ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಕ್ಕಷ್ಟೇ ಸೀಮಿತವಾದ ‘ಎತ್ತರದ ಸ್ತಂಭ’, ಹಾರಾಡುತ್ತಿಲ್ಲ ತ್ರಿವರ್ಣಧ್ವಜ

Last Updated 23 ಸೆಪ್ಟೆಂಬರ್ 2018, 9:47 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೋಟೆ ಕೆರೆ ದಂಡೆಯಲ್ಲಿ ಸ್ಥಾಪಿಸಿರುವ ಎತ್ತರದ (110 ಮೀಟರ್) ಶಾಶ್ವತ ಧ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜವನ್ನು ಹಾರಾಡಿಸುವುದು ಪ್ರಯೋಗಕ್ಕಷ್ಟೇ ಸೀಮಿತ ಎನ್ನುವಂತಾಗಿದೆ.

ವಾಘಾ ಗಡಿಯಲ್ಲಿ 105 ಮೀಟರ್‌ ಹಾಗೂ ಪುಣೆಯಲ್ಲಿ 107 ಮೀಟರ್‌ ಎತ್ತರದ ಸ್ತಂಭವಿದೆ. ಹೀಗಾಗಿ, ಬೆಳಗಾವಿಯದ್ದು ದೇಶದಲ್ಲಿಯೇ ಅತಿ ಎತ್ತರದ ಧ್ವಜಸ್ತಂಭ ಎಂಬ ಖ್ಯಾತಿ ಗಳಿಸಿದೆ. ಇಲ್ಲಿ ಮಾರ್ಚ್‌ 12ರಂದು ಅಧಿಕೃತವಾಗಿ ರಾಷ್ಟ್ರಧ್ವಜಾರೋಹಣ ಮಾಡಲಾಗಿತ್ತು. ಬುಡಾ ಹಾಗೂ ಪಾಲಿಕೆ ಸಹಯೋಗದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದ್ದು, ಇದಕ್ಕಾಗಿ ₹ 1.62 ಕೋಟಿ ವಿನಿಯೋಗಿಸಲಾಗಿದೆ. ಖಾಸಗಿ ಕಂಪನಿಯು ಅನುಷ್ಠಾನದ ಹೊಣೆ ಹೊತ್ತಿದೆ.

‘120 ಅಡಿ ಉದ್ದ ಹಾಗೂ 80 ಅಡಿ ಅಗಲದ ರಾಷ್ಟ್ರಧ್ವಜ ವರ್ಷದ ಎಲ್ಲ ದಿನಗಳಲ್ಲೂ ಹಾರಾಡಲಿದೆ. ಇದು ನಗರದ ಪ್ರಮುಖ ಆಕರ್ಷಣೆಯ ತಾಣವಾಗಲಿದೆ’ ಎಂದು ಪಾಲಿಕೆ ಅಧಿಕಾರಿಗಳು ಘೋಷಿಸಿದ್ದರು. ಆ ದಿನಗಳಲ್ಲಿ ಇದು ಜನಾಕರ್ಷಣೆಯ ಸ್ಥಳವೂ ಆಗಿತ್ತು. ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರು ಕೂಡ ಇದನ್ನು ನೋಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಇದರ ಫೋಟೊ ಹಬ್ಬಿತ್ತು; ಬಹಳಷ್ಟು ಪ್ರಶಂಸೆಯ ಮಾತುಗಳೂ ಕೇಳಿಬಂದಿದ್ದವು.

ಹಾರಾಡಿದ್ದು ಕಡಿಮೆ:

ಸ್ಥಾಪನೆಯಾದ ಏಳು ತಿಂಗಳಲ್ಲಿ, ಇಲ್ಲಿ ರಾಷ್ಟ್ರಧ್ವಜ ಹಾರಾಡಿದ ದಿನಗಳ ಸಂಖ್ಯೆ ಕಡಿಮೆ. ಮಳೆ ಮತ್ತು ತಾಂತ್ರಿಕ ಕಾರಣಗಳನ್ನು ನೀಡಿ ಧ್ವಜಸ್ತಂಭವನ್ನು ಖಾಲಿ ಬಿಡಲಾಗಿದೆ. ಜನರಲ್ಲಿ ದೇಶಪ್ರೇಮದ ಭಾವನೆ ಜಾಗೃತಗೊಳಿಸಬೇಕು ಎಂಬ ಆಶಯದಿಂದ ಸ್ಥಾಪಿಸಿದ ಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿಲ್ಲ.

ಈ ಸ್ತಂಭದಲ್ಲಿ ಸಮರ್ಪಕವಾಗಿ ಹಾರಾಡುವ ಅಳತೆಯ ಬಾವುಟವೇ ದೊರೆಯುತ್ತಿಲ್ಲ ಎನ್ನಲಾಗುತ್ತಿದೆ. ಧ್ವಜದ ಅಳತೆ ಹಾಗೂ ಭಾರ ಕಡಿಮೆ ಮಾಡಿ ಆಗಾಗ ಪ್ರಯೋಗ ಮಾಡಲಾಗುತ್ತಿದೆ. ಇದ್ಯಾವುದೂ ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ. ಅತ್ಯಂತ ಕಡಿಮೆ ದಿನಗಳಲ್ಲೇ ಹರಿದು ಹೋಗುತ್ತಿರುವುದರಿಂದ, ಪ್ರಯತ್ನಗಳೂ ವಿಫಲವಾಗುತ್ತಿವೆ. ಇದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.

ಈ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಡ್ರಮ್‌ನಲ್ಲಿ ತುಂಬಿ ಹುಲ್ಲಿನ ಮೇಲಿಟ್ಟು ಅಗೌರವ ತೋರಲಾಗಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಇದು ಕೂಡ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಅನಿಲ ಬೆನಕೆ, ಇಲ್ಲಿ ಶಾಶ್ವತವಾಗಿ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ನಂತರ ಈ ನಿಟ್ಟಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿಲ್ಲ.

ಹಣ ಪಾವತಿಸಿಲ್ಲ:

ಸ್ತಂಭದಲ್ಲಿ ಧ್ವಜ ಹಾರಿಸುವುದು ಯಶಸ್ವಿಯಾಗದೇ ಇರುವುದರಿಂದ, ನಿರ್ವಹಣೆಯ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.‌

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಶಶಿಧರ ಕುರೇರ, ‘ಮಳೆ, ಗಾಳಿಯಿಂದಾಗಿ ರಾಷ್ಟ್ರಧ್ವಜ ಹರಿದು ಹೋಗುತ್ತಿತ್ತು. ಇದರಿಂದಾಗಿ ಧ್ವಜದ ಅಳತೆ ಹಾಗೂ ಭಾರ ಕಡಿಮೆಗೊಳಿಸಿ, ಅಳವಡಿಸಲಾಗುತ್ತಿದೆ. ಧ್ವಜದ ತೂಕವನ್ನು 250 ಕೆ.ಜಿ. ತೂಕದಿಂದ 120 ಕೆ.ಜಿ.ಗೆ ಇಳಿಸಿ, ಈಚೆಗೆ ಹಾರಿಸಲಾಗಿತ್ತು. ಕೆಲವೇ ದಿನಗಳಲ್ಲಿ ಅದು ಕೂಡ ಹರಿಯಿತು’ ಎಂದು ತಿಳಿಸಿದರು.

‘ಮತ್ತೊಮ್ಮೆ ಪರಿಶೀಲಿಸಲು, ಬಟ್ಟೆಯ ಗುಣಮಟ್ಟ ಬದಲಾಯಿಸಲು ಹಾಗೂ ಇಂತಹ ಸ್ತಂಭಗಳಿರುವ ದೇಶದ ಇತರ ಕಡೆಗಳಲ್ಲಿ ಏನು ಮಾಡಲಾಗುತ್ತಿದೆ ಎಂಬ ಕುರಿತು ವರದಿ ನೀಡುವಂತೆ ಕಂಪನಿಯವರಿಗೆ ಸೂಚಿಸಲಾಗಿದೆ. ಮಳೆಗಾಲದಲ್ಲಿ ಬಾವುಟ ಹಾರಿಸಲಾಗದು. ಉಳಿದ ಸಂದರ್ಭದಲ್ಲಿ ಹೆಚ್ಚು ದಿನಗಳವರೆಗೆ ಹರಿಯದೇ ಹಾರಬಹುದಾದ ಗುಣಮಟ್ಟದ ಧ್ವಜವನ್ನು ಹಾರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT