ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ₹ 255 ಕೋಟಿ ನಷ್ಟ: ಸಚಿವ ಕಾರಜೋಳ ಸಭೆ

Last Updated 10 ಆಗಸ್ಟ್ 2022, 13:27 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಬಾರಿ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಒಟ್ಟಾರೆ ₹ 255 ಕೋಟಿಯಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಹಾನಿಯ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿದರು.

ಅತಿವೃಷ್ಟಿಯಿಂದ ಉಂಟಾದ ಹಾನಿ ಹಾಗೂ ಕೈಗೊಳ್ಳಲಾದ ಕ್ರಮಗಳ ಪರಿಶೀಲನೆಗೆ ನಗರದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮನೆಹಾನಿ ಅಥವಾ ಮನೆಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಬೇಕು. ಯಾವುದೇ ಕುಟುಂಬ 2019ರ ನಂತರ ಮನೆ ಬಿಟ್ಟು ಬೇರೆ ಕಡೆ ಇದ್ದಾಗಲೂ ಅಂತಹ ಖಾಲಿ ಮನೆಗಳು ಬಿದ್ದರೂ ಪರಿಹಾರ ಬಿಡುಗಡೆಗೊಳಿಸಬೇಕು’ ಎಂದೂ ಸೂಚಿಸಿದರು.

‘ಮಳೆ– ಗಾಳಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಕೂಡಲೇ ದುರಸ್ತಿ ಮಾಡಿ, ಸಂಪರ್ಕ ಕಲ್ಪಿಸಬೇಕು. ಜಲಜೀವನ ಮಿಷನ್ ಕಾಮಗಾರಿ ಪೂರ್ಣಗೊಳ್ಳುವವರಿಗೆ ಹಳೆಯ ನಳಗಳ ಸಂಪರ್ಕ ಮುಂದುವರಿಸಬೇಕು’ ಎಂದೂ ಆಯಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೋವಿಡ್‌ ಸಿದ್ಧತೆ

ಈ ಹಿಂದೆ ಕೋವಿಡ್ ಉಪಟಳವಿದ್ದ ಸಂದರ್ಭದಲ್ಲಿ ಆಕ್ಸಿಜನ್ ಸೌಲಭ್ಯದ ಹಾಸಿಗೆಗಳು, ಆಕ್ಸಿಜನ್ ಘಟಕ ಸೇರಿದಂತೆ ಅನೇಕ ಸೌಲಭ್ಯ ಒದಗಿಸಲಾಗಿತ್ತು. ಈ ಸೌಲಭ್ಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿಗಾವಹಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳ ಬಗ್ಗೆಯೂ ಎಲ್ಲ ಮಾಹಿತಿ ಪಡೆದುಕೊಳ್ಳಬೇಕು. ಅಗತ್ಯ ಔಷಧ, ಉಪಕರಣಗಳ ದಾಸ್ತಾನು ಇಟ್ಟುಕೊಳ್ಳಬೇಕು’ ಎಂದೂ ಕಾರಜೋಳ ತಿಳಿಸಿದರು.

‘ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಳ್ಳಾರಿ ನಾಲಾ ನಿರ್ವಹಣೆಯನ್ನು ಪಾಲಿಕೆ ಹಾಗೂ ಉಳಿದ ಕಡೆಗಳಲ್ಲಿ ನೀರಾವರಿ ಇಲಾಖೆಯ ವತಿಯಿಂದ ನಿರ್ವಹಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ 35 ಕಿ.ಮೀ. ಹರಿವು ಇದೆ. ಅದನ್ನು ಪಾಲಿಕೆ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ನಾಲಾ ಅಕ್ಕಪಕ್ಕದ ಮನೆಗಳಿಗೆ ಹಾಗೂ ಬೆಳೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು’ ಎಂದರು.

‘ಈ ನಾಲೆಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್) ರೂಪಿಸುವಂತೆ ಸೂಚನೆ ನೀಡಿದರು.
ನಾಲಾ ವ್ಯಾಪ್ತಿಯ ರೈತರನ್ನು ಭೇಟಿ ಮಾಡಿ ಅವರ ಮನವೊಲಿಸುವ ಮೂಲಕ ಬದುಗಳಲ್ಲಿ ನಿಲ್ಲುವ ನೀರು ನಾಲಾಕ್ಕೆ ಸರಾಗವಾಗಿ ಹರಿಯುವಂತೆ ಮಾಡಬೇಕು’ ಎಂದರು.

ಅಭಿಯಾನ ಯಶಸ್ವಿಗೊಳಿಸಿ

‘ಆಗಸ್ಟ್ 12 ರಿಂದ 15ರವರೆಗೆ ಹಮ್ಮಿಕೊಂಡ ಹರ್ ಘರ್ ತಿರಂಗಾ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ 10 ಲಕ್ಷಕ್ಕೂ ಅಧಿಕ ಮನೆಗಳಿದ್ದು, ಮನೆಗಳ ಮೇಲೆ ಜನರೇ ಸ್ವಯಂ ಪ್ರೇರಣೆಯಿಂದ ಧ್ವಜಾರೋಹಣ ಮಾಡಬೇಕು’ ಎಂದು ಗೋವಿಂದ ಕಾರಜೋಳ ಕೋರಿದರು.

ನಗರ ಪೊಲೀಸ್‌ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್‌.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಸಂತೋಷ ಕಾಮಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT