ಸೋಮವಾರ, ಮಾರ್ಚ್ 1, 2021
30 °C
ಜಿಎಸ್‌ಟಿ ದಿನಾಚರಣೆಯಲ್ಲಿ ಬಿಜಾಯ್‌ಕುಮಾರ್‌ ಎಚ್ಚರಿಕೆ

ತೆರಿಗೆ ವಂಚಿಸಲು ಯತ್ನಿಸಿ, ಶಿಕ್ಷೆಗೊಳಗಾಗದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಒಂದು ದೇಶ, ತೆರಿಗೆ ಮತ್ತು ಮಾರುಕಟ್ಟೆ ಎನ್ನುವ ಪರಿಕಲ್ಪನೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೊಳಿಸಲಾಗಿದೆ. ಎಲ್ಲ ವಹಿವಾಟುಗಳ ಮೇಲೂ ಕಣ್ಣಿಡಲಾಗಿದೆ. ಹೀಗಾಗಿ, ಉದ್ದಿಮೆದಾರರು ಮತ್ತು ವ್ಯಾಪಾರಿಗಳು ತೆರಿಗೆ ವಂಚಿಸಲು ಯತ್ನಿಸಬೇಡಿ. ಶಿಸ್ತು ಕ್ರಮಕ್ಕೆ ಗುರಿಯಾಗಬೇಡಿ’ ಎಂದು ಕೇಂದ್ರೀಯ ತೆರಿಗೆ ಪ್ರಧಾನ ಆಯುಕ್ತ ಬಿಜಾಯ್‌ಕುಮಾರ್ ಕರ್ ಎಚ್ಚರಿಕೆ ನೀಡಿದರು.

ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಆಯುಕ್ತರ ಕಚೇರಿಯಿಂದ ಸೋಮವಾರ ಆಯೋಜಿಸಲಾಗಿದ್ದ ಜಿಎಸ್‌ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಹಿಂದೆ ಇದ್ದ ಹಲವು ರೀತಿಯ ತೆರಿಗೆಗಳು ಹೋಗಿ ಇಂದು ಒಂದೇ ತೆರಿಗೆ ವ್ಯವಸ್ಥೆ ಜಾರಿಯಲ್ಲಿದೆ. ಅಭಿವೃದ್ಧಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಇದಾಗಿದೆ. ಅಧಿಕಾರಿಗಳು, ಉದ್ದಿಮೆದಾರರು ಹಾಗೂ ಸಾರ್ವಜನಿಕರು ಬದಲಾವಣೆಯನ್ನು ಸ್ವಾಗತಿಸಿದ್ದಾರೆ. ಹೀಗಾಗಿ ಅನುಷ್ಠಾನ ಸುಲಭವಾಗಿದೆ’ ಎಂದು ತಿಳಿಸಿದರು.

ಹಿಂದೆ–ಮುಂದೆ ನೋಡಬೇಡಿ:

‘ಹಿಂದಕ್ಕೆ ಹೋಲಿಸಿದರೆ ಈಗ ತೆರಿಗೆ ಪ್ರಮಾಣವನ್ನು ಇಳಿಸಲಾಗಿದೆ. ಹಲವು ವಿನಾಯಿತಿಗಳನ್ನು ನೀಡಲಾಗಿದೆ. ಇಷ್ಟಾದ ಮೇಲೂ ವಂಚನೆ ಮಾಡುವುದಕ್ಕೆ ಮುಂದಾಗಬಾರದು. ನೀವೇನು ನಿಮ್ಮ ಜೇಬಿನಿಂದ ಕೊಡುವುದಿಲ್ಲ. ಬಳಕೆದಾರರಿಂದ ಪಡೆದಿರುತ್ತೀರಿ ಅದನ್ನು ಕಟ್ಟಲು‌ ಹಿಂದೆ– ಮುಂದೆ ನೋಡಬೇಡಿ. ಪ್ರಕರಣ ದಾಖಲಿಸಲು ಅವಕಾಶ ಕೊಡಬೇಡಿ. ವ್ಯತ್ಯಾಸ ಕಂಡುಬಂದರೆ ದಂಡ ಕಟ್ಟಬೇಕಾಗುತ್ತದೆ. ಈಗ ಎಲ್ಲ ಮಾಹಿತಿಯೂ ನಮ್ಮ ಬಳಿ ಇರುವುದರಿಂದ ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಇಲಾಖೆಯೊಂದಿಗೆ ಸಹಕರಿಸಬೇಕು. ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ತಿಳಿಸಿದರು.

‘ತೆರಿಗೆ ವಂಚನೆ ಪ್ರಕರಣಗಳನ್ನು ಗಮನಿಸಿದರೆ, ಪಾವತಿಸದವರು ಇನ್ನೂ ಇದ್ದಾರೆ ಎನ್ನುವುದು ಕಂಡುಬರುತ್ತದೆ. ಇದನ್ನು ಇಲಾಖೆಯು ಸಹಿಸುವುದಿಲ್ಲ. ಹೆಚ್ಚಿನ ಬಾಕಿ ಉಳಿಸಿಕೊಂಡಿದ್ದರೆ ಜೈಲಿಗೆ ಕಳುಹಿಸುವುದಕ್ಕೂ ಅವಕಾಶವಿದೆ. ಅದಕ್ಕೆ ಅನುವು ಮಾಡಿಕೊಡಬೇಡಿ. ಕೇಂದ್ರವೋ, ರಾಜ್ಯ ಸರ್ಕಾರವೋ ರಕ್ಷಿಸುತ್ತದೆ ಎನ್ನುವ ಮನೋಭಾವ ಬೇಡ. ಎಲ್ಲ ದಾಖಲೆಗಳೂ ಲಭ್ಯವಿರುವುದರಿಂದ ತಪ್ಪಿಸಿಕೊಳ್ಳಲು ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸುಧಾರಣೆಗಾಗಿ:

ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಕುಲಪತಿ ಪ್ರೊ.ವಿವೇಕ್ ಸಾವೊಜಿ ಮಾತನಾಡಿ, ‘ಜಿಎಸ್‌ಟಿ ಕ್ರಾಂತಿಕಾರಕ ಕ್ರಮವಾಗಿದೆ. ಇದರಿಂದಾಗಿ ಬಹಳಷ್ಟು ಬದಲಾವಣೆಯಾಗಿದೆ. ಸುಧಾರಣೆಗಾಗಿ ಬದಲಾವಣೆಗೆ ಒಗ್ಗಿಕೊಳ್ಳಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಹೆಚ್ಚಿನ ತೆರಿಗೆ ಪಾವತಿಸಿದ್ದಕ್ಕಾಗಿ ಸನ್ಮಾನಿತರಾದ ಮೆಸರ್ಸ್‌ ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿ ಉಪಾಧ್ಯಕ್ಷ (ಫೈನಾನ್ಸ್‌ ಆಂಡ್ ಆಡಿಟ್) ಮಾಧವ ವಾರಿಯರ್ ಮಾತನಾಡಿ, ‘ಜಿಎಸ್‌ಟಿ ಜಾರಿಗೂ ಮುನ್ನ ಹಲವು ಗೊಂದಲಗಳಿದ್ದವು. ಆದರೆ, ಅನುಷ್ಠಾನದ ನಂತರ ವ್ಯವಸ್ಥೆ ಸುಗಮವಾಗಿ ನಡೆಯುತ್ತಿದೆ. ವಿದ್ಯುತ್, ಪೆಟ್ರೋಲ್ ಹಾಗೂ ಡೀಸೆಲ್ ಅನ್ನೂ ಜಿಎಸ್‌ಟಿ ಅಡಿಗೆ ತರಬೇಕು’ ಎಂದು ಒತ್ತಾಯಿಸಿದರು.

ಕೇಂದ್ರೀಯ ತೆರಿಗೆ ಬೆಳಗಾವಿ ಆಡಿಟ್ ವಿಭಾಗದ ಆಯುಕ್ತ ಶಿವಾಜಿ ಎಚ್. ಡಾಂಗೆ ಹಾಗೂ ಅಪೀಲುಗಳ ವಿಭಾಗದ ಆಯುಕ್ತ ಮಂಕೋಸ್ಕರ್ ಸುರೇಂದ್ರಕುಮಾರ್ ಚಂದ್ರಕಾಂತರಾವ್ ಭಾಗವಹಿಸಿದ್ದರು.

ಬಸಮ್ಮ ಪ್ರಾರ್ಥಿಸಿದರು. ಹೆಚ್ಚುವರಿ ಆಯುಕ್ತ ಎಸ್.ಕೆ. ಮಾಥೋ ಸ್ವಾಗತಿಸಿದರು. ಜಂಟಿ ಆಯುಕ್ತ ಕೆ. ರಾಜೇಶ್‌ ರಾಮ್‌ರಾವ್ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.