ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಗಮನಸೆಳೆದ ವಸ್ತ್ರವಿನ್ಯಾಸ ಪ್ರದರ್ಶನ

Last Updated 16 ಅಕ್ಟೋಬರ್ 2021, 14:21 IST
ಅಕ್ಷರ ಗಾತ್ರ

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಫ್ಯಾಷನ್ ಟೆಕ್ನಾಲಜಿ ಮತ್ತು ಅಪರಲ್ ಡಿಸೈನ್ ಮಹಿಳಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಶನಿವಾರ ಪ್ರಸ್ತುತಪಡಿಸಿದ ಫ್ಯಾಷನ್ ಷೋ ‘ವಿನ್ಯಾಸ’ ಆಕರ್ಷಿಸಿತು.

ಜೆಎನ್‌ಎಂಸಿ ಆವರಣದ ಕೆಎಲ್‌ಇ ಶತಮಾನೋತ್ಸವ ಸ್ಮಾರಕ ಜೀರಗೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ವಿವಿಧ ವಸ್ತವಿನ್ಯಾಸವನ್ನು ಬಿಂಕ–ಬಿನ್ನಾಣದ ನಡಿಗೆಯ ಮೂಲಕ ಪ್ರದರ್ಶಿಸಿದರು. ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾದರು.

ತಮ್ಮ ಕೌಶಲದಿಂದ ಪ್ರಥಮ ಬಾರಿಗೆ ವಿನ್ಯಾಸಗೊಳಿಸಿದ 30 ಥೀಮ್‌ಗಳನ್ನು ಅನಾವರಣಗೊಳಿಸಿದರು. 150 ವಿನ್ಯಾಸಗಳನ್ನು 31 ರೂಪದರ್ಶಿಗಳು ಮತ್ತು ವಿದ್ಯಾರ್ಥಿನಿಯರು ಮಾರ್ಜಾಲ ನಡಿಗೆಯ ಮೂಲಕ ಪ್ರಸ್ತುತಪಡಿಸಿದರು.

ಇದಕ್ಕೂ ಮುನ್ನ ಉದ್ಘಾಟಿಸಿದ ರೂಪದರ್ಶಿ ಸ್ನೇಹಲ್ ಬಿರ್ಜೆ, ‘ಸೌಂದರ್ಯ ಎನ್ನುವುದು ದೈಹಿಕವಾದುದಲ್ಲ; ಅದು ಆಂತರಿಕವಾದುದಾಗಿದೆ’ ಎಂದರು.

‘ಫ್ಯಾಷನ್ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು ರೂಪಾಂತರವನ್ನೂ ಹೊಂದುತ್ತಿದೆ. ಈ ಬಣ್ಣದ ಲೋಕ ಸುಂದರವಾಗಿ ಕಾಣುತ್ತದೆ ಅಥವಾ ಜನರು ಇಷ್ಟಪಡುತ್ತಾರೆ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಈ ಕ್ಷೇತ್ರಕ್ಕೆ ಹೋಗಲು ಸಾಕಷ್ಟು ಪರಿಶ್ರಮ ಮತ್ತು ತ್ಯಾಗದ ಅವಶ್ಯಕತೆ ಇದೆ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ ಬಹಳ ಅವಕಾಶಗಳಿವೆ. ಅದನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ವೇದಶ್ರೀ ಕೆ. ಮಾತನಾಡಿದರು.

‘ಮಂಥನ–21’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಪ್ರಸ್ತುತ ಸಾಲಿನಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಶ್ರುತಿ ಮುರುಳಿ ಅವರನ್ನು ಸತ್ಕರಿಸಿದರು. ಸ್ನೇಹಲ್‌ ಬಿರ್ಜೆ, ತೀರ್ಪುಗಾರರಾಗಿದ್ದ ಅರುಣ ಮತ್ತಿಕೊಪ್ಪ ಹಾಗೂ ಶ್ರೀದೇವಿ ಕಾಳೆ ಅವರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ವಿನ್ಯಾಸ ಮಾಡಿದವರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪ್ರಮಾಣಪತ್ರ ವಿತರಿಸಲಾಯಿತು.

ಶ್ವೇತಾ ನಿರೂಪಿಸಿದರು. ಶರ್ಲಿ ಐವನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT