ಚಕ್ಕಾ ಜಾಮ್: ಹಿರೇಬಾಗೇವಾಡಿ ಟೋಲ್ ಬಳಿ ರೈತರಿಂದ ರಸ್ತೆ ತಡೆ

ಬೆಳಗಾವಿ: ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಚಳವಳಿ ಬೆಂಬಲಿಸಿ ಭಾರತೀಯ ಕೃಷಿಕ ಸಮಾಜ, ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳವರು ಇಂದು ಹೆದ್ದಾರಿ ಬಂದ್ ಮಾಡಲು ನಿರ್ಧರಿಸಿದ್ದಾರೆ.
‘ರೈತರ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಹೋರಾಟನಿರತ ರೈತರ ಮೇಲಿನ ದೌರ್ಜನ್ಯ ಖಂಡಿಸಿ ದೆಹಲಿಯ ಸಂಯುಕ್ತ ಕಿಸಾನ್ ಮೋರ್ಚಾ ಕರೆ ಮೇರೆಗೆ ಮಧ್ಯಾಹ್ನ 12ರಿಂದ 2ರವರೆಗೆ ತಾಲ್ಲೂಕಿನ ಹಿರೇಬಾಗೇವಾಡಿ ಟೋಲ್ ಗೇಟ್ ಸಮೀಪ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.
‘ರೈತ ಸಂಘಟನೆ ನೇತೃತ್ವದಲ್ಲಿ ರಸ್ತೆ ತಡೆದು ರೈತರ ಶಕ್ತಿಯನ್ನು ಸರ್ಕಾರಕ್ಕೆ ತೋರಿಸಬೇಕು. ರೈತ-ದಲಿತ ಕಾರ್ಮಿಕ ಐಕ್ಯ ಹೋರಾಟದ ಸಹಕಾರದೊಂದಿಗೆ ಚಳವಳಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರೈತರು, ಕಾರ್ಮಿಕ, ವಿದ್ಯಾರ್ಥಿ, ಮಹಿಳಾ ಶಕ್ತಿ ಮತ್ತು ಕನ್ನಡ ಪರ ಸಂಘಟನೆಗಳು ಭಾಗವಹಿಸಲಿವೆ’ ಎಂದು ಹೇಳಿದರು.
ರೈತ ಸಮುದಾಯಕ್ಕೆ ಮಾರಕವಾಗಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಎಐಕೆಕೆಎಂಎಸ್ ಮತ್ತು ಎಐಡಿವೈಒ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಹಳ್ಳಿ ಹಳ್ಳಿಗಳಲ್ಲೂ ರೈತರು ಪ್ರತಿಭಟಿಸಲಿದ್ದಾರೆ ಎಂದು ರೈತ ಮುಖಂಡ ಬಾಬಾಗೌಡ ಪಾಟೀಲ ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹಿರೇಬಾಗೇವಾಡಿ ಹೆದ್ದಾರಿ ಸೇರಿದಂತೆ ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.