ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಗಣೇಶೋತ್ಸವ: ರಾಜ್ಯಕ್ಕೆ ಒಂದೇ ನಿಯಮ, ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಾರ್ವಜನಿಕ ಗಣೇಶೋತ್ಸವ ಆಚರಣೆ ಬಗ್ಗೆ ತಜ್ಞರ ಸಲಹೆ ಪಡೆದು ಐದು ದಿನಗಳಿಗೆ ಅನುಮತಿ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು ಘೋಷಣೆ ಮಾಡಿದ್ದಾರೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಾಗಿ ಇದೇ ಮೊದಲ ಬಾರಿಗೆ ನಗರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬೆಳಗಾವಿಯಲ್ಲಿ ಹತ್ತು ದಿನ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಗಣೇಶ ಮಹಾಮಂಡಳಗಳವರು ಆಗ್ರಹಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ತಜ್ಞರ ಸಲಹೆಯಂತೆ ಸರ್ಕಾರ ಕೋವಿಡ್ ಮಾರ್ಗಸೂಚಿ ಪ್ರಕಟಿಸಲಾಗಿದೆ. ರಾಜ್ಯಕ್ಕೆ ಒಂದೇ ನಿಯಮಾವಳಿ ರೂಪಿಸಲಾಗಿದ್ದು, ಪಾಲಿಸುವಂತೆ ಮುಖ್ಯಮಂತ್ರಿ ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ಕೊಡಲಾಗುವುದಿಲ್ಲ’ ಎಂದರು.

‘ಕೋವಿಡ್ 3ನೇ ಅಲೆ ಹರಡುವ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಜೀವ ಮೊದಲು; ಜೀವನ ಆಮೇಲೆ. ಮೊದಲು ಜೀವ ಉಳಿಸುವ ಅಗತ್ಯವಿದೆ. ಹೀಗಾಗಿ ಸರ್ಕಾರದಿಂದ 5 ದಿನಗಳ ಗಣೇಶೋತ್ಸವ ಆಚರಣೆಗೆ ಈಗಾಗಲೇ ಅವಕಾಶ ನೀಡಲಾಗಿದೆ. ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ’ ಎಂದು ತಿಳಿಸಿದರು.

‘ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಇಲ್ಲಿನ ಜನರು ಬಿಜೆಪಿಗೆ ಒಳ್ಳೆಯ ಫಲಿತಾಂಶ ಕೊಟ್ಟಿದ್ದಾರೆ. ಇದಕ್ಕಾಗಿ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.

‘ಇದು ಬಿಜೆಪಿ ಗೆಲುವಲ್ಲ ಇವಿಎಂ (ವಿದ್ಯುನ್ಮಾನ ಮತಯಂತ್ರಗಳ) ಗೆಲುವು’ ಎಂಬ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ‘ಸೋತವರು ಇನ್ನೇನು ಮಾಡುತ್ತಾರೆ? ಗೆದ್ದರೆ ಸರಿ ಇದೆ; ಸೋತ್ರೆ ಸರಿ ಇಲ್ಲ ಅಂತಾನಾ? ಅವರ ಆರೋಪದ ಬಗ್ಗೆ ನಾನೇನೂ ಹೇಳಲಾಗುವುದಿಲ್ಲ’ ಎಂದು ತಿಳಿಸಿದರು.

ಬಳಿಕ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ‘ನಗರ ಹಾಗೂ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ಸೂಚನೆ ನೀಡಿದರು. ಪ್ರಗತಿ ಪರಿಶೀಲನೆ ನಡೆಸಿದರು.

ಕೆಎಸ್‌ಆರ್‌ಪಿ ಎಡಿಜಿ‍ಪಿ ಅಲೋಕ್ ಕುಮಾರ್, ಬೆಳಗಾವಿ ಉತ್ತ ವಲಯ ಐಜಿಪಿ ಸತೀಶ್ ಕುಮಾರ್, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್‌, ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಚಿವರು ಬುಧವಾರ (ಸೆ.8) ಬೆಳಿಗ್ಗೆ 8ಕ್ಕೆ ಕೆ‌ಎಸ್‌ಆರ್‌ಪಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಕಿತ್ತೂರಿನಲ್ಲಿ ಅಗ್ನಿಶಾಮಕ ಠಾಣೆಯ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.