ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರೀನ್‌ ಸಿಟಿ’ಯಲ್ಲಿ ಉದ್ಯಾನಗಳಿಗೆ ಕೊರತೆ!

ನಮ್ಮ ನಗರ– ನಮ್ಮ ಧ್ವನಿ;
Last Updated 14 ಅಕ್ಟೋಬರ್ 2019, 9:12 IST
ಅಕ್ಷರ ಗಾತ್ರ

ಬೆಳಗಾವಿ: ಒಂದು ಕಾಲದಲ್ಲಿ ‘ಗ್ರೀನ್‌ ಸಿಟಿ’ ಎಂದು ಕರೆಯಿಸಿಕೊಳ್ಳುತ್ತಿದ್ದ ಬೆಳಗಾವಿ ನಗರದಲ್ಲೀಗ ಮರ, ಗಿಡಗಳ ಸಂಖ್ಯೆ ಕುಸಿತ ಕಂಡಿದೆ. ದುರ್ಬಿನ್‌ ಹಾಕಿಕೊಂಡು ಹುಡುಕಬೇಕಾದ ಪರಿಸ್ಥಿತಿ ಎದುರಾಗಿದೆ. ಉದ್ಯಾನಗಳ ಸ್ಥಿತಿಯೂ ನಿರಾಶಾದಾಯಕವಾಗಿದೆ. ಮುಖ್ಯವಾಗಿ ಸೂಕ್ತ ನಿರ್ವಹಣೆಯಿಲ್ಲದೇ ಸೊರಗುತ್ತಿವೆ. ಬೆಳಗಿನ ಜಾವ ವಾಯುವಿಹಾರ ನಡೆಸಲು ಹಾಗೂ ಸಂಜೆ ವೇಳೆ ವಿಹಾರ ನಡೆಸಲು ಸೂಕ್ತ ಸ್ಥಳ ಇಲ್ಲದೆ ಸಾರ್ವಜನಿಕರು ಪರಿತಪಿಸುವಂತಾಗಿದೆ.

ಬೆಳಗಾವಿ ನಗರವು ತೀವ್ರವಾಗಿ ಬೆಳವಣಿಗೆ ಕಾಣುತ್ತಿದೆ. ಕೇಂದ್ರ ಸರ್ಕಾರದ ‘ಸ್ಮಾರ್ಟ್‌ ಸಿಟಿ’ ಯೋಜನೆಗೂ ಆಯ್ಕೆಯಾಗಿರುವುದನ್ನು ಗಮನಿಸಬಹುದು. ಪ್ರತಿವರ್ಷ ಸಾವಿರಾರು ಕುಟುಂಬಗಳು ಬಂದು ನೆಲೆಸುತ್ತಿವೆ. ಹೊಸ ಹೊಸ ಬಡಾವಣೆಗಳು ನಿರ್ಮಾಣಗೊಳ್ಳುತ್ತಿವೆ. ಪ್ರಸ್ತುತ, ಅಂದಾಜು 8 ಲಕ್ಷಕ್ಕೂ ಹೆಚ್ಚು ಜನರು ನಗರದಲ್ಲಿ ವಾಸಿಸುತ್ತಿದ್ದಾರೆ. ಎಲ್ಲೆ ನೋಡಿದರಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಕಾಣಿಸುತ್ತಿವೆ, ಹೊರತು, ಹಸಿರು ಕಾಣಿಸುತ್ತಿಲ್ಲ. ಜನರ ಆರೋಗ್ಯ ಹಾಗೂ ಪರಿಸರದ ಸಮತೋಲನ ಕಾಪಾಡುವಲ್ಲಿ ಮಹತ್ತರ ಕೊಡುಗೆ ನೀಡುವ ಉದ್ಯಾನಗಳ ಸಂಖ್ಯೆಯೂ ತುಂಬಾ ಕಡಿಮೆ ಇದೆ.

ಪ್ರಸ್ತುತ, ನಗರದಲ್ಲಿ ಮಹಾನಗರ ಪಾಲಿಕೆಯ ಮೇಲ್ವಿಚಾರಣೆಯಲ್ಲಿ 95 ಉದ್ಯಾನಗಳು, ಕಂಟೋನ್ಮೆಂಟ್‌ ಮೇಲ್ವಿಚಾರಣೆಯಲ್ಲಿ 15 ಉದ್ಯಾನಗಳಿವೆ. ಅಲ್ಲಲ್ಲಿ ಕೆಲವು ಖಾಸಗಿ ಕಂಪನಿಗಳು ತಮ್ಮ ಆವರಣದಲ್ಲಿ ಚಿಕ್ಕದಾಗಿ ಉದ್ಯಾನ ನಿರ್ವಹಿಸುತ್ತಿದ್ದರೂ ಬೆರಳಣಿಕೆಯಷ್ಟಿವೆ. ನಗರದ ವಿಸ್ತೀರ್ಣ ಹಾಗೂ ಜನಸಂಖ್ಯೆಗೆ ಹೋಲಿಸಿದರೆ ಇವುಗಳ ಸಂಖ್ಯೆ ತೀರ ಕಡಿಮೆಯಾಗಿದೆ.

ಪ್ರಮುಖ ಉದ್ಯಾನಗಳು: ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಹೋಲಿಸಿದರೆ ದಕ್ಷಿಣದಲ್ಲಿ ಅತಿ ಹೆಚ್ಚು ಹಾಗೂ ವಿಸ್ತಾರವಾದ ಉದ್ಯಾನಗಳಿವೆ. ಶಹಾಪುರದ ಶಿವಾಜಿ ಉದ್ಯಾನ ಹಾಗೂ ಮಹಾತ್ಮ ಗಾಂಧಿ ಉದ್ಯಾನ, ವ್ಯಾಕ್ಸಿನ್‌ ಡಿಪೋ ಉದ್ಯಾನ, ಮಹಾತ್ಮಾ ಫುಲೆ ಉದ್ಯಾನ, ಬಾಬು ಜಗಜೀವನರಾಮ್‌ ಉದ್ಯಾನ, ಶ್ರೀನಗರ ಉದ್ಯಾನ, ಅಂಬೇಡ್ಕರ್ ಉದ್ಯಾನ, ಪ್ರಮುಖವಾಗಿವೆ.

ಅಕ್ರಮ ಬಡಾವಣೆಗಳು: ಇಲ್ಲಿನ ಹಲವು ಪ್ರದೇಶಗಳಲ್ಲಿ ಇತ್ತೀಚೆಗೆ ಅಕ್ರಮ ಬಡಾವಣೆಗಳು ತಲೆ ಎತ್ತಿವೆ. ಕಾನೂನುಬದ್ಧವಾಗಿ ಬಡಾವಣೆಗಳನ್ನು ನಿರ್ಮಿಸಲು ಹೊರಟರೆ, ಉದ್ಯಾನ, ಆಸ್ಪತ್ರೆ, ಮೈದಾನ ಎಂದೆಲ್ಲ ಜಾಗವನ್ನು ಬಿಡಬೇಕಾಗುತ್ತದೆ. ಅದಕ್ಕೆ ಕೆಲವು ಬಿಲ್ಡರ್‌ಗಳು, ಕೇವಲ ಎನ್‌.ಎ. ಮಾಡಿಸಿ ಸೈಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ಬಡಾವಣೆಗಳಲ್ಲಿ ಉದ್ಯಾನಗಳನ್ನು ನಿರ್ಮಿಸಲು ಜಾಗವೇ ಇರುವುದಿಲ್ಲ. ಎಲ್ಲ ಜಾಗದಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತವೆ. ಉದ್ಯಾನಗಳ ಕೊರತೆ ಉಂಟಾಗಲು ಇದು ಒಂದು ಪ್ರಮುಖ ಕಾರಣವಾಗಿದೆ.

ನಿರ್ವಹಣೆ ಕೊರತೆ: ಬಹಳಷ್ಟು ಉದ್ಯಾನಗಳು ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿವೆ. ನೀರಿಲ್ಲದೇ ಮರಗಳು, ಸಸಿಗಳು ಒಣಗಿವೆ. ಹೂವು– ಅಲಂಕಾರಿಕ ಗಿಡಗಳು ಬಾಡಿವೆ. ಜನರಿಗೆ ಕೂರಲು ಇಟ್ಟಿದ್ದ ಬೆಂಚ್‌ಗಳು ಮುರಿದುಬಿದ್ದಿವೆ. ಜಾನುವಾರುಗಳು, ಹಂದಿಗಳು, ನಾಯಿಗಳು ಒಳಗೆ ನುಸುಳಿ, ಉದ್ಯಾನವನ್ನೇ ಹಾಳುಗೆಡವಿ ಹಾಕಿವೆ.

ಉದ್ಯಾನಗಳಲ್ಲಿ ಕೊರೆಸಲಾಗಿದ್ದ ಬೋರ್‌ವೆಲ್‌ಗಳು ಹಾಗೂ ಬಾವಿಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿವೆ. ಇದರಿಂದಾಗಿ ನೀರಿನ ಕೊರತೆ ಉಂಟಾಗಿ, ಸಸಿಗಳು, ಮರಗಳು ಒಣಗಿ ಹೋಗಿವೆ.

ಶೌಚಾಲಯಗಳಿಲ್ಲ: ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳಿಲ್ಲ. ನೀರು ಲಭ್ಯವಾಗದ ಕಾರಣ, ಶೌಚಾಲಯಗಳ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಹಳ ಕಡೆ ಶೌಚಾಲಯಗಳಿಗೆ ಶಾಶ್ವತವಾಗಿ ಬೀಗ ಜಡಿಯಲಾಗಿದೆ.

‘ದಿನವಿಡೀ ಕೆಲಸದ ಒತ್ತಡದಿಂದ ಉಂಟಾದ ಬೇಸರ ಕಳೆಯಲು ಉದ್ಯಾನಕ್ಕೆ ಬರಬೇಕು ಎನಿಸುತ್ತದೆ. ಆದರೆ, ಇಲ್ಲಿನ ಅವ್ಯವಸ್ಥೆಗಳನ್ನು ಕಂಡು ಬರಲು ಮನಸ್ಸಾಗುವುದಿಲ್ಲ. ಮರ– ಸಸಿಗಳ ನಿರ್ವಹಣೆಯನ್ನು ತಪ್ಪದೇ ಮಾಡಬೇಕು. ಕುಡಿಯಲು ನೀರು, ಶೌಚಾಲಯಗಳ ವ್ಯವಸ್ಥೆಯನ್ನು ಕಲ್ಪಿಸಬೇಕು. ಹಾಗಿದ್ದಾಗ ಮಾತ್ರ
ಜನರು ಬರುತ್ತಾರೆ’ ಎಂದು ಕ್ಯಾಂಪ್‌ ನಿವಾಸಿ, ಗಜೇಂದ್ರ ಚವಾಣ್‌ ಹೇಳಿದರು.

ನಿರ್ವಹಣೆಯದ್ದೇ ಸಮಸ್ಯೆ: ಸದ್ಯಕ್ಕೆ ಉದ್ಯಾನಗಳ ನಿರ್ವಹಣೆ ಮಾಡಲು 80ರಿಂದ 100 ಜನ ಗುತ್ತಿಗೆ ಆಧಾರಿತ ಸಿಬ್ಬಂದಿಗಳಿದ್ದಾರೆ. ಪ್ರತಿವರ್ಷ ಇವರ ಗುತ್ತಿಗೆಯನ್ನು ನವೀಕರಿಸುತ್ತಾ ಬರಲಾಗಿದೆ. ಗೇಟ್‌ಮನ್‌ ಕೆಲಸ, ಸಸಿಗಳನ್ನು ಕತ್ತರಿಸುವುದು, ಹಾಸುಹುಲ್ಲು ನಿರ್ವಹಿಸಲು ಹಾಗೂ ಇತರ ಕೆಲಸಗಳನ್ನು ನಿರ್ವಹಿಸಲು ಕನಿಷ್ಠವೆಂದರೂ ಒಂದು ಉದ್ಯಾನಕ್ಕೆ 10 ಜನ ಸಿಬ್ಬಂದಿಗಳು ಬೇಕು. ಆದರೆ, ಈಗಿರುವ ಸಿಬ್ಬಂದಿಯನ್ನು ತೆಗೆದುಕೊಂಡರೆ, ಒಂದು ಉದ್ಯಾನಕ್ಕೆ ಒಬ್ಬ ಸಿಬ್ಬಂದಿ ಸಿಗುವುದೂ ದುರ್ಬಲವಾಗಿದೆ. ಸಿಬ್ಬಂದಿಗಳಿಲ್ಲದೇ ಉದ್ಯಾನ ನಿರ್ವಹಿಸಲು ಪಾಲಿಕೆಯು ಪರದಾಡುತ್ತಿದೆ.

ಕಂಪನಿಗಳು ಮುಂದೆ ಬರುತ್ತಿಲ್ಲ: ಬೆಂಗಳೂರು, ಮುಂಬೈನಂತಹ ಮಹಾನಗರಗಳಲ್ಲಿ ಪ್ರಮುಖ ಉದ್ಯಾನಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗಳು ವಹಿಸಿಕೊಂಡಿವೆ. ಅವು ತಮ್ಮ ಸಿಎಸ್‌ಆರ್‌ (ಕಾರ್ಪೊರೇಟ್‌ ಸೋಷಿಯಲ್‌ ರಿಸ್ಪಾನ್‌ಸಿಬಿಲಿಟಿ) ಯೋಜನೆಯಡಿ ಕಂಪನಿಯ ಆದಾಯದ ಒಂದಿಷ್ಟು ಪಾಲನ್ನು ಇದಕ್ಕಾಗಿ ವ್ಯಯ ಮಾಡುತ್ತವೆ. ಉದ್ಯಾನದಲ್ಲಿ ತಮ್ಮ ಕಂಪನಿ ಹಾಗೂ ಉತ್ಪನ್ನಗಳ ಫಲಕಗಳನ್ನು ಅಳವಡಿಸಿ, ಪ್ರಚಾರ ಮಾಡಬಹುದಾಗಿದೆ. ಕಂಪನಿ ಹಾಗೂ ಅಂತಹದ್ದೇ ಕಾರ್ಯ ಬೆಳಗಾವಿಯಲ್ಲೂ ಆಗಬೇಕಾಗಿದೆ. ಬೆಳಗಾವಿ ಹಾಗೂ ಸುತ್ತಮುತ್ತ ಹಲವು ಪ್ರಮುಖ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಅವು ಮುಂದೆ ಬಂದು, ಉದ್ಯಾನಗಳ ನಿರ್ವಹಣೆಗಾಗಿ ಪಾಲಿಕೆಯ ಜೊತೆ ಕೈಜೋಡಿಸಬೇಕಾಗಿದೆ. ನಿರ್ವಹಣೆಗೆ ತಗಲುವ ವೆಚ್ಚವನ್ನು ಭರಿಸಬಹುದಾಗಿದೆ.

‘ಇಂತಹ ಪ್ರಸ್ತಾವನೆಯನ್ನು ಯಾವುದಾದರೂ ಕಂಪನಿಯವರು ತೆಗೆದುಕೊಂಡು ಬಂದರೆ, ಉದ್ಯಾನಗಳ ನಿರ್ವಹಣೆ ಒಪ್ಪಿಸಲು ನಾವು ಪ್ರಯತ್ನಿಸಬಹುದು’ ಎಂದು ಮಹಾಂತೇಶ ನರಸನ್ನವರ ಹೇಳಿದರು.

‘ಉದ್ಯಾನ ನಿರ್ವಹಣೆಗೆ ಕ್ರಮ’

‘ಉದ್ಯಾನಗಳ ನಿರ್ವಹಣೆಗೆ ಸಿಬ್ಬಂದಿಯ ಕೊರತೆ ಇದೆ. ಇದರ ಜೊತೆ ಸಂಪನ್ಮೂಲಗಳ ಕೊರತೆಯು ಇದೆ. ಸಿಬ್ಬಂದಿಗಳನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಕೇಳಿಕೊಳ್ಳಲಾಗಿದೆ. ಈಗಿರುವ ಉದ್ಯಾನಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಕ್ರಮಕೈಗೊಳ್ಳಲಾಗುವುದು. ಸ್ಮಾರ್ಟ್‌ ಸಿಟಿ ಹಾಗೂ ಅಮೃತ ಯೋಜನೆಯಡಿ ಕೆಲವು ಉದ್ಯಾನಗಳ ಅಭಿವೃದ್ಧಿಯನ್ನು ತೆಗೆದುಕೊಳ್ಳಲಾಗಿದೆ’

– ಎಚ್‌.ಕೆ. ಜಗದೀಶ, ಮಹಾನಗರ ಪಾಲಿಕೆ ಆಯುಕ್ತ

ಅಮೃತ್‌ ಯೋಜನೆ

‘ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆಗಳ ಸಹಭಾಗಿತ್ವದಲ್ಲಿ ಅಮೃತ್‌ ಯೋಜನೆಯಡಿ ಹನುಮಾನ ನಗರದಲ್ಲಿ (ಬಾಕ್ಸೈಟ್‌ ರೋಡ್‌ಗೆ ಹೊಂದಿಕೊಂಡಂತೆ) ಹೊಸ ಉದ್ಯಾನ ನಿರ್ಮಿಸಲಾಗುತ್ತಿದೆ. ಈಗಾಗಲೇ ಇರುವ ಶ್ರೀನಗರದ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ 2 ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆಯ ಉದ್ಯಾನಗಳ ನಿರ್ವಹಣೆ ಹೊತ್ತಿರುವ ಎಇಇ ಮಹಾಂತೇಶ ನರಸನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT