ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಶಿಕ್ಷಕರ ವೇತನ ಅನುದಾನ ವಾಪಸ್!

ಡಿಡಿಪಿಐ ಪುಂಡಲೀಕಗೆ ಬಿಸಿ ಮುಟ್ಟಿಸಿದ ಸದಸ್ಯರು, ಸಿಇಒ
Last Updated 18 ಜೂನ್ 2019, 12:08 IST
ಅಕ್ಷರ ಗಾತ್ರ

ಬೆಳಗಾವಿ: ಅತಿಥಿ ಶಿಕ್ಷಕರಿಗೆ ಸರ್ಕಾರದಿಂದ ಬಿಡುಗಡೆಯಾಗಿದ್ದ ಅನುದಾನ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾಪಸ್‌ ಹೋಗಿರುವುದು ಬಹಿರಂಗಗೊಂಡಿತು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ರಮೇಶ ಗೋರಲ, ‘130 ಅತಿಥಿ ಶಿಕ್ಷಕರಲ್ಲಿ 30 ಮಂದಿಗಷ್ಟೇ ವೇತನ ದೊರೆತಿದೆ. ಉಳಿದವರಿಗೆ ವೇತನ ಸಿಕ್ಕಿಲ್ಲ. ಖಾನಾಪುರ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ. ಇದರಿಂದಾಗಿ ಶಿಕ್ಷಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಸಂಬಂಧಿಸಿದ ಬಿಇಒ ಹಾಗೂ ಖಜಾನೆಯವರ ನಿರ್ಲಕ್ಷ್ಯದಿಂದ ತೊಂದರೆಯಾಗಿದೆ’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಡಾ.ಕೆ.ವಿ. ರಾಜೇಂದ್ರ, ‘ಈ ವಿಷಯ ನನ್ನ ಗಮನಕ್ಕೂ ಬಂದಿದೆ. ಕೆಲಸ ಮಾಡಿದವರಿಗೆ ವೇತನ ದೊರೆಯದಿದ್ದರೆ ಅವರೇನು ವಿಷ ಕುಡಿಯಬೇಕಾ, ನಿಮಗೆ ಸಂಬಳ ಸಿಗಲಿಲ್ಲವೆಂದರೆ ಸುಮ್ಮನಿರುತ್ತೀರಾ? ಖಾನಾಪುರ ಬಿಇಒ ವಿರುದ್ಧ ಬಹಳಷ್ಟು ದೂರುಗಳು ಬಂದಿವೆ. ಅನುದಾನ ವಾಪಸ್‌ ಹೋಗಿರುವುದು ಏಕೆ, ಇದಕ್ಕೆ ಕಾರಣವಾದರು ಯಾರು ಎನ್ನುವುದನ್ನು ಪತ್ತೆ ಹಚ್ಚಬೇಕು. ಕಾರಣವಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಇದೆಲ್ಲವೂ ಮೂರು ದಿನಗಳಲ್ಲಿ ನಡೆಯಬೇಕು. ಖಾನಾಪುರ ಬಿಇಒ ವಿರುದ್ಧ ನೀವು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕ್ರಮಕ್ಕಾಗಿ ನಾನು ಸರ್ಕಾರಕ್ಕೆ ಬರೆಯುತ್ತೇನೆ. ಡಿಡಿಪಿಐ ಆಗಿ ಕರ್ತವ್ಯದಲ್ಲಿ ಲೋಪ ಎಸಗಿದ್ದೀರಿ. ಇದನ್ನು ಸಹಿಸಲಾಗುವುದಿಲ್ಲ’ ಎಂದು ಸಿಇಒ ಡಾ.ಕೆ.ವಿ. ರಾಜೇಂದ್ರ ಡಿಡಿಪಿಐ ಆನಂದ ಪುಂಡಲೀಕ ಅವರನ್ನು ತರಾಟೆಗೆ ತೆಗೆದುಕೊಂಡರು.

ನೇರವಾಗಿ ವೇತನ ಕೊಡಿ:

‘ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ವೇತನ ದೊರೆಯುವಂತೆ ಮಾಡುತ್ತೇನೆ’ ಎಂದು ಡಿಡಿಪಿಐ ಪ್ರತಿಕ್ರಿಯಿಸಿದರು. ‘ಇಲ್ಲವಾದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಸಿಇಒ ಎಚ್ಚರಿಕೆ ನೀಡಿದರು.

‘ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ವಿಳಂಬವಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ’ ಎಂದು ಸದಸ್ಯರು ತಿಳಿಸಿದರು.

‘ಈ ಶೈಕ್ಷಣಿಕ ಸಾಲಿಗೆ ಎಷ್ಟು ಅತಿಥಿ ಶಿಕ್ಷಕರು ಬೇಕಾಗುತ್ತದೆ ಎನ್ನುವುದು ಗೊತ್ತಿರುತ್ತದೆ. ಅದರ ಆಧಾರದ ಮೇಲೆ, ಶಾಲೆ ಆರಂಭಕ್ಕೆ ಮುನ್ನವೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಿಲ್ಲವೇಕೆ’ ಎಂದು ಸಿಇಒ ಡಿಡಿಪಿಐಗಳನ್ನು ಪ್ರಶ್ನಿಸಿದರು.

‘ಅತಿಥಿ ಶಿಕ್ಷಕರಿಗೆ ವೇತನವನ್ನು ಚೆಕ್‌ನಲ್ಲಿ ನೀಡುವ ಬದಲಿಗೆ, ಅವರ ಖಾತೆಗೆ ನೇರವಾಗಿ ಜಮಾ ಮಾಡುವ ಕುರಿತು ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸೋಣ. ಬೇರೆ ಕಡೆ ಏನಾದರೂ ಮಾಡಿಕೊಳ್ಳಲಿ, ನಮ್ಮಲ್ಲಿ ಆರ್‌ಟಿಜಿಎಸ್ ಮೂಲಕ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಪಠ್ಯಪುಸ್ತಕಗಳಲ್ಲಿ ತ‍ಪ್ಪು:

‘ಮರಾಠಿ ಮಾಧ್ಯಮದ್ದು ಸೇರಿದಂತೆ ಪ್ರಾಥಮಿಕ ಶಾಲೆಯ ಹಲವು ವಿಷಯಗಳ ಪಠ್ಯಪುಸ್ತಕಗಳಲ್ಲಿ ಬಹಳಷ್ಟು ತಪ್ಪುಗಳು ಉಳಿದಿವೆ. ಇದು ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ’ ಎಂದು ಸದಸ್ಯೆ ಸರಸ್ವತಿ ಪಾಟೀಲ ಪ್ರಸ್ತಾಪಿಸಿದರು.

ಈ ವಿಷಯದಲ್ಲೂ ಕ್ರಮ ಕೈಗೊಳ್ಳದಿರುವುದಕ್ಕೆ ಡಿಡಿಪಿಐಗೆ ಸಿಇಒ ಬಿಸಿ ಮುಟ್ಟಿಸಿದ ಸಿಇಒ, ‘ಪಠ್ಯಪುಸ್ತಕಗಳಲ್ಲಿ ತಪ್ಪು ಇರುವುದಕ್ಕೆ ಸಂಬಂಧಿಸಿದಂತೆ ರಚನಾ ಸಮಿತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗುವುದು. ಶಿಕ್ಷಣ ಇಲಾಖೆ ಅಧಿಕಾರಿಗಳು ಪುಸ್ತಕಗಳಲ್ಲಿರುವ ತಪ್ಪು ಸರಿಪಡಿಸಲು ಕೂಡಲೇ ಕ್ರಮ ವಹಿಸಬೇಕು’ ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ವಿವೇಚನೆಗೆ ಒಳ‍ಪಟ್ಟು ನೀಡಿದ್ದ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಸದಸ್ಯ ಗುರಪ್ಪ ಆರೋಪಿಸಿದರು. ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಶಂಕರ ಮಾಡಲಗಿ, ‘ಅಧ್ಯಕ್ಷರು ಅವರ ವಿವೇಚನೆ ಪ್ರಕಾರ ಅನುದಾನ ನೀಡಿದ್ದಾರೆ. ಪ್ರವಾಸದ ವೇಳೆ ಬಂದ ದೂರುಗಳನ್ನು ಆಧರಿಸಿ ಅನುದಾನ ಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಲಾಗದು’ ಎಂದು ಸಮರ್ಥಿಸಿಕೊಂಡರು. ಆಗ, ಅವರು ಹಾಗೂ ಗುರಪ್ಪ ನಡುವೆ ಎರು ದನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಸಿಇಒ ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT