ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರ ಬವಣೆ ನೀಗಿಸಲು ಕ್ರಮ: ಉಪ ಮುಖ್ಯಮಂತ್ರಿ ಸವದಿ

ಏತ ನೀರಾವರಿಗೆ ಚಾಲನೆ ನೀಡಿದ ಉಪ ಮುಖ್ಯಮಂತ್ರಿ ಸವದಿ
Last Updated 27 ಮೇ 2021, 13:58 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ‘ಹಲ್ಯಾಳ ಏತ ನೀರಾವರಿ ಯೋಜನೆಯಿಂದಾಗಿ ತಾಲ್ಲೂಕಿನ ಬಹು ಪ್ರದೇಶಕ್ಕೆ ನೀರು ಹರಿಯಲಿದ್ದು ಎಲ್ಲ ಕೆರೆ–ಕಾಲುವೆಗಳು ತುಂಬಲಿವೆ. ಈ ಮೂಲಕ ಕೃಷಿಕರ ಬವಣೆ ನೀಗಿಸುವಂತಹ ಕೆಲಸ ಮಾಡಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಅಥಣಿ ಮತ ಕ್ಷೇತ್ರದ ಹಾಲ್ಯಾಳ ಏತ ನೀರಾವರಿ ಯೋಜನೆಗೆ ಅಧಿಕೃತವಾಗಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ಯೋಜನೆಯಿಂದಾಗಿ ಅಂತರ್ಜಲ ಮಟ್ಟ ಸುಧಾರಣೆ ಆಗುವ ಜೊತೆಗೆ ಬತ್ತಿ ಹೋಗಿದ್ದ ಕೊಳವೆ ಬಾವಿಗಳನ್ನು ಮರುಪೂರಣ ಮಾಡಲು ಸಾಧ್ಯವಾಗಲಿದೆ. ಉತ್ತಮ ಬೆಳೆ ಬಂದು ರೈತರ ತಲಾ ಆದಾಯ ಹೆಚ್ಚಾಗಲಿದೆ. ಸಾವಿರಾರು ಅಡಿ ಆಳ ಕೊಳವೆ ಬಾವಿಗಳನ್ನು ಕೊರೆಸಿ ನಷ್ಟದಲ್ಲಿದ್ದ ರೈತರಿಗೆ ಈ ಯೋಜನೆ ಸಹಕಾರಿಯಾಗಿದೆ. ವಲಸೆ ಹೋಗಿದ್ದ ಸಾವಿರಾರು ಕುಟುಂಬಗಳು ವಾಪಸ್ ಬಂದು ಕೃಷಿ ಕಾರ್ಯದಲ್ಲಿ ತೊಡಗಿ ಸಮೃದ್ಧಿ ಜೀವನ ನಡೆಸುತ್ತಿರುವುದು ನನಗೆ ಬಹಳ ಹೆಮ್ಮೆ ಎನಿಸಿದೆ’ ಎಂದರು.

‘ರೈತರ ಬವಣೆಯ ಬದುಕು ಬದಲಾಗಬೇಕು. ಅವರು ಆಶಾದಾಯಕ ಜೀವನ ಸಾಗಿಸುವಂತಾಗಬೇಕು. ಸರ್ಕಾರಿ ನೌಕರನಿಗೆ ತಿಂಗಳ ವೇತನ ಬರುವಂತೆ ರೈತರಿಗೂ ತಿಂಗಳ ಆದಾಯ ಬರುವಂತ ರೀತಿಯಲ್ಲಿ ಕೈತುಂಬಾ ಕೆಲಸ ಇರಬೇಕು. ಅವರಿಗೆ ವರ್ಷವಿಡೀ ಆದಾಯ ಬರುವಂತ ಯೋಜನೆ ಜಾರಿಗೆ ತರಬೇಕು ಎಂಬ ಮಹತ್ವಾಕಾಂಕ್ಷೆಯಿಂದಾಗಿ ನಾನು ರಾಜಕೀಯಕ್ಕೆ ಬಂದೆ. ಈ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದೇನೆ. ನನೆಗುದಿಗೆ ಬಿದ್ದಿದ್ದ ಹಿಪ್ಪರಗಿ ಆಣೆಕಟ್ಟು ಯೋಜನೆ, ಕರಿಮಸೂತಿ ಏತ ನೀರಾವರಿ ಯೋಜನೆಗೆ ಜಾರಿಗೆ ತರುವಲ್ಲಿ ಸಫಲನಾಗಿದ್ದೇನೆ’ ಎಂದು ತಿಳಿಸಿದರು.

‘ಸೇವೆಯೇ ಪರಮ ಆರಾಧನೆ ಎಂದು ನಂಬಿರುವ ನಾನು ಮತಕ್ಷೇತ್ರದ ಜನರ ಸೇವೆಗೆ ಸದಾ ಸಿದ್ಧವಿದ್ದೇನೆ. ತಾಲೂಕಿನ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕೂಡ ಜಾರಿಗೆ ತರಲಾಗಿದೆ’ ಎಂದರು.

‘ವಿಶ್ವ ಮಟ್ಟದಲ್ಲಿ ಹೆಸರು ಪಡೆದಿರುವ ಅಥಣಿಯ ಚರ್ಮೋದ್ಯಮದ ಜೊತೆ ಜೊತೆಗೆ ಬಹುತೇಕ ಜನ ನೀರಾವರಿಯನ್ನು ಅವಲಂಬಿಸಿ ಕೃಷಿ ಕಾರ್ಯದಲ್ಲಿ ತೊಡಗಿರುವುದು ನಮ್ಮ ವಿಶೇಷವಾಗಿದೆ. ರೈತರು ಕರಿಮಸೂತಿ ಯೋಜನೆಯಲ್ಲಿ ಬರುವ ಹಲ್ಯಾಳ ಏತ ನೀರಾವರಿ ಯೋಜನೆಯ ಸದ್ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆದು ಸಮೃದ್ಧಿ ಜೀವನ ನಡೆಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT