ಶನಿವಾರ, ಮಾರ್ಚ್ 6, 2021
31 °C
ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಮಲಪ್ರಭಾಗೆ ಅದ್ಧೂರಿ ಸ್ವಾಗತ

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಾಸೆ: ಮಲಪ್ರಭಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ‘ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಪದಕ ಗಳಿಸುವುದು ನನ್ನ ಗುರಿಯಾಗಿದೆ. ಅಲ್ಲಿ ಪದಕ ಗೆದ್ದೇ ಗೆಲ್ಲುತ್ತೇನೆ’ ಎಂದು ಏಷ್ಯನ್ ಗೇಮ್ಸ್‌ನ ಕುರಾಶ್‌ ಕ್ರೀಡೆಯ 52 ಕೆ.ಜಿ. ವಿಭಾಗದಲ್ಲಿ ಕಂಚು ತಮ್ಮದಾಗಿಸಿಕೊಂಡ ಮಲಪ್ರಭಾ ಜಾಧವ ವಿಶ್ವಾಸ ವ್ಯಕ್ತಪಡಿಸಿದರು.

ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗಳಿಸಿದ ಬಳಿಕ ನಗರಕ್ಕೆ ಬಂದ ಅವರು, ಪ್ರವಾಸಿಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಕುರಾಶ್ ಜುಡೋ ಮಾದರಿಯ ಕ್ರೀಡೆ ಆಗಿದೆ. ಈ ಆಟದಲ್ಲಿ ದೇಶವನ್ನು ಪ್ರತಿನಿಧಿಸಿ ಭಾಗವಹಿಸಿ, ಕಂಚಿನ ಪದಕ ಗೆದ್ದಿರುವುದಕ್ಕೆ ತುಂಬಾ ಖುಷಿಯಾಗಿದೆ. ಒಲಿಂಪಿಕ್ಸ್‌ ಸೇರಿದಂತೆ ಮುಂದಿನ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ನೀಡಲು ಪೂರಕವಾಗಿ ತರಬೇತಿ ಪಡೆಯುತ್ತೇನೆ, ಪರಿಶ್ರಮ ಹಾಕುತ್ತೇನೆ’ ಎಂದರು.

ಜುಡೋ ಅಕಾಡೆಮಿ ಅಗತ್ಯ: ‘ಬೆಳಗಾವಿಯಲ್ಲಿ ಜುಡೋ ಹಾಗೂ ಕುರಾಶ್ ಕ್ರೀಡೆಯಲ್ಲಿ ಸಾಧನೆ ಮಾಡುವಂತಹ ಅನೇಕ ಕ್ರೀಡಾಪಟುಗಳಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಲು ಜುಡೋ ಅಕಾಡೆಮಿ ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು’ ಎಂದು ಕೋರಿದರು.

ಮಲಪ್ರಭಾ ಜಾಧವ ಅವರನ್ನು ಸನ್ಮಾನಿಸಿದ ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ, ‘ಈಕೆಯ ಸಾಧನೆಯು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಪೊಲೀಸ್ ಕಮೀಷನರೇಟ್ ವತಿಯಿಂದ ₹ 10ಸಾವಿರ ಬಹುಮಾನ ನೀಡಲಾಗುವುದು’ ಎಂದು ಪ್ರಕಟಿಸಿದರು.

ಎಸ್ಪಿ ಸುಧೀರ್‌ಕುಮಾರ್ ರೆಡ್ಡಿ, ಡಿಸಿಪಿ ಸೀಮಾ ಲಾಟ್ಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ ಸನ್ಮಾನಿಸಿದರು.

ಬಹಳ ಅವಕಾಶ: ತರಬೇತುದಾರ ಜಿತೇಂದ್ರಸಿಂಗ್ ಮಾತನಾಡಿ, ‘ಬೆಳಗಾವಿಯಲ್ಲಿ ಜುಡೋ ಹಾಗೂ ಕುರಾಶ್ ಕ್ರೀಡೆ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಅಗತ್ಯ ಸೌಲಭ್ಯ ಒದಗಿಸಿದರೆ ಮಲಪ್ರಭಾ ಮತ್ತಿತರ ಕ್ರೀಡಾಪಟುಗಳು ಉತ್ತಮ ತರಬೇತಿ ಪಡೆದು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲರು. ದೇಶ ಹಾಗೂ ಬೆಳಗಾವಿಯ ಹೆಸರನ್ನು ಬೆಳಗಿಸುವರು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಾಗಿದೆ‌’ ಎಂದು ಹೇಳಿದರು.

ಇದಕ್ಕೂ ಮುನ್ನ, ಪ್ರವಾಸಿಮಂದಿರಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಕೂಡ ಮಲಪ್ರಭಾಗೆ ಅಭಿನಂದನೆ ಸಲ್ಲಿಸಿದರು. ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಕ್ರೀಡಾ ಶಾಲೆಯ ಕ್ರೀಡಾಪಟುಗಳು, ತುರುಮುರಿಯ ಮುಖಂಡರು ಅಭಿನಂದಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಸಿ.ಬಿ. ರಂಗಯ್ಯ ನಿರೂಪಿಸಿದರು.

ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಬೆಳಗಾವಿಗೆ ಬಂದ ಮಲಪ್ರಭಾ ಜಾಧವ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡು, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದ ಬಳಿಕ ಅವರ ಊರು ತುರಮುರಿಗೆ ಬೀಳ್ಕೊಡಲಾಯಿತು. ಅಲ್ಲೂ ಗ್ರಾಮಸ್ಥರು ಆತ್ಮೀಯ ಸ್ವಾಗತ ಕೋರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.