ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 60ರಷ್ಟು ಮಠಗಳಲ್ಲಿ ಮಹಿಳೆಯರಿಗೇ ಪಟ್ಟ ಸಿಗಲಿ: ಗಂಗಾಂಬಿಕಾ ತಾಯಿ

Published 27 ಜನವರಿ 2024, 15:06 IST
Last Updated 27 ಜನವರಿ 2024, 15:06 IST
ಅಕ್ಷರ ಗಾತ್ರ

ಅಕ್ಕ ಮಹಾದೇವಿ ವೇದಿಕೆ (ಬೆಳಗಾವಿ): ‘ನಾಡಿನ ಶೇ 50ರಿಂದ 60ರಷ್ಟು ಮಠಗಳಲ್ಲಿ ಮಹಿಳೆಯರೇ ಪಟ್ಟ ಅಲಂಕರಿಸಬೇಕು. ಆಗ ಮಾತ್ರ ಪರಿವರ್ತನೆ ಸಾಧ್ಯ’ ಎಂದು ಬೀದರ್‌ನ ಲಿಂಗಾಯತ ಮಹಾಮಠದ ಗಂಗಾಂಬಿಕಾ ತಾಯಿ ಪ್ರತಿಪಾದಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದಲ್ಲಿ ‘ಲಿಂಗಾಯತ ಧರ್ಮ, ಶರಣ ತತ್ವಗಳ ಅನುಷ್ಠಾನದಲ್ಲಿ ಮಹಿಳಾ ಮಠಾಧೀಶರ ಪಾತ್ರ’ ವಿಷಯ ಕುರಿತು ಅವರು ಮಾತನಾಡಿದರು.

‘ಶರಣರ ತತ್ವ ಅನುಷ್ಠಾನಗೊಳಿಸುವಲ್ಲಿ ಮಹಿಳೆಯರೇ ಹೆಚ್ಚಿನ ಪಾತ್ರ ವಹಿಸಿದ್ದಾರೆ. ಇಂದು ಎಲ್ಲ ರಂಗಗಳಲ್ಲಿ ಮಹಿಳೆಯರು ಮಿಂಚುತ್ತಿದ್ದಾರೆ. ದೇಶದ ಸರ್ವಾಂಗೀಣ ಪ್ರಗತಿಗಾಗಿ ಮಹಿಳೆಯರು ಮುನ್ನೆಲೆಗೆ ಬರಬೇಕಾದ ಅಗತ್ಯವಿದೆ’ ಎಂದರು.

ನಾಗನೂರಿನ ಬಸವ ಗೀತಾ ತಾಯಿ, ‘ವಿದ್ಯೆಯೊಂದೇ ದೇವನೊಲಿಸುವ ಸಾಧನವಲ್ಲ. ಸತ್ಯ, ನಿಷ್ಠೆಯ ಕಾಯಕವೂ ಭಗವಂತನ ಒಲುಮೆಗೆ ಕಾರಣವಾಗಬಲ್ಲದು’ ಎಂದರು.

ಇಂದುಮತಿ ಸಾಲಿಮಠ ಅವರು ‘ವಚನ ಸಾಹಿತ್ಯದಲ್ಲಿ ಹಾಸ್ಯ’ ಕುರಿತು ಉಪನ್ಯಾಸ ನೀಡಿದರು. ಹುಕ್ಕೇರಿಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ, ಅತ್ತಿವೇರಿಯ ಬಸವಧಾಮದ ಬಸವೇಶ್ವರಿ ತಾಯಿ ಅಧ್ಯಕ್ಷತೆ, ಕಲ್ಯಾಣ ಹೆಬ್ಬಾಳದ ಬಸವಚೇತನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಾಂತಾ ಅಷ್ಟಗಿ, ಶಕುಂತಲಾ ದುರ್ಗಿ, ಶೈಲಜಾ ಬಾಬು, ಎ.ಎಂ.ಶೋಭಾ ಮಲ್ಲಿಕಾರ್ಜುನ, ಎಸ್‌.ಗಾಯತ್ರಮ್ಮ ಅಜ್ಜಂಪುರ ಇತರರಿದ್ದರು.

‘ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಿ’

‘ಇಂದಿನ ಮಹಿಳೆಯರು ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿಯ ಚನ್ನಮ್ಮ ಅವರಂತಹ ಶೂರರಂತೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. 12ನೇ ಶತಮಾನದಲ್ಲಿ ಶರಣ– ಶರಣೆಯರು ತಿಳಿಸಿದಂತೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು’ ಎಂದು ಮಾಜಿ ಸಚಿವೆ ರಾಣಿ ಸತೀಶ ಅಭಿಪ್ರಾಯಪಟ್ಟರು.

ಮಹಿಳಾ ಸಮಾವೇಶದಲ್ಲಿ ‘ಲಿಂಗಾಯತ ಮಹಿಳೆಯರನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಸಂಘಟಿಸುವಲ್ಲಿ ಮಹಿಳಾ ರಾಜಕಾರಣಿಗಳ ಪಾತ್ರ’ ವಿಷಯ ಕುರಿತು ಉಪನ್ಯಾಸ ನೀಡಿದರು.

‘ಅಧಿಕಾರ, ಅಂತಸ್ತು ಸ್ಥಿರವಲ್ಲ. ನಾವು ಸಾಮಾಜಿಕ ಬದಲಾವಣೆಗಾಗಿ ಮಾಡಿದ ಕೆಲಸಗಳೇ ಶಾಶ್ವತ’ ಎಂದರು.

ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ, ‘ಮಹಿಳೆಯರು ಜಾತ್ರೆ, ಮದುವೆ, ಸಮಾರಂಭಗಳಿಗೆ ಹೋಗುವಂತೆ, ಸಾಮಾಜಿಕ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇದಕ್ಕೆ ಪುರುಷರು ಪ್ರೋತ್ಸಾಹ ನೀಡಬೇಕು’ ಎಂದರು.

ಕಲಬುರಗಿಯ ಮೀನಾಕ್ಷಿ ಬಾಳಿ, ‘ಲಿಂಗಾಯತ ಎಂಬುದು ಕಾಯಕ ತತ್ವದ ಮೇಲೆ ರೂ‍ಪುಗೊಂಡ ಜೀವನ ಪದ್ಧತಿ. ಇದು ದುಡಿದು ತಿನ್ನುವ ಸಂಸ್ಕೃತಿಯೇ ಹೊರತು, ಬೇಡಿ ತಿನ್ನುವುದಲ್ಲ’ ಎಂದರು.

ಬೀದರ್‌ನ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ ಅಧ್ಯಕ್ಷತೆ ವಹಿಸಿದ್ದರು. ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು‌. ಚೊಂಡಿಯ ಬಸವ ಮಂಟಪದ ವಚನಸಂಸ್ಕೃತಿ ತಾಯಿ, ವೈಷ್ಣವಿ ಕಿವುಡಸಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT