ಶನಿವಾರ, ಸೆಪ್ಟೆಂಬರ್ 18, 2021
24 °C

ಆಜಾದಿ ಕಾ ಅಮೃತ ಮಹೋತ್ಸವ: ಮನೆಗಳಿಗೆ ಜಿಲ್ಲಾಧಿಕಾರಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ನಗರದಲ್ಲಿರುವ ಸ್ವಾತಂತ್ರ್ಯ ಯೋಧರ ಮನೆಗೆ ತೆರಳಿ ಅವರನ್ನು ಶನಿವಾರ ಸನ್ಮಾನಿಸಿದರು.

ಸ್ವಾತಂತ್ರ್ಯ ಗಳಿಸಿ 75ನೇ ವರ್ಷದ ಸವಿನೆನಪಿಗಾಗಿ ದೇಶದಾದ್ಯಂತ ಮಾರ್ಚ್ 12ರಿಂದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ವರ್ಷಾಚರಣೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಯೋಧರ ಮನೆ ಮನೆಗಳಿಗೆ ತೆರಳಿ ಅವರಿಗೆ ಸರ್ಕಾರದಿಂದ ಗೌರವ ಸಮರ್ಪಿಸಲಾಯಿತು. ಚನ್ನಮ್ಮ ನಗರದಲ್ಲಿರುವ ಶತಾಯುಷಿ ರಾಜೇಂದ್ರ ಧರ್ಮಪ್ಪ ಕಲಘಟಗಿ ಅವರ ನಿವಾಸದಲ್ಲಿ ಅವರನ್ನು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಗೌರವಿಸುವ ಸೌಭಾಗ್ಯ ನಮ್ಮದು. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಮಹನೀಯರ ಮನೆ ಮನೆಗೆ ತೆರಳಿ ಗೌರವಿಸಲಾಗಿದೆ. ಚಳವಳಿಯಲ್ಲಿ ಅವರು ಪಾಲ್ಗೊಂಡ ಕ್ಷಣಗಳನ್ನು ಮೆಲುಕು‌ ಹಾಕುವ ಮೂಲಕ ನಮಗೆ ಸ್ಫೂರ್ತಿಯಾಗಿದ್ದಾರೆ. ಇದರಿಂದ ಸ್ವಾತಂತ್ರ್ಯ ಯೋಧರ ಪರಿಚಯ ಮತ್ತು ಹೋರಾಟದ ರೂಪುರೇಷೆಗಳನ್ನು ತಿಳಿದುಕೊಳ್ಳುವ ಭಾಗ್ಯ ನಮಗೆ ಲಭಿಸಲಿದೆ’ ಎಂದರು.

‘ಶತಾಯುಷಿ ರಾಜೇಂದ್ರ ಕಲಘಟಗಿ ಅವರು ನಮಗೆ ಸ್ಫೂರ್ತಿ’ ಎಂದು ಹೇಳಿದರು.

ಹೋರಾಟದ ಮೆಲುಕು:

ಹೋರಾಟದ ನೆನಪುಗಳನ್ನು ಮೆಲುಕು ಹಾಕಿದ ಕಲಘಟಗಿ ಅವರು, ‘ನನಗೆ ಈಗ 100 ವರ್ಷ ಒಂಬತ್ತು ತಿಂಗಳು. ಪ್ರತಿ ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುತ್ತೇನೆ. ತಪ್ಪದೇ ಯೋಗ ಅಭ್ಯಾಸ ಮಾಡುತ್ತೇನೆ. ನಂತರ ಹಾಲು-ಬಿಸ್ಕೆಟ್ ಸೇವಿಸಿ ಮನೆ ಸಮೀಪದ ಉದ್ಯಾನದಲ್ಲಿ ವಾಯುವಿಹಾರ ಮಾಡುತ್ತೇನೆ’ ಎಂದು ತಿಳಿಸಿದರು.

‘ಪ್ರತಿ ದಿನ 16 ಮಾತ್ರೆಗಳನ್ನು ಸೇವಿಸುತ್ತೇನೆ. ನನಗೆ ಅಸ್ತಮಾ, ಮಧುಮೇಹ ಇದ್ದರೂ ಏನೂ ಸಮಸ್ಯೆಯಿಲ್ಲ. ಯೋಗ-ವ್ಯಾಯಾಮ ಮಾಡುವುದರಿಂದ ಯಾವುದೇ ಆರೋಗ್ಯ ಸಮಸ್ಯೆಯಿಲ್ಲ. 1942ರಲ್ಲಿ ಮಹಾತ್ಮ ಗಾಂಧೀಜಿ ಅವರು ಛಲೇಜಾವ್ ಚಳವಳಿಗೆ ಕರೆ ನೀಡಿದರು. ಆಗ ನನಗೆ 22 ವರ್ಷವಾಗಿತ್ತು. ಸ್ನೇಹಿತರ ಜತೆಗೂಡಿ ಅಂಚೆ ಡಬ್ಬಿ ಸುಡುವುದು; ರೈಲು ಕಂಬಿ ಕೀಳುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದೆವು. ಮುಂಬೈನಿಂದ ಬರುತ್ತಿದ್ದ ದಿನಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವಾಗ ಪೊಲೀಸರು ಬಂಧಿಸಿದರು. ಕ್ಯಾಂಪ್‌ ಪೊಲೀಸ್ ಠಾಣೆಗೆ ಕರೆದೊಯ್ದರು. ನಂತರ ಏಳು ತಿಂಗಳು ಜೈಲು ಶಿಕ್ಷೆಯಾಯಿತು’ ಎಂದು ನೆನದರು.

ಸ್ವಾತಂತ್ರ್ಯದ ಸಂಭ್ರಮಕ್ಕೆ ಪಾರವೇ ಇರಲಿಲ್ಲ:

‘1947ರ ಆ.14ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ನಮ್ಮ ಸಂಭ್ರಮಕ್ಕೆ‌ ಪಾರವೇ ಇರಲಿಲ್ಲ. ಇಡೀ ರಾತ್ರಿ ಗುಲಾಲು ಎರಚಿ ಕುಣಿದು ಕುಪ್ಪಳಿಸಿದ್ದೆವು’ ಎಂದು ನೆನಪುಗಳನ್ನು ಹಂಚಿಕೊಂಡರು.

ಚನ್ನಮ್ಮ ನಗರದಲ್ಲಿರುವ 98 ವರ್ಷದ ಟಿ.ಗುರುನಾಥ ರಾವ್ ಅವರನ್ನೂ ಜಿಲ್ಲಾಧಿಕಾರಿ ಗೌರವಿಸಿದರು. ನಂತರ ವಡಗಾವಿಯ ಸಮೃದ್ಧಿ ಕಾಲೊನಿಯಲ್ಲಿ, 99 ವರ್ಷದ ಗಂಗಾಧರ ವಿನಾಯಕ ಕಾಮತ ಅವರನ್ನು ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಸನ್ಮಾನಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಬೆಳಗಾವಿ ತಹಶೀಲ್ದಾರ್‌ ಆರ್.ಕೆ. ಕುಲಕರ್ಣಿ ಉಪಸ್ಥಿತರಿದ್ದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಬಳಿಕ ಜಿಲ್ಲೆಯ ಎಲ್ಲ ತಹಶೀಲ್ದಾರರು ಆಯಾ ತಾಲ್ಲೂಕಿನಲ್ಲಿರುವ ಸ್ವಾತಂತ್ರ್ಯ ಯೋಧರ ಮನೆಗಳಿಗೆ ತೆರಳಿ ಸನ್ಮಾನಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು