ಪ್ರಸನ್ನ ಕುಲಕರ್ಣಿ
ಖಾನಾಪುರ: ತಾಲ್ಲೂಕಿನ ಭೀಮಗಡ ವನ್ಯಧಾಮ ವ್ಯಾಪ್ತಿಯಲ್ಲಿರುವ ತಳೇವಾಡಿ ಗ್ರಾಮ ನಾಲ್ಕೂ ದಿಕ್ಕುಗಳಿಂದ ವನಸಿರಿ ಮತ್ತು ಎತ್ತರದ ಬೆಟ್ಟಗುಡ್ಡಗಳಿಂದ ಸುತ್ತುವರೆದಿದೆ. ಆದರೆ, ಮೂಲ ಸೌಕರ್ಯಗಳ ಕೊರತೆಯ ಕಾರಣ ಜನ ಜೀವನ ತತ್ತರಿಸಿದೆ.
ನಿಸರ್ಗ ದೇವತೆ ಧರೆಗಿಳಿದಿರುವಂತೆ ಭಾಸವಾಗುವ ಈ ಗ್ರಾಮದ ಅಕ್ಕಪಕ್ಕ ಪ್ರಾಕೃತಿಕ ಸಂಪತ್ತು ಯಥೇಚ್ಛವಾಗಿದೆ. ಶುದ್ಧ ಗಾಳಿ, ಶುದ್ಧ ನೀರು, ಸ್ವಚ್ಛಂದ ಹವಾಮಾನದಲ್ಲಿ ವಾಸಿಸುತ್ತಿರುವ ಈ ಊರಿನ ನಿವಾಸಿಗಳು ದೃಷ್ಟವಂತರು. ಆದರೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳು ಮತ್ತು ಮುಖ್ಯವಾಗಿ ಸಂಪರ್ಕ ರಸ್ತೆಯ ಕೊರತೆಯಿಂದಾಗಿ ಮಳೆಗಾಲದ ನಾಲ್ಕು ತಿಂಗಳ ಅವಧಿಯಲ್ಲಿ ಈ ಗ್ರಾಮ ಮುಖ್ಯ ವಾಹಿನಿಯಿಂದ ಸಂಪರ್ಕ ಕಳೆದುಕೊಳ್ಳುವ ಕಾರಣ ಈ ಸಮಯದಲ್ಲಿ ಅವರ ಕಷ್ಟ ಹೇಳತೀರದು.
ತಳೇವಾಡಿ ಗ್ರಾಮ ಭೀಮಗಡ ವನ್ಯಧಾಮದ ಹೆಮ್ಮಡಗಾ ಪ್ರಕೃತಿ ಶಿಬಿರದಿಂದ 12 ಕಿಮೀ ದೂರದಲ್ಲಿ ದಟ್ಟ ಅರಣ್ಯದಲ್ಲಿದೆ. ತಾಲ್ಲೂಕಿನ ಪಶ್ಚಿಮ ದಿಕ್ಕಿನಲ್ಲಿ ಗುಂಜಿ ಹೋಬಳಿ ಮತ್ತು ಶಿರೋಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಗ್ರಾಮವಿದೆ. ತಾಲ್ಲೂಕು ಕೇಂದ್ರದಿಂದ 25 ಕಿ.ಮೀ ಹಾಗೂ ಜಿಲ್ಲಾ ಕೇಂದ್ರದಿಂದ 52 ಕಿ.ಮೀ ದೂರದಲ್ಲಿದೆ.
ಗ್ರಾಮದ ಜನಸಂಖ್ಯೆ 120. ಗ್ರಾಮದಲ್ಲಿ ಮೊದಲು ಪ್ರಾಥಮಿಕ ಶಾಲೆ ಇತ್ತು. ಮಕ್ಕಳಿಲ್ಲದ ಕಾರಣ ಹಲವು ವರ್ಷಗಳಿಂದ ಮುಚ್ಚಿದೆ. ಹೆಮ್ಮಡಗಾದಿಂದ ತಳೇವಾಡಿ ವರೆಗಿನ ಸಂಪರ್ಕ ರಸ್ತೆಗೆ ಕಾಯಕಲ್ಪ ಸಿಕ್ಕಿಲ್ಲ. ರಸ್ತೆ ಇಲ್ಲದ್ದರಿಂದ ಬಸ್ ಸೌಲಭ್ಯವಿಲ್ಲ. ಅಂಬುಲೆನ್ಸ್ ಊರಿಗೆ ಬರುವ ಹಾಗಿಲ್ಲ. ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿದೆ. ತುರ್ತು ಪರಿಸ್ಥಿತಿಗಳಲ್ಲಿ ಗ್ರಾಮಸ್ಥರು ಅನಾರೋಗ್ಯ ಪೀಡಿತರನ್ನು ತಮ್ಮೂರಿನಿಂದ 12 ಕಿ.ಮೀ ದೂರದ ಹೆಮ್ಮಡಗಾ ವರೆಗೆ ಹೊತ್ತು ತರುವ ಅನಿವಾರ್ಯತೆ ಇದೆ.
ಮಳೆಗಾಲದ ಸಮಯದಲ್ಲಿ ತಳೇವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುವ ಕಾರಣ ನಮ್ಮ ಕಣ್ಣಿನ ದೃಷ್ಟಿ ಹರಿಯುವವರೆಗೆ ಕಾಣುವ ದೃಶ್ಯವೆಲ್ಲ ಅಚ್ಚಹಸಿರಿನಿಂದ ಕಂಗೊಳಿಸುತ್ತದೆ.
ಪ್ರಸಿದ್ಧ ಪ್ರವಾಸಿ ತಾಣ: ತೊಗಲು ಬಾವಲಿಗಳ ಆವಾಸಸ್ಥಾನದಿಂದಾಗಿ ಬೆಳಗಾವಿ ಜಿಲ್ಲೆಯ ಬಹುಮುಖ್ಯ ಪ್ರವಾಸಿ ತಾಣವಾಗಿರುವ ಈ ಗ್ರಾಮದ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡುವ ಮೂಲಕ ಗ್ರಾಮಸ್ಥರಿಗೆ ಮತ್ತು ಚಾರಣಪ್ರಿಯರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಹೆಮ್ಮಡಗಾ ಗ್ರಾಮದ ನಿವಾಸಿ ಮನೋಹರ ಅವರ ಆಗ್ರಹ.
ಮಳೆಗಾಲದ ಸಮಯದಲ್ಲಿ ತಳೇವಾಡಿ ಗ್ರಾಮದ ಸುತ್ತಮುತ್ತ ಬೀಸುವ ತಂಗಾಳಿ, ನಿಸರ್ಗದತ್ತ ತಂಪಾದ ವಾತಾವರಣ ಮತ್ತು ಜುಳುಜುಳು ನೀರಿನ ನಿನಾದ ನೋಡುಗರ ಮೈ ಪುಳಕಗೊಳಿಸುವುದರ ಜೊತೆಗೆ ಹೃನ್ಮನ ಸೆಳೆಯುತ್ತದೆ. ತಳೇವಾಡಿ ಗ್ರಾಮದ ಪಕ್ಕದಲ್ಲಿ ಒಂದು ವಿಶಾಲವಾದ ಗುಹೆ ಇದೆ. ಈ ಗುಹೆಯಲ್ಲಿ ಇಡೀ ಏಷಿಯಾ ಖಂಡದಲ್ಲೇ ಅಪರೂಪವೆನಿಸುವ ತೊಗಲು ಬಾವಲಿಗಳು ವಾಸವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.