ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಖಾತ್ರಿ’ ಯೋಜನೆಯಲ್ಲಿ ಹಸಿರಾದ ಪ್ರದೇಶ

ಹೊಂಗೆ, ನೇರಳೆ, ಹುಣಸೆ ಮೊದಲಾದ ಸಸಿ ನೆಟ್ಟು ಪೋಷಣೆ
Last Updated 2 ಸೆಪ್ಟೆಂಬರ್ 2020, 8:11 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೊಣ್ಣೂರು ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಅರಣ್ಯ ಇಲಾಖೆಗೆ ಸೇರಿದ ಪ್ರದೇಶವೀಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ನಳನಳಿಸುತ್ತಿದೆ.

ಉದ್ಯೋಗ ಖಾತ್ರಿ ಹಾಗೂ ಅರಣ್ಯ ಇಲಾಖೆಯ ಕಾರ್ಯಕ್ರಮ ಒಗ್ಗೂಡಿಸಿ ಅಲ್ಲಿ ಪ್ರತಿ ವರ್ಷ ಇಂತಿಷ್ಟು ಸಸಿಗಳನ್ನು ನೆಡಲಾಗುತ್ತಿದೆ. ಕಳೆದ ವರ್ಷ ಹೊಂಗೆ, ಆಲ, ನೇರಳೆ, ಹುಣಸೆ ಮೊದಲಾದ 10ಸಾವಿರ ಸಸಿಗಳನ್ನು ನೆಡಲಾಗಿದೆ. ನೆರಳು ನೀಡುವ ಸಸಿಗಳಿಗೆ ಆದ್ಯತೆ ನೀಡಲಾಗಿದೆ. ಆ ಭಾಗದ ಉದ್ಯೋಗ ಚೀಟಿ ಹೊಂದಿರುವ ಕೂಲಿಕಾರರಿಂದ ಈ ಕೆಲಸ ಮಾಡಿಸಲಾಗಿದೆ. ಕಿರು ಅರಣ್ಯ ನಿರ್ಮಾಣದ ಪರಿಸರ ಸ್ನೇಹಿಯಾದ ಈ ಯೋಜನೆಯಿಂದ ಅಲ್ಲಿನ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ. ಜೊತೆಗೆ, ಹಿಂದೆ ಭಣ ಭಣ ಎನ್ನುತ್ತಿದ್ದ ಅಲ್ಲಿನ ವಾತಾವರಣವೂ ಹಸಿರಾಗಿ ಗಮನಸೆಳೆಯುತ್ತಿದೆ.

ಪ್ರಧಾನ ಕಾರ್ಯದರ್ಶಿ ಮೆಚ್ಚುಗೆ

ಇಲ್ಲಿಗೆ ಈಚೆಗೆ ಭೇಟಿ ನೀಡಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಲ್ಲೂಕುಮಟ್ಟದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯವರು ಮಾಡಿದ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಸಸಿಗಳನ್ನು ಜಾನುವಾರುಗಳ ಪಾಲಾಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆಯಿಂದ ವಾಚರ್‌ಗಳನ್ನು ನಿಯೋಜಿಸಿ ನಿಗಾ ಇಡಲಾಗುತ್ತಿದೆ. ನಿಯಮಿತವಾಗಿ ನೀರುಣಿಸಲಾಗುತ್ತಿದೆ (ಮಳೆಗಾಲ ಹೊರತುಪಡಿಸಿ). ಗ್ರಾಮ ಪಂಚಾಯಿತಿಯಿಂದಲೂ ವಾಟರ್‌ಮನ್‌ ಹಾಗೂ ಸಿಪಾಯಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಆಹ್ಲಾದಕರ ವಾತಾವರಣ

‘ಆ ಭಾಗದಲ್ಲಿ ಒತ್ತುವರಿ ಸಮಸ್ಯೆ ಇತ್ತು. ಹೀಗಾಗಿ, ಶಾಸಕ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸ್ಥಳೀಯರ ಮನೆವೊಲಿಸಿ ಅತಿಕ್ರಮಣ ತೆರವುಗೊಳಿಸಲಾಯಿತು. ಒತ್ತುವರಿ ಪುನರಾವರ್ತನೆ ಆಗದಿರಲೆಂದು ಸಸಿಗಳನ್ನು ನೆಟ್ಟು ಬೆಳೆಸುವ ಯೋಜನೆ ರೂಪಿಸಲಾಯಿತು. ಅರಣ್ಯೀಕರಣಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೇವೆ’ ಎಂದು ಗೋಕಾಕ ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಹೆಗ್ಗನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಸಸಿಗಳನ್ನು ನೆಟ್ಟಿದ್ದೇವೆ. ನೂರು ಎಕರೆಗೂ ಹೆಚ್ಚಿನ ಕ್ಷೇತ್ರ ಅಲ್ಲಿದೆ. ಪ್ರತಿ ವರ್ಷ ಇಂತಿಷ್ಟು ಸಸಿಗಳನ್ನು ನೆಡುವುದಕ್ಕೆ ಯೋಜಿಸಲಾಗುತ್ತಿದೆ. ಈ ಸಾಲಿನಲ್ಲಿ ಇಲ್ಲಿವರೆಗೆ ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ಹಾಕಲಾಗಿದೆ. ಇದರಿಂದ ಅಲ್ಲಿ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಎಲ್ಲವೂ ಬೆಳೆದು ಮರವಾದರೆ ಪರಿಸರಕ್ಕೆ ದೊಡ್ಡ ಕೊಡುಗೆಯಾಗಲಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT