ಮಂಗಳವಾರ, ಮಾರ್ಚ್ 21, 2023
23 °C
ಖುದ್ದು ಪರಿಶೀಲಿಸಿ ವರದಿ ನೀಡಲು ಎಸ್ಪಿಗೆ ಸೂಚನೆ

ವಿದ್ಯುತ್‌ ಅವಘಡದಿಂದ ಬಾಲಕಿ ಸಾವು: ‘ಪ್ರಜಾವಾಣಿ’ ವರದಿಗೆ ಸ್ಪಂದಿಸಿದ ಗೃಹ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ನಿಪ್ಪಾಣಿ ತಾಲ್ಲೂಕಿನ ಡೋಣೆವಾಡಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವಿದ್ಯುತ್‌ ಸ್ಪರ್ಶದಿಂದ ಬಾಲಕಿ ಮೃತಪಟ್ಟ ಪ್ರಕರಣದ ಬಗ್ಗೆ ಖುದ್ದು ತನಿಖೆ ಮಾಡಬೇಕು. ತಪ್ಪು ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಶುಕ್ರವಾರವೇ (ಜುಲೈ 8) ನನಗೆ ವರದಿ ನೀಡಬೇಕು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲಗೆ ಸೂಚನೆ ನೀಡಿದ್ದಾರೆ.

ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಸದಾಶಿವ ಭೇಂಡೆ ಎನ್ನುವವರ ಪುತ್ರಿ, 3ನೇ ತರಗತಿಯಲ್ಲಿ ಓದುತ್ತಿದ್ದ ಅನುಷ್ಕಾ (8) ವಿದ್ಯುತ್‌ ಅವಘಡದ ಕಾರಣ, ಶಾಲಾ ಆವರಣದಲ್ಲೇ ಪ್ರಾಣಬಿಟ್ಟಳು. ಇದನ್ನು ‘ಅಸಹಜ ಸಾವು’ ಎಂದು ಸದಲಗಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಗುರುವಾರ ಈ ಕುರಿತು ಪ್ರಕಟಗೊಂಡ ವರದಿ ಗಮನಿಸಿದ ಸಚಿವ ಆರಗ ಜ್ಞಾನೇಂದ್ರ, ತಕ್ಷಣಕ್ಕೆ ಕ್ರಮ ವಹಿಸಲು ಮುಂದಾದರು. ಇಂಥ ಗಂಭೀರ ವಿಷಯವನ್ನು ತಮ್ಮ ಗಮನಕ್ಕೆ ತಂದ ‘ಪ್ರಜಾವಾಣಿ’ಗೂ ಅವರು ಕೃತಜ್ಞತೆ ಸಲ್ಲಿಸಿದರು. ಆದರೂ ಹೆಸ್ಕಾಂ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಕನಿಷ್ಠ ಪ್ರತಿಕ್ರಿಯೆ ನೀಡುವ ಗೋಜಿಗೂ ಹೋಗಿಲ್ಲ.

‘ತಕ್ಷಣಕ್ಕೇ ಸ್ಥಳಕ್ಕೆ ಹೋಗಿ ಪರಿಶೀಲಿಸಬೇಕು. ಬಾಲಕಿಯ ಸಾವಿಗೆ ನಿಖರ ಕಾರಣ ಕೊಡಬೇಕು. ಇದರಲ್ಲಿ ಶಾಲೆಯವರಿಂದ ಆದ ಪ್ರಮಾದವೇನು? ಟೆಲಿಫೋನ್‌ ಕಂಬವನ್ನು ಶಾಲೆ ಆವರಣದಲ್ಲಿ ವ್ಯರ್ಥವಾಗಿ ಬಿಡಲು ಕಾರಣವೇನು? ಅದಕ್ಕೆ ತಂತಿ ಸುತ್ತಿ ವಿದ್ಯುತ್‌ ಸಂಪರ್ಕ ಪಡೆದವರ ಮೇಲೆ ಏನು ಕ್ರಮ ವಹಿಸಲಾಗಿದೆ. ಇದರಲ್ಲಿ ‘ಹೆಸ್ಕಾಂ’ ಅಧಿಕಾರಿಗಳು ಏನು ಕ್ರಮ ವಹಿಸಿದ್ದಾರೆ? ಪೊಲೀಸ್‌ ಅಧಿಕಾರಿಗಳು ಪ್ರಕರಣವನ್ನು ಇಷ್ಟು ಹಗುರವಾಗಿ ತೆಗೆದುಕೊಳ್ಳಲು ಕಾರಣವೇನು... ಇವೇ ಮುಂತಾಗಿ ಸಮಗ್ರ ವರದಿ ಕೊಡಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರಿಗೆ ತಿಳಿಸಿದ್ದಾರೆ.

‘ಬಾಲಕಿಯ ಪಾಲಕರಿಗೆ ಹೇಗೆ ಸಹಾಯ ಮಾಡಲು ಸಾಧ್ಯವೆಂದು ಪರಿಶೀಲಿಸುತ್ತೇನೆ. ಬಡವರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಈ ಸಂಬಂಧ ಶಾಲೆಯ ಮುಖ್ಯಶಿಕ್ಷಕ ಕೆ.ವಿ.ನಾಟೇಕರ್‌ ಅವರನ್ನು ಈಗಾಗಲೇ ಅಮಾನತು ಗೊಳಿಸಲಾಗಿದೆ. ಈ ವಿಷಯವನ್ನು ಕೂಡ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ನನ್ನ ಗಮನಕ್ಕೆ ತರದ ಕಾರಣ, ಸ್ಪಂದಿಸಲು ವಿಳಂಬವಾಗಿದೆ’ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

ಮುದ್ದು ಕಂದಮ್ಮನನ್ನು ಕಳೆದುಕೊಂಡ ಪಾಲಕರು ಇನ್ನೂ ದುಃಖದಿಂದ ಹೊರಬಂದಿಲ್ಲ. ತಮ್ಮ ಮಗಳ ಸಾವಿಗೆ ಇನ್ಯಾರದೋ ತಪ್ಪು ಕಾರಣ ಎಂಬ ತಿಳಿವಳಿಕೆಯೂ ಅವರಿಗೆ ಇಲ್ಲವಾಗಿದೆ. ‘ಅಸಹಜ ಸಾವು’ ಎಂದು ಪ್ರಕರಣ ದಾಖಲಿಸಿದ ಬಗ್ಗೆಯೂ ಅವರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಕುಟುಂಬದವರು ‘ಪ್ರಜಾವಾಣಿ’ಗೆ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು