ಗುರುವಾರ , ಆಗಸ್ಟ್ 22, 2019
27 °C
39ನೇ ರೈತ ಹುತಾತ್ಮ ದಿನಾಚರಣೆ

ರೈತರ ಬೃಹತ್‌ ಸಮಾವೇಶ 21ಕ್ಕೆ

Published:
Updated:

ಬೆಳಗಾವಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬರಮುಕ್ತ ಕರ್ನಾಟಕ ಆಂದೋಲನ ಮತ್ತು ಸ್ವರಾಜ್‌ ಇಂಡಿಯಾ ಪಕ್ಷದ ಸಹಯೋಗದಲ್ಲಿ 39ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜುಲೈ 21ರಂದು ಮಧ್ಯಾಹ್ನ 12ಕ್ಕೆ ಇಲ್ಲಿನ ಗಾಂಧಿ ಭವನದಲ್ಲಿ ರೈತರ ಸಮಾವೇಶ ಆಯೋಜಿಸಲಾಗಿದೆ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾವೇಶವನ್ನು ಜಲತಜ್ಞ ರಾಜೇಂದ್ರ ಸಿಂಗ್ ಉದ್ಘಾಟಿಸಲಿದ್ದಾರೆ. ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ ಚಾಮರಸ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡುವರು’ ಎಂದರು.

‘ರೈತರ ಹಕ್ಕುಗಳ ಕುರಿತು 2018ರಲ್ಲಿ ವಿಶ್ವಸಂಸ್ಥೆ ಘೋಷಿಸಿರುವ ಮಾಹಿತಿಯ ಮುದ್ರಣವನ್ನು ಸಂಘದ ಸಂಸ್ಥಾಪಕ ಪ್ರೊ. ರವಿವರ್ಮ ಕುಮಾರ ಬಿಡುಗಡೆಗೊಳಿಸಿ ಮಾತನಾಡುವರು. ರೈತ ಮುಖಂಡ ದರ್ಶನ ಪುಟ್ಟಣ್ಣಯ್ಯ ಅವರು ಸಂಘದ ನೂತನ ವೆಬ್‌ಸೈಟ್‌ಗೆ ಚಾಲನೆ ನೀಡುವರು. ಇದಕ್ಕೂ ಮುಂಚೆ ಬೆಳಿಗ್ಗೆ 11ಕ್ಕೆ ರಾಣಿ ಚನ್ನಮ್ಮ ವೃತ್ತದಿಂದ ಸಮಾವೇಶದ ವೇದಿಕೆಯವರೆಗೆ ಬೃಹತ್‌ ಮೆರವಣಿಗೆ ನಡೆಯಲಿದೆ’ ಎಂದು ಹೇಳಿದರು.

ಬರಮುಕ್ತ ಕರ್ನಾಟಕಕ್ಕೆ ಪಣ: ‘ಸಮಾವೇಶದಲ್ಲಿ ವಿವಿಧ ಜಿಲ್ಲೆಗಳಿಂದ 5,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಬರಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ತೊಡುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸುವುದು, ರಾಜ್ಯ ಸಮ್ಮಿಶ್ರ ಸರ್ಕಾರದ ವೈಫಲ್ಯ ಹಾಗೂ ವಿರೋಧ ಪಕ್ಷದ ದಿವಾಳಿತನವನ್ನು ಬಯಲಿಗೆಳೆವುದು ಸಮಾವೇಶದ ಮುಖ್ಯ ಉದ್ದೇಶಗಳಾಗಿವೆ’ ಎಂದು ತಿಳಿಸಿದರು.

ಸಂಘದ ಗೌರವಾಧ್ಯಕ್ಷ ಚಾಮರಸ ಪಾಟೀಲ, ಪ್ರಧಾನ ಕಾರ್ಯದರ್ಶಿ ನುಲೆನೂರ ಶಂಕರಪ್ಪ ಇದ್ದರು.

Post Comments (+)