ಹೊಸಪೇಟೆ (ವಿಜಯನಗರ): ದಕ್ಷಿಣ ಕಾಶಿ, ಶಿವನು ಮನ್ಮಥನನ್ನು ದಹಿಸಿದ ಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ಹಂಪಿಯ ವಿರೂಪಾಕ್ಷ ದೇವಸ್ಥಾನದ ಮುಂಭಾಗ ಬುಧವಾರ ನೂರಾರು ವಿದೇಶಿಯರ ಸಹಿತ ಸಾವಿರಾರು ಮಂದಿ ಬಣ್ಣದೋಕುಳಿಯಲ್ಲಿ ಮಿಂದೆದ್ದು ಹೋಳಿ ಆಚರಿಸಿದರು.

ಬೆಳಿಗ್ಗೆ 10 ಗಂಟೆಯಿಂದಲೇ ದೇವಸ್ಥಾನದ ಮುಂಭಾಗ ಸೇರತೊಡಗಿದ ಜನರು ಪರಸ್ಪರ ಬಣ್ಣ ಹಚ್ಚಿಕೊಂಡು, ಹೋಳಿಯ ಶುಭಾಶಯ ಕೋರಿದರು. ಒಬ್ಬೊಬ್ಬರಾಗಿ ವಿದೇಶಿಯರು ಬರುತ್ತಿದ್ದಂತೆಯೇ ಹೋಳಿಯ ರಂಗು ಏರಿಬಿಟ್ಟಿತು.

ನೋಡುತ್ತ ನೋಡುತ್ತ ವಿದೇಶಿಯರ ಸಂಖ್ಯೆ ನೂರಾರು ದಾಟಿ ಹೋಯಿತು. ಓಕುಳಿಯಲ್ಲಿ ಮಿಂದೆದ್ದವರ ಬಣ್ಣವೆಲ್ಲಾ ಒಂದೇ ಆಗಿತ್ತು. ಹೀಗಾಗಿ ಅಪರೂಪಕ್ಕೆ ಎಂಬಂತೆ ಏಕಬಣ್ಣದ ಜಗತ್ತಿನ ತುಣುಕೊಂದು ಹಂಪಿಯ ರಥಬೀದಿಯಲ್ಲಿ ಬಂದು ಬಿದ್ದಿತೇನೋ ಎಂಬ ಭಾವನೆ ಮೂಡಿತು.

ವಿರೂಪಾಕ್ಷ ದೇವಸ್ಥಾನದ ಮುಂಭಾಗದಿಂದ ಜನತಾ ಪ್ಲಾಟ್ನಲ್ಲಿ ಒಂದು ಸಣ್ಣ ಸುತ್ತು ಹಾಕಿದ ವಿದೇಶಿಯರು ಹಾಗೂ ಸ್ಥಳೀಯ ಯುವಕ, ಯುವತಿಯರು, ಮತ್ತೊಮ್ಮೆ ದೇವಸ್ಥಾನದ ಮುಂಭಾಗದಿಂದ ಬಂದು, ಜನತಾ ಪ್ಲಾಟ್ನ ಒಳಭಾಗದಲ್ಲಿ ಓಕುಳಿಯಾಟ ಆಡುತ್ತ ತುಂಗಭದ್ರಾ ನದಿಯತ್ತ ತೆರಳಿ ಸ್ನಾನ ಮಾಡಿದರು. ಸುಮಾರು ಮೂರು ಗಂಟೆ ಹೊತ್ತು ನೂರಾರು ವಿದೇಶಿ ಪ್ರವಾಸಿಗರು ಸ್ಥಳೀಯರೊಂದಿಗೆ ಸೇರಿ ಆಡಿದ ರಂಗಿನಾಟ, ಮಾಡಿದ ನೃತ್ಯ, ಎರಚಿದ ಬಣ್ಣ ಸೃಷ್ಟಿಸಿದ ಲೋಕ ಅದ್ಭುತವಾಗಿತ್ತು. ಎಲ್ಲರ ಬಣ್ಣವೂ ಒಂದೇ ರೀತಿ ಕಾಣಿಸಿತು. ಜಗತ್ತು ಬಯಸಿದ ಅಪರೂಪದ ಸನ್ನಿವೇಶ ಇಲ್ಲಿ ನಿರ್ಮಾಣವಾಗಿತ್ತು.

ವಿದೇಶಿಯರನ್ನು ಸಾಮಾನ್ಯವಾಗಿ ಅವರ ಬಣ್ಣದಿಂದಲೇ ಗುರುತಿಸಲಾಗುತ್ತದೆ. ಹೋಳಿ ರಂಗಿನಲ್ಲಿ ಮಿಂದೆದ್ದ ಅವರ ಬಣ್ಣವನ್ನು ಗುರುತಿಸುವುದೇ ಕಷ್ಟಕರ ಎಂಬಂತೆ ಅವರೆಲ್ಲರೂ ಕೆಂಪು, ನೀಲಿ, ಹಳದಿ, ಹಸಿರು, ಗುಲಾಬಿ, ಕಂದು ಬಣ್ಣದಲ್ಲಿ ತೋಯ್ದುಬಿಟ್ಟಿದ್ದರು. ಅವರು ಹಾಕಿದ ಟಿಶರ್ಟ್, ಬನಿಯನ್, ಸ್ಕರ್ಟ್, ಮಿಡಿ, ಫ್ರಾಕ್ಗಳೆಲ್ಲವೂ ಬಣ್ಣಗಳಲ್ಲಿ ರಂಗೇರಿದ್ದವು. ಅವರ ಉಡುಗೆ, ತೊಡುಗೆ, ಕುಣಿತದ ಶೈಲಿ, ಸ್ಥಳೀಯರೊಂದಿಗೆ ಬೆರೆತ ಬಗೆ, ಯಾವ ಕೋನದಿಂದ ನೋಡಿದರೂ ಅವರು ವಿದೇಶಿಯರು ಎಂದು ಗುರುತಿಸಲಾಗದಷ್ಟರ ಮಟ್ಟಿಗೆ ಬಣ್ಣದಲ್ಲಿ ಲೀನವಾಗಿದ್ದರು. ಸ್ಥಳೀಯ ಯುವಕ, ಯುವತಿಯರೂ, ಇತರ ಪ್ರವಾಸಿಗರು ಸಹ ಅವರಿಗೆ ಸಾಥ್ ನೀಡಿದ್ದರು. ಅವರೆಲ್ಲ ಮುಂದೆ ಸಾಗುತ್ತಿದ್ದಂತೆಯೇ ಬಣ್ಣವನ್ನು ತುಂಬಿದ್ದ ತಳ್ಳುಗಾಡಿಗಳೂ ಹಿಂದಿನಿಂದ ಅನುಸರಿಸಿ ಬಂದವು. ಹೀಗಾಗಿ ಅಲ್ಲಿ ಬಣ್ಣಗಳಿಗೆ ಕೊರತೆಯೇ ಇರಲಿಲ್ಲ.

ಡಿಜೆ ಇಲ್ಲ:

ಹಂಪಿ ಹೋಳಿಯಾಟದ ವಿಶೇಷವೆಂದರೆ ಇಲ್ಲಿ ಡಿ.ಜೆ ಸದ್ದು ಇಲ್ಲ. ಕೇವಲ ಡೊಳ್ಳು, ತಮಟೆ ಸದ್ದಿಗೆ ಹೆಜ್ಜೆ ಹಾಕುವುದು ಇಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಡಿಜೆ ಸದ್ದನ್ನು ಬಯಸಿ ಬಂದ ಕೆಲವು ಯುವಕರಿಗೆ ಇದರಿಂದ ನಿರಾಸೆ ಆಗಿದ್ದರೂ, ಹೆಚ್ಚಿನವರು ಇದೇ ಸನ್ನಿವೇಶವನ್ನು ಬಹಳ ಇಷ್ಟಪಟ್ಟರು.

ಹಂಪಿಯ ಓಕುಳಿ:

ಹಂಪಿಯಲ್ಲಿ ನಡೆಯುವ ಓಕುಳಿಯಾಟ ಪ್ರಮುಖ ಪ್ರವಾಸಿ ಆಕರ್ಷಣೆಯೂ ಹೌದು. ಹೋಳಿ ಸಮಯಕ್ಕೆ ಹಂಪಿಗೆ ಬರುವ ವಿದೇಶಿಯರ ಸಂಖ್ಯೆ ಅಧಿಕವೇ ಇದೆ. ಹೋಳಿಗಾಗಿ ಹಂಪಿಯ ಪ್ರವಾಸವನ್ನು ಮುಂದೂಡುವವರೂ ಅಧಿಕ ಇದ್ದಾರೆ. ಇಲ್ಲಿನ ಬಿಸಿಲು ಎಷ್ಟೇ ಪ್ರಖರ ಇರಲಿ, ಹಂಪಿಯ ಹೋಳಿಯನ್ನು ತಪ್ಪಿಸಿಕೊಳ್ಳದ ಅದೆಷ್ಟೋ ನಾಗರಿಕರು ಇದೇ ಸಮಯಕ್ಕೆ ಇಲ್ಲಿಗೆ ಬರುವುದು ವರ್ಷಗಳಿಂದ ನಡೆಯುತ್ತಿದೆ. ಈ ವರ್ಷ ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿದೇಶಿಯರು ಬಣ್ಣದೋಕುಳಿಯ ರಂಗನ್ನು ಹೆಚ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.