಿಸಿ, ಅತ್ಯಂತ ಮಹತ್ವದ ಈ ಯೋಜನೆಗೆ ಚಾಲನೆ ನೀಡಬೇಕಾಗಿದೆ. ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕು ಎನ್ನುವ ಆಗ್ರಹ ದಶಕಗಳಿಂದಲೂ ಆ ಭಾಗದ ತಾಲ್ಲೂಕುಗಳ ಜನರಲ್ಲಿದೆ.

2019ರಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಮನೆ–ಬೆಳೆಗಳನ್ನು ಕಳೆದುಕೊಂಡರಲ್ಲಿ ಹಲವರಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಈ ನಡುವೆ, ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಬಂದಿದ್ದು, ಜನರು ಅತಂತ್ರವಾಗಿದ್ದಾರೆ. ಸಮರ್ಪಕ ಪರಿಹಾರ ಕಲ್ಪಿಸುವ ಮೂಲಕ ನಮ್ಮ ಕಣ್ಣೀರು ಒರೆಸಬೇಕು ಎನ್ನುವ ಆಗ್ರಹ ಸಂತ್ರಸ್ತರದಾಗಿದೆ.

-----

ಸ್ಪಂದಿಸಬೇಕು

ನೆಲ, ಜಲ, ಭಾಷೆ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಅವರಿಗೆ ಮುಕ್ತ ಅವಕಾಶ ಸಿಗಬೇಕಷ್ಟೆ. ಸಿಕ್ಕರೆ ಅವರು ‘ಬದಲಾವಣೆ ಬಸಣ್ಣ’ ಆಗಬಲ್ಲರೆಂಬ ವಿಶ್ವಾಸ ನನ್ನದು. ಗಡಿ ನಾಡು ಬೆಳಗಾವಿಗರ ನಿರೀಕ್ಷೆಗಳಿಗೆ ಸ್ಪಂದಿಸಬೇಕು.

–ಅಶೋಕ ಚಂದರಗಿ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ಅನ್ಯಾಯ ಸರಿಪಡಿಸಬೇಕು

ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಮುಖ್ಯಮಂತ್ರಿ ಸರಿಪಡಿಸಬೇಕು. ಪ್ರಮುಖ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಇಲ್ಲಿ ನಿಯಮಿತವಾಗಿ ವಿಧಾನಮಂಡಲ ಅಧಿವೇಶನ ನಡೆಸಬೇಕು.

–ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು