ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಹಾರ ತಡೆಗೆ ‘ತಂತ್ರಜ್ಞಾನ’ದ ಅಸ್ತ್ರ

ಪಂಚಾಯ್ತಿಗಳ ದಾಖಲೆ, ದಾಖಲಾತಿಗಳ ಗಣಕೀಕರಣಕ್ಕೆ ಯೋಜನೆ
Last Updated 29 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಗ್ರಾಮ ಪಂಚಾಯ್ತಿಗಳ ಮಟ್ಟದಲ್ಲಿ ದಾಖಲೆಗಳನ್ನು ತಿದ್ದುವ ಮೂಲಕ ಮಾಡಬಹುದಾದ ಅಕ್ರಮ, ಅವ್ಯವಹಾರಗಳಿಗೆ ಕಡಿವಾಣ ಹಾಕುವುದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಕ್ರಮ ವಹಿಸಿದೆ.

ಪಂಚಾಯ್ತಿಗಳ ಎಲ್ಲ ದಾಖಲೆ ಹಾಗೂ ದಾಖಲಾತಿಗಳನ್ನು ಗಣಕೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರಂತೆ ಜಿಲ್ಲೆಯ ಎಲ್ಲ 506 ಗ್ರಾಮ ಪಂಚಾಯ್ತಿಗಳ ದಾಖಲೆಗಳನ್ನು ಕಂಪ್ಯೂಟರ್‌ ವ್ಯವಸ್ಥೆಯಲ್ಲಿ ದಾಖಲಿಸಲಾಗುವುದು. ಈ ಮೂಲಕ ಕಾಗದರಹಿತ ಆಡಳಿತಕ್ಕೆ ಆದ್ಯತೆ ನೀಡುವುದು ಮತ್ತು ವಿದ್ಯುನ್ಮಾನ (ಇ–ಆಫೀಸ್‌) ಕಾರ್ಯಚಟುವಟಿಕೆಗಳಿಗೆ ಒತ್ತು ಕೊಡುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯ್ತಿಗಳಿಗೆ ತಲಾ ₹ 25ಸಾವಿರ ಅನುದಾನ ಒದಗಿಸಲಾಗಿದೆ. ಟೆಂಡರ್‌ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ.

ಯಾವ್ಯಾವ ದಾಖಲೆಗಳು?:ಗ್ರಾಮಸಭೆ ನಡವಳಿಗಳು, ಸಾಮಾನ್ಯಸಭೆಯ ನಡವಳಿಗಳು, ಆಸ್ತಿ ರಿಜಿಸ್ಟರ್‌ಗಳು, ಕಾಮಗಾರಿ ರಿಜಿಸ್ಟರ್‌ಗಳು, ಗ್ರಾಮ ಪಂಚಾಯ್ತಿ ಸಿಬ್ಬಂದಿ ನೇಮಕಾತಿ ರಿಜಿಸ್ಟರ್ ಹಾಗೂ ದಾಖಲೆಗಳು, ಮ್ಯೂಟೇಷನ್‌ ರಿಜಿಸ್ಟರ್ಗಗಳು, ಪಂಚಾಯ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ಆದೇಶಗಳು, ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ದಾಖಲೆಗಳು, ವಸತಿ ಯೋಜನೆಯಡಿ ಮಂಜೂರಾದ ಫಲಾನುಭವಿಗಳ ದಾಖಲೆಗಳು, ವರ್ಷವಾರು ಲೆಕ್ಕಪತ್ರಗಳು, ಆಶ್ರಯ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು, ಲೆಕ್ಕಪತ್ರ ಪರಿಶೋಧನೆ ವರದಿಗಳು ಮತ್ತು ಜಮಾಬಂದಿ ವರದಿಗಳನ್ನು ಗಣಕೀಕರಣಗೊಳಿಸಲಾಗುತ್ತಿದೆ.

ಪ್ರಸ್ತುತ ಇವುಗಳನ್ನು ಕಾಗದ, ರಿಜಿಸ್ಟರ್‌ಗಳಲ್ಲಿ ಇಡಲಾಗುತ್ತಿದೆ. ಕಾಲಕ್ರಮೇಣ ಇವುಗಳು ಹಾಳಾಗುವುದು ಅಥವಾ ಅಳಿಸಿ ಹೋಗುವ ಸಾಧ್ಯತೆ ಇರುತ್ತದೆ. ಅಲ್ಲದೇ, ಸಂಗ್ರಹಕ್ಕೆಂದೇ ಪ್ರತ್ಯೇಕ ಕೊಠಡಿ ಬೇಕಾಗುತ್ತಿದೆ.

ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ:‘ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿಗೆ ಇರುವಂತೆ ಗ್ರಾಮ ಪಂಚಾಯ್ರಿಗಳಿಗೆ ರೆಕಾರ್ಡ್‌ ರೂಂ ಇರುವುದಿಲ್ಲ. ಹೀಗಾಗಿ, ಎಲ್ಲ ದಾಖಲೆಗಳನ್ನೂ ಗಣಕೀಕರಣ ಮಾಡುವುದು ಇಂದಿನ ಅಗತ್ಯವಾಗಿದೆ. ನಿಗದಿತ ದಾಖಲೆಗಳನ್ನು ಸ್ಕ್ಯಾನಿಂಗ್‌ ಮಾಡಿ ನಿಗದಿತ ಫಾರ್ಮೆಟ್‌ನಲ್ಲಿ ದಾಖಲಿಸಲಾಗುವುದು. ವರ್ಷವಾರು, ವಿಷಯವಾರು ಅವುಗಳು ಲಭ್ಯವಾಗಲಿವೆ. ದಾಖಲೆಗಳು ಹಾಳಾಗುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಲವು ವರ್ಷಗಳ ಹಿಂದಿನ ದಾಖಲೆಗಳನ್ನು ತಿದ್ದು‍ಪಡಿ ಮಾಡಿ ಅವ್ಯವಹಾರ ನಡೆಸುವುದು ಕೆಲವು ಕಡೆಗಳಲ್ಲಿ ಕಂಡುಬಂದಿದೆ. ಇಂತಹ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಗಣಕೀಕರಣ ಸಹಕಾರಿಯಾಗಿದೆ. ಪ್ರತಿ ಸಭೆಗಳ ನಡವಳಿಗಳನ್ನು ನಿಗದಿತ ತಂತ್ರಾಂಶದಲ್ಲಿ ವಿದ್ಯುನ್ಮಾನ– ವೇದಿಕೆಯಲ್ಲಿ ದಾಖಲಿಸುವುದರಿಂದ ಮಾಹಿತಿ ಪಡೆಯುವುದು ಸುಲಭವಾಗುತ್ತದೆ. ಮುಂದಿನ ದಿನಗಳಲ್ಲಿ ಪಂಚಾಯ್ತಿಗಳು ತಮ್ಮದೇ ಜಾಲತಾಣದಲ್ಲೂ ದಾಖಲೆಗಳನ್ನು ಹಾಕಬಹುದಾಗಿದೆ. ಆಸಕ್ತರು ಅವುಗಳನ್ನು ವೀಕ್ಷಿಸಬಹುದಾಗಿದೆ. ಪಂಚಾಯ್ತಿಯಿಂದ ಕೈಗೊಂಡಿರುವ ಯಾವುದೇ ಯೋಜನೆಯ ಮಾಹಿತಿಗಾಗಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಅರ್ಜಿ ಸಲ್ಲಿಸಿ ಕಾಯುವ ಪ್ರಮೇಯ ಬರುವುದಿಲ್ಲ’ ಎನ್ನುತ್ತಾರೆ ಅವರು.

*
ಪ್ರಸ್ತುತ ಪಂಚಾಯ್ತಿಗಳಲ್ಲಿರುವ ಹಿಂದಿನ ವರ್ಷಗಳ ದಾಖಲೆಗಳನ್ನು ಗಣಕೀಕರಣ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಮುಂದಿನ ಎಲ್ಲ ನಡವಳಿಗಳನ್ನೂ ವಿದ್ಯುನ್ಮಾನ–ವೇದಿಕೆಯಲ್ಲೇ ದಾಖಲಿಸಲಾಗುವುದು.
-ಡಾ.ಕೆ.ವಿ. ರಾಜೇಂದ್ರ, ಸಿಇಒ, ಬೆಳಗಾವಿ ಜಿಲ್ಲಾ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT