ಮಂಗಳವಾರ, ಮಾರ್ಚ್ 28, 2023
33 °C

ವೃತ್ತಿಯಲ್ಲಿ ಅನನ್ಯತೆ ಸಾಧಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಪದವಿ ಪಡೆದವರು ತಮ್ಮ ಕೆಲಸದಲ್ಲಿ ಅನನ್ಯತೆ ಸಾಧಿಸಬೇಕು. ದೌರ್ಬಲ್ಯ ಅಥವಾ ಕೀಳರಿಮೆ ತೊರೆದು ಧೈರ್ಯದಿಂದ ಮುನ್ನುಗ್ಗಿ ಸ್ವಸಾಮರ್ಥ್ಯದಿಂದ ಮುಂದೆ ಬರಬೇಕು’ ಎಂದು ವಾಸ್ತುಶಿಲ್ಪಿ ಜಿತೇಂದ್ರ ಪಿ. ನಾಯಕ್ ಸಲಹೆ ನೀಡಿದರು.

ನಗರದ ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಗುರುವಾರ ನಡೆದ 1ನೇ ಬ್ಯಾಚ್‌ನ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ವಾಸ್ತುಶಿಲ್ಪ ಮತ್ತು ನಗರ ಯೋಜನೆ ಅತ್ಯಂತ ಪ್ರಸ್ತುತವಾಗಿದೆ. ಅದರಲ್ಲಿ ಬಹಳ ಅವಕಾಶಗಳಿವೆ. ಅವುಗಳನ್ನು ಬಳಸಿಕೊಳ್ಳಲು ಅವಶ್ಯವಾದ ಕೌಶಲಗಳು ಹಾಗೂ ಜ್ಞಾನ ಸಂಪಾದನೆಯನ್ನು ವಿದ್ಯಾರ್ಥಿಗಳು ಗಳಿಸಬೇಕು’ ಎಂದರು.

ಭಾರತೀಯ ವಾಸ್ತುಶಿಲ್ಪಿಗಳ ಸಂಸ್ಥೆಯ ಅಧ್ಯಕ್ಷ ಕುಲದೀಪ ಹಂಗಿರ್ಗೆಕರ ಮಾತನಾಡಿ, ‘ವಿದ್ಯಾರ್ಥಿಗಳು ವೃತ್ತಿ ಜೊತೆಗೆ ಸಮಾಜ ಹಾಗೂ ದೇಶದ ಅಭಿವೃದ್ಧಿಗೂ ಕೈಜೋಡಿಸಬೇಕು’ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ, ‘ಶ್ರದ್ಧೆಯಿಂದ ಕೆಲಸ ಮಾಡುವುದನ್ನು ಕಲಿತುಕೊಳ್ಳಬೇಕು. ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಸಾಧಕರ ಜೀವನದ ಬಗ್ಗೆ ತಿಳಿದುಕೊಳ್ಳಬೇಕು. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಅರ್ಬನ್ ಸ್ಟುಡಿಯೊ’ ಪ್ರದರ್ಶನವನ್ನು ಜಿತೇಂದ್ರ ಪಿ. ನಾಯಕ್ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯಾಧ್ಯಕ್ಷರಾಗಿದ್ದ ದಿ.ಸುರೇಶ ಅಂಗಡಿ ಅವರ ಸ್ಮರಣಾರ್ಥವಾಗಿ ನೀಡುವ ರೋಲಿಂಗ್ ಟ್ರೋಫಿಯನ್ನು ಅತ್ಯುತ್ತಮ ಪ್ರಬಂಧ ಮಂಡಿಸಿದ ಜಿಶಾನ್‌ಅಲಿ ಸಯಾನಿ ಅವರಿಗೆ ನೀಡಲಾಯಿತು. ವಿದ್ಯಾರ್ಥಿನಿಯರಾದ ಅಮೃತಾ ಕಾಲಕುಂದ್ರಿಕರ್ (ಪ್ರಥಮ ರ‍್ಯಾಂಕ್), ಪೂಜಾ ದೇಸಾಯಿ (ದ್ವಿತಿಯ ರ‍್ಯಾಂಕ್) ಮತ್ತು ಶ್ರೇಯಾ ಹುಂಬರವಾಡಿ
(ತೃತೀಯ ರ‍್ಯಾಂಕ್) ಅವರಿಗೆ ಟ್ರೋಫಿ ಹಾಗೂ ನಗದು ಬಹುಮಾನ ಕೊಡಲಾಯಿತು. ವಾಸ್ತುಶಿಲ್ಪಿ ಪ್ರೊ.ಅರುಣ ಹುಯಿಲಗೋಳ ಅವರನ್ನು ‘ಅತ್ಯುತ್ತಮ ಶಿಕ್ಷಕ’ರೆಂದು ಗೌರವಿಸಲಾಯಿತು.

ಸಂಸದೆ ಹಾಗೂ ಸಂಸ್ಥೆಯ ಕಾಯಾಧ್ಯಕ್ಷೆ ಮಂಗಲಾ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಎಚ್.ಎಸ್. ಪಾಟೀಲ, ಪ್ರೊ.ಸಂಗೀತಾ ದೇಸಾಯಿ, ಪ್ರೊ.ಆಶಾ ರಜಪೂತ, ಡಾ.ಸಂಜಯ ಪೂಜಾರಿ, ಪ್ರೊ.ವಿನಾಯಕ ಮುತಗೇಕರ ಉಪಸ್ಥಿತರಿದ್ದರು.

ಶಿವಾನಿ ಗಾಂವ್ಕರ್ ನಿರೂಪಿಸಿದರು. ರಕ್ಷಿತಾ ಕುಂಬಾರಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.