ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕಾರ್ಮಿಕರೆಂದು ಪರಿಗಣಿಸಲು ಆಗ್ರಹ

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಬಳಗದಿಂದ ಪತ್ರಿಕಾ ವಿತರಕರ ದಿನಾಚರಣೆ: ಭೋಸಲೆ
Last Updated 4 ಸೆಪ್ಟೆಂಬರ್ 2022, 16:24 IST
ಅಕ್ಷರ ಗಾತ್ರ

ಬೆಳಗಾವಿ: ‘ವರ್ಷಪೂರ್ತಿ ಚಾಚೂ ತಪ್ಪದೇ ದುಡಿಯುವ ಪತ್ರಿಕಾ ವಿತರಕರನ್ನು ಸರ್ಕಾರ ಇನ್ನೂ ಕಾರ್ಮಿಕರು ಎಂದೇ ಪರಿಗಣಿಸಿಲ್ಲ. ನಸುಕಿನಲ್ಲಿ ನಗರವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರಂತೆ, ಪತ್ರಿಕಾ ವಿತರಕರೂ ಶ್ರಮಜೀವಿಗಳಾಗಿದ್ದಾರೆ ಎಂಬುದನ್ನು ಸರ್ಕಾರ ಮನಗಾಣಬೇಕು’ ಎಂದುಬೆಳಗಾವಿ ವೃತ್ತ ಪತ್ರಿಕೆಗಳ ವಿತರಕರ ಸಂಘದ ಅಧ್ಯಕ್ಷ ಪ್ರತಾಪ ಭೋಸಲೆ ಆಗ್ರಹಿಸಿದರು.

ನಗರದ ಗಣಪತಿ ಗಲ್ಲಿಯಲ್ಲಿ ಭಾನುವಾರ ನಸುಕಿನಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಬಳಗದಿಂದ ಆಚರಿಸಲಾದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕಾರ್ಮಿಕರಿಗೆ ಸಿಗುವ ಯಾವುದೇ ಸೌಲಭ್ಯ ನಮಗೆ ಇನ್ನೂ ಸಿಕ್ಕಿಲ್ಲ. ಹೀಗಾಗಿ, ಪತ್ರಿಕೆ ವಿತರಣೆಯೊಂದನ್ನೇ ನಂಬಿಕೊಂಡು ಜೀವನ ಸಾಗಿಸುವುದು ಕಷ್ಟವಾಗಿದೆ. ಅನಿವಾರ್ಯವಾಗಿ ಬೇರೆಬೇರೆ ಕಡೆಗೆ ದುಡಿಯಲು ಹೋಗುವ ಸ್ಥಿತಿ ಇದೆ. ಇದರಿಂದ ವಿಶ್ರಾಂತಿಯೇ ಸಿಗದೇ, ಹಲವರು ಆರೋಗ್ಯ ಕೆಡುತ್ತಿದೆ. ಅಂಥ ಕಷ್ಟದಲ್ಲಿ ನೆರವಾಗಲಿ ಎಂಬ ಕಾರಣಕ್ಕೆ ನಾವು ‘ಆರೋಗ್ಯ ವಿಮೆ’ ಕೇಳುತ್ತಿದ್ದೇವೆ. ದಶಕದಿಂದಲೂ ಸರ್ಕಾರ ಇದನ್ನು ಕಿವಿಗೆ ಹಾಕಿಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿ ವರ್ಷ ಒಂದು ಸೈಕಲ್‌ ನೀಡಬೇಕು, ಮಳೆಗಾಲಕ್ಕೆ ರೇನ್‌ಕೋಟ್‌, ಛತ್ರಿ, ಬೂಟುಗಳನ್ನು ಕೊಡಬೇಕು. ಕುಟುಂಬದವರ ಆರೋಗ್ಯಕ್ಕಾಗಿ ಕುಟುಂಬ ವಿಮೆ ಮಾಡಿಸಬೇಕು. ಗೌರವ ಧನ ಮಂಜೂರು ಮಾಡಬೇಕು. ಬಡ್ಡಿ ರಹಿತ ಸಾಲ ನೀಡಬೇಕು’ ಎಂದೂ ಅವರು ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾದ ನಾಮದೇವ ಕಳ್ಳಿಗುದ್ದಿ, ದೀಪಕ್ ರಾಜಗೋಳಕರ್, ಸಂಜಯ ಘೋರ್ಪಡೆ, ರಾಜು ಭೋಸಲೆ, ವಿನಾಯಕ ರಾಜಗೋಳಕರ್, ಸಾಗರ ರಾಜಗೋಳಕರ್, ಸತೀಶ ನಾಯಕ, ದೀಪಕ್ ಗಣಾಚಾರಿ, ಗೋಪಿ, ರಾಜು ನಿಲಜಕರ್, ಆನಂದ ಭೋವಿ ಸೇರಿದಂತೆ 40ಕ್ಕೂ ಹೆಚ್ಚು ವಿತರಕರು ಇದ್ದರು.

ಇನ್ನೊಂದಡೆ, ನಗರದ ಸಂತೋಷ- ನಿರ್ಮಲ್ ಚಿತ್ರಮಂದಿರ ಆವರಣದಲ್ಲಿ ನಡೆದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಹನುಮಂತ ಪೂಜಾರಿ, ಮಾರುತಿ ನಿಲಜಕರ್, ಸುನೀಲ ಕಾಂಗಳೆ, ರಮೇಶ ಉಡುಪ, ಶಂಕರ ಟೋಕಣೇಕರ್, ಬಾಲರಾಜ್, ರಾಜಗೋಳಕರ್ ಇದ್ದರು.

ಮತ್ತೊಂದೆಡೆ, ಬೆಳಗಾವಿಯ ಮಹಾಂತೇಶ ನಗರ ಹಾಗೂ ಟಿಳಕವಾಡಿ ಪ್ರದೇಶದಲ್ಲಿ ಪತ್ರಿಕೆ ವಿತರಿಸುವ ಬಳಗದ ಗೌರೀಶ ಬಸರಕೋಡ, ಮಹಾಂತೇಶ ಪಾಟೀಲ, ಪಪ್ಪು ಶಿಂಧೆ ಅವರೂ ಇದ್ದರು.

ಎಲ್ಲ ವಿತರಕ ಬಳಗಕ್ಕೂ ಸಿಹಿ ಹಂಚಿ, ಪುಷ್ಪ ನೀಡಿ ಶುಭಾಶಯ ಕೋರಲಾಯಿತು. ಹಿರಿಯರು, ಕಿರಿಯರೆನ್ನದೇ ಖುಷಿಯಿಂದ ಮುಂದೆ ಬಂದ ಪತ್ರಿಕಾ ವಿತರಕರು ಫೋಟೊ, ಸೆಲ್ಫಿಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು.

ಟಿಪಿಎಂಎಲ್‌ ಪ್ರಸಾರಾಂಗದ ಪ್ರಾದೇಶಿಕ ವ್ಯವಸ್ಥಾಪಕ ರವಿ ಹೆಗಡೆ, ಡೆಕ್ಕನ್‌ ಹೆರಾಲ್ಡ್‌ ಹಿರಿಯ ವರದಿಗಾರ ರಾಜು ಗವಳಿ, ಜಾಹೀರಾತು ವಿಭಾಗದ ವ್ಯವಸ್ಥಾಪಕ ಕಿರಣ್‌ ಕಿರದತ್‌, ವರದಿಗಾರರಾದ ಸಂತೋಷ ಈ. ಚಿನಗುಡಿ ಹಾಗೂ ಇಮಾಮ್‌ಹುಸೇನ್‌ ಗೂಡುನವರ ಎಲ್ಲರಿಗೂ ಶುಭಾಶಯ ಕೋರಿದರು.

ಪತ್ರಿಕಾ ವಿತರಕನಿಗೆ ಗ್ರಾಮಸ್ಥರಿಂದ ಸತ್ಕಾರ
ಚನ್ನಮ್ಮನ ಕಿತ್ತೂರು:
ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ ಪತ್ರಿಕಾ ವಿತರಕ ದಿನವಾದ ಭಾನುವಾರ ಇಲ್ಲಿಯ ಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿತರಕ ಶಿವಪುತ್ರಯ್ಯಯ ವಿರಕ್ತಮಠ ಅವರನ್ನು ಗ್ರಾಮಸ್ಥರ ಪರವಾಗಿ ಸತ್ಕರಿಸಲಾಯಿತು.

ಮುಖಂಡ ವೀರೇಶ ಕಂಬಳಿ ಮಾತನಾಡಿ, ಗ್ರಾಮ ಪಂಚಾಯ್ತಿ ಸದಸ್ಯ ಸಂಗಮೇಶ ಹಿರೇಮಠ, ನಾಗೇಶ ಮರೆಪ್ಪಗೋಳ, ನಾಗೇಶ ಬೆಣ್ಣಿ, ವಿವೇಕ ಕುರಗುಂದ, ಚಿಂತಾಮಣಿ ಹಿರೇಮಠ, ರುದ್ರಪ್ಪ ಇಟಗಿ, ಕಲ್ಲಪ್ಪ ಕಟಗಿ, ಬಸವರಾಜ ಬೀಡಿ, ಸತೀಶ ಅಗ್ನಿಹೊತ್ರಿ, ಗಂಗಾಧರ ಹಣಮಸಾಗರ, ಸುರೇಶ ಕುರಗುಂದ, ಜಗದೀಶ ಅಂಗಡಿ,ಪ್ರಭು ಹಟ್ಟಿಹೊಳಿ, ಶಂಕರ ಹಣಮಸಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT