ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜನರ ಮನಸೂರೆಗೊಂಡ ಫಲ–ಪುಷ್ಪ ಪ್ರದರ್ಶನ

ಪುಷ್ಪ ಪ್ರೇಮಿಗಳ ಗಮನ ಸೆಳೆದ ‘ಕಾಂತಾರ’: ಕಿಚನ್ ಗಾರ್ಡನ್ ಕುರಿತು ಸಾರ್ವಜನಿಕರಿಗೆ ತರಬೇತಿ ಇಂದು
Last Updated 19 ನವೆಂಬರ್ 2022, 4:59 IST
ಅಕ್ಷರ ಗಾತ್ರ

ಬೆಳಗಾವಿ: ಒಂದೆಡೆ ಕಾಂತಾರ ಚಲನಚಿತ್ರದ ಪರಿಸರ ದೇವತೆ ಪಂಜುರ್ಲಿ, ಇನ್ನೊಂದೆಡೆ ಎತ್ತುಚಕ್ಕಡಿ ಕಟ್ಟಿ ಬಿತ್ತಲು ನಡೆದ ರೈತ, ಮತ್ತೊಂದೆಡೆ ಕೇಶರಾಶಿ ಹರಡಿ ನಿಂತ ಸುಂದರ ಜಲಕನ್ಯೆ, ಎಲ್ಲರನ್ನೂ ಬರಸೆಳೆಯುವ ನೆಚ್ಚಿನ ನಟ ಪುನೀತ್‌ ರಾಜ್‌ಕುಮಾರ್‌...

ಇಲ್ಲಿನ ಹ್ಯೂಮ್‌ ಪಾರ್ಕಿನಲ್ಲಿ ಆಯೋಜಿಸಿದ ಮೂರು ದಿನಗಳ 63ನೇ ಫಲ ಪುಷ್ಪ ಪ್ರದರ್ಶನದಲ್ಲಿ ಕಂಡುಬರುವ ದೃಶ್ಯಗಳಿವೆ. ಶುಕ್ರವಾರವೇ ಆರಂಭವಾದ ಈ ಪ್ರದರ್ಶನ ಪರಿಸರ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ವಿವಿಧ ಶಾಲಾ ಮಕ್ಕಳು, ಯುವಜನರು, ರೈತರು, ಗೃಹಿಣಿಯರು ಸಾಕಷ್ಟು ಸಂಖ್ಯೆಯಲ್ಲಿ ಹೂಗಳನ್ನು ನೋಡಲು ದುಂಬಿಗಳಂತೆ ಲಗ್ಗೆ ಇಟ್ಟರು.

ನಾನಾ ತಳಿಯ ಹೂವುಗಳಿಂದ ಮಾಡಿದ ಆಲಂಕಾರಿಕ ಮಾದರಿಗಳು ಎಲ್ಲರ ಗಮನ ಸೆಳೆಯುವಂತಿವೆ. ಹೂವು– ತರಕಾರಿಗಳನ್ನು ಬಳಸಿ ಮಾಡಿದ ಸಂಗೀತದ ಪರಿಕರಗಳು, ನವಿಲು, ಡಿಸ್ನಿಟೈಪ್, ಫೋಟೊಶಾಪ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಪುನೀತ್‌ ರಾಜ್‌ಕುಮಾರ್ ಅವರ ಮೂರ್ತಿಗಳು ಆಯಸ್ಕಾಂತದಂತೆ ಸೆಳೆಯುವಂತಿವೆ.

ಮೈಸೂರಿನ ಸ್ಯಾಂಡ್‌ ಮ್ಯೂಸಿಯಂ ಕಲಾವಿದರು ಸಿದ್ಧಪಡಿಸಿದ ‘ಕಾಂತಾರ’ ಚಲನಚಿತ್ರದ ಪರಸರ ದೇವರು ಪಂಜುರ್ಲಿಯ ಮುಖಭಾವದ ಆಕೃತಿ ಮುಖ್ಯ ಆಕರ್ಷಣೆಯಾಗಿದೆ. ಪ್ರತಿಯೊಬ್ಬರೂ ಇದರ ಮುಂದೆ ನಿಂತು ಫೋಟೊ, ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸುವುದು ಸಾಮಾನ್ಯವಾಗಿದೆ.

ಇನ್ನೊಂದೆಡೆ ಬೆಂಗಳೂರಿನ ಕಲಾವಿದರು ಸಿದ್ಧಪಡಿಸಿದ ಗಾಜಿನ ಮಾದರಿಗಳ ಇನ್ನಿಲ್ಲದಂತೆ ಸೆಳೆಯುತ್ತಿವೆ. ಇದರ ಆಸುಪಾಸಿನಲ್ಲಿ ಜರ್ಬೇರಾ, ರೂಜಿಯಾಸಾಬಿಕ್, ಕ್ರಿಷಿಯಾಂತಿಮಮ್, ಲಿಲ್ಲಿ ಫ್ಲವರ್ಸ್‌, ಆರ್ಕಿಡ್‌ಗಳು ಒಂದಕ್ಕಿಂತ ಒಂದು ಚೆಲುವನ್ನು ಬೀರಿ ವಯ್ಯಾರ ತೋರುವಂತಿವೆ.

ಇಡೀ ಪ್ರದರ್ಶನದಲ್ಲಿ 10 ಸಾವಿರಕ್ಕೂ ಹೆಚ್ಚು ಹೂಕುಂಡಗಳು ಇಲ್ಲಿವೆ. ಆವರಣ ಪ್ರವೇಶಿಸುತ್ತಿದ್ದಂತೆ ಚೆಲುವಿನ ನಗೆಬೀರುವ ಹೂಗಳು ಆಲಿಂಗಿಸುತ್ತವೆ. 12 ಆಲಂಕಾರಿಕ ಮಾದರಿಗಳು, ನರ್ಸರಿ
ಗಳು, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ
ಗಳನ್ನು ಮಾರಾಟಕ್ಕೆ ಇಡಲಾಗಿದೆ.

ಉದ್ಘಾಟನೆ: ಸಂಸದೆ ಮಂಗಲಾ ಅಂಗಡಿ ಉದ್ಘಾಟಿಸಿದರು. ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ಮತ್ತಿತರ ಅಧಿಕಾರಿಗಳು ಇದ್ದರು.

‘ಮಶ್ರೂಮ್, ಜೇನುಕೃಷಿ ಮತ್ತು ಕಿಚನ್ ಗಾರ್ಡನ್ ಬಗ್ಗೆ ನ.19ರಂದು ಸಾರ್ವಜನಿಕರಿಗೆ ತರಬೇತಿ ನೀಡಲಾಗುವುದು. ನಗರದ ವಿವಿಧ ಸಂಸ್ಥೆಗಳು, ಮನೆಗಳಲ್ಲಿ ಕೈತೋಟ ಮಾಡಿದವರನ್ನು ಕರೆದು ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಗುವುದು. ಪ್ರತಿ ತಾಲ್ಲೂಕಿಗೆ ರೈತರಿಗೆ ಪ್ರಶಸ್ತಿ ನೀಡಲಾಗುವುದು’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದರು.

ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ತೋಟಗಾರಿಕೆ ಸಂಘ ಹಾಗೂ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಶ್ರಯದಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT