ಹುಕ್ಕೇರಿ: ಪಟ್ಟಣದಲ್ಲಿನ ಗಣೇಶ ಮೂರ್ತಿ ವಿಸರ್ಜನೆಯನ್ನು ಪ್ರತ್ಯೇಕವಾಗಿ ಮಾಡದೆ, ಎಲ್ಲರೂ ಸೇರಿಕೊಂಡು ಸೆ.17ರಂದು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಗುವುದು ಎಂದು ಹಿಂದೂ ಪರ ಹೋರಾಟಗಾರ ಪ್ರಮೋದ್ ಮುತಾಲಿಕ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನೂ ಹೆಚ್ಚಿನ ವಿಷಯವನ್ನು ಗಣಪತಿ ಮಂಡಳಿಯವರು ಚರ್ಚಿಸಲು ಸೆ.15 ರ ಸಂಜೆ 7ಗಂಟೆಗೆ ಈಶ್ವರಲಿಂಗ ದೇವಸ್ಥಾನದಲ್ಲಿ (ಹಳೆ ಬಸ್ ನಿಲ್ದಾಣ ಬಳಿ) ಸಭೆ ಕರೆಯಲಾಗಿದೆ ಎಂದು ಸನಾತನ ಗಣಪತಿ ಮಹಾಮಂಡಳ ಅಧ್ಯಕ್ಷ ಸುಹಾಸ್ ನೂಲಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ನಿಲಜಗಿ ತಿಳಿಸಿದರು.
ಸೆ.17 ರಂದು ರಾತ್ರಿ 8ಕ್ಕೆ ನಾಕಾ (ಸಂಭಾಜಿ ಸರ್ಕಲ್) ಬಳಿ ತಮ್ಮ ತಮ್ಮ ಗಣಪತಿಗಳನ್ನು ನಿಲ್ಲಿಸಬೇಕು. ನಾಕಾದಿಂದ ಬಜಾರ್ ರೋಡ್ ಮೂಲಕ ಅಡವಿ ಸಿದ್ಧೇಶ್ವರ ಮಠದವರೆಗೆ ಹೋಗುವುದು. ಗಣಪತಿಯನ್ನು ಮೊದಲು ತೆಗೆದುಕೊಂಡು ಹೋದವರಿಗೆ ಮೊದಲ ಬಹುಮಾನ, ನಂತರ ಬಂದವರಿಗೆ ಯಥಾ ಪ್ರಕಾರ ನಂಬರ್ ಸಿಗುತ್ತವೆ. ಮದ್ಯಪಾನ ಮತ್ತು ದುಶ್ಚಟಗಳನ್ನು ಮಾಡುತ್ತ ವಿಸರ್ಜನೆಯಲ್ಲಿ ಪಾಲ್ಗೊಳ್ಳಬಾರದು ಎಂದು ಹಿರಿಯರು ಸಭೆಯಲ್ಲಿ ನಿರ್ಧರಿಸಿದರು. ಮಹಾಮಂಡಳ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಹಿಂದೂ ಸಂಸ್ಕೃತಿ ಮತ್ತು ಪರಂಪರೆಯಂತೆ ವಿಸರ್ಜನೆ ಮಾಡುವಂತೆ ಪ್ರಮೋದ್ ಮುತಾಲಿಕ ನೆರೆದಿದ್ದ ಯುವಕರಿಗೆ ಮತ್ತು ಮಂಡಳದವರಿಗೆ ಸಲಹೆ ನೀಡಿದರು.