ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ಇಬ್ಬರಿಗೆ ಜೀವದಾನ ಮಾಡಿ ತಾನೇ ಮಡಿದ

ಶೌರ್ಯ ಮೆರೆದ‌ ಶ್ರೀಶೈಲ, ದುಃಖದ ಮಡುವಿನಲ್ಲಿ ಮುಳುಗಿದ ಕುಟುಂಬ
Published 16 ಏಪ್ರಿಲ್ 2024, 4:31 IST
Last Updated 16 ಏಪ್ರಿಲ್ 2024, 4:31 IST
ಅಕ್ಷರ ಗಾತ್ರ

ರಾಮದುರ್ಗ: ನಮ್ಮೂರಿನಲ್ಲಿ ಸೋಮವಾರ ಪರಿಚಿತರೊಬ್ಬರ ಮದುವೆ ನಿಶ್ಚಯವಾಗಿತ್ತು. ಅದಕ್ಕೂ ಮುನ್ನಾದಿನ ನಡೆದ ಕಾರ್ಯಕ್ರಮದಲ್ಲಿ ತಮ್ಮ ಶ್ರೀಶೈಲ ಊಟ ಮಾಡುತ್ತಿದ್ದ. ಆಗ, ಮಲಪ್ರಭಾ ನದಿಯಲ್ಲಿ ಇಬ್ಬರು ಮುಳುಗುತ್ತಿರುವ ವಿಷಯ ಕಿವಿಗೆ ಬೀಳುತ್ತಿದ್ದಂತೆ, ಅರ್ಧಕ್ಕೆ ಊಟದ ತಾಟು ಬಿಟ್ಟು ಓಡಿಹೋದ. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನೂ ರಕ್ಷಿಸಿದ. ಆದರೆ, ವಿಧಿ ಅವನನ್ನೇ ಬಲಿ ಪಡೆಯಿತು...

ತಾಲ್ಲೂಕಿನ ಅವರಾದಿ ಬಳಿ ಮಲಪ್ರಭಾ ನದಿಯಲ್ಲಿ ಭಾನುವಾರ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಲು ಹೋಗಿ, ತಾವೇ ಮೃತಪಟ್ಟ ಶ್ರೀಶೈಲ ಮುದಕನ್ನವರ ಅವರ ಹಿರಿಯ ಸಹೋದರ ನಾಗರಾಜ ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡಿದ್ದು ಹೀಗೆ.

47 ವರ್ಷ ವಯಸ್ಸಿನ ಶ್ರೀಶೈಲ, ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿ ಶೌರ್ಯ, ಸಾಹಸ ಮೆರೆದಿದ್ದಾರೆ. ಆದರೆ, ಮನೆ ಮಗನನ್ನು ಕಳೆದುಕೊಂಡ ಕುಟುಂಬ ಆತಂಕಕ್ಕೆ ಒಳಗಾಗಿದೆ. ಇಳಿವಯಸ್ಸಿನಲ್ಲಿ ಕಿರಿಯ ಪುತ್ರನೊಂದಿಗೆ ನೆಮ್ಮದಿಯಿಂದ ಬದುಕಿನ ಬಂಡಿ ದೂಡುತ್ತಿದ್ದ ತಾಯಿ ಕಣ್ಣೀರು ಸುರಿಸುತ್ತಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ಶ್ರೀಶೈಲ ಅವರಿಗೆ ಬಾಲ್ಯದಲ್ಲೇ ಈಜುವ ಕಲೆ ಕರಗತವಾಗಿತ್ತು. ಆದರೆ, ಇಬ್ಬರನ್ನು ರಕ್ಷಿಸುವ ವೇಳೆ ಮಡುವಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬರಿಗೆ ನೆರವಾಗಲು ಹೋಗಿ, ಪ್ರಾಣಬಿಟ್ಟ ತಮ್ಮೂರಿನ ಮಗನ ಅಗಲಿಕೆಯಿಂದಾಗಿ ಇಡೀ ಊರೇ ಶೋಕಸಾಗರದಲ್ಲಿ ಮುಳುಗಿದೆ.

ನಮ್ಮನ್ನೆಲ್ಲ ಬಿಟ್ಟು ಹೋದ: ‘ಮಲಪ್ರಭೆ ನದಿದಂಡೆ ಮೇಲೆ ನಮ್ಮ ಕೃಷಿಭೂಮಿ ಇದೆ. ಈ ಭಾಗದಲ್ಲಿ ಮದುವೆ ಸಮಾರಂಭಕ್ಕೆ ಬಂದಿದ್ದ ನಾಲ್ಕು ಹುಡುಗರು ಈ ಹಿಂದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇಲ್ಲಿ ಆಗಾಗ ಇಂಥ ಘಟನೆ ನಡೆಯುತ್ತಲೇ ಇವೆ. ನದಿಗೆ ಬಂದಾಗ, ಯಾರಿಗೆ ತೊಂದರೆಯಾದರೂ ಶ್ರೀಶೈಲ ನೆರವಿಗೆ ಓಡುತ್ತಿದ್ದ. ಭಾನುವಾರ ಬಾಲಕನೊಬ್ಬ ಈಜಲು ಹೋಗಿ ಮುಳುಗುತ್ತಿದ್ದ. ಅವನ ರಕ್ಷಣೆಗೆ ಹೋಗಿದ್ದ ಯುವಕನೂ ಸಂಕಷ್ಟಕ್ಕೆ ಸಿಲುಕಿದ್ದ. ಅವರಿಬ್ಬರನ್ನು ನನ್ನ ತಮ್ಮ ದಡಕ್ಕೆ ತಂದ. ಆದರೆ, ತಾನೇ ನಮ್ಮನ್ನೆಲ್ಲ ಬಿಟ್ಟು ಹೋದ’ ಎಂದು ನಾಗರಾಜ ಕಣ್ಣೀರು ಸುರಿಸಿದರು.

‘ನನ್ನ ತಮ್ಮ ರಕ್ಷಿಸಿದ ಬಾಲಕ ಈ ಹಿಂದೆಯೂ ಸಂಕಷ್ಟಕ್ಕೆ ಸಿಲುಕಿ, ಪಾರಾಗಿ ಬಂದಿದ್ದ. ಮುಂದೆ ಹೀಗಾಗಬಾರದು. ಪಾಲಕರೂ ತಮ್ಮ ಮಕ್ಕಳ ರಕ್ಷಣೆಗೆ ಒತ್ತು ನೀಡಬೇಕು’ ಎಂದು ಮನವಿ ಮಾಡಿದರು.
‘ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದ ಶ್ರೀಶೈಲ, ಸಾಮಾಜಿಕ ಕಾಯಕದಲ್ಲಿ ಮುಂದಿರುತ್ತಿದ್ದ. ತಾನು ಪ್ರಾಣ ಬಿಟ್ಟರೂ, ಇಬ್ಬರನ್ನು ರಕ್ಷಿಸಿದ ಶ್ರೀಶೈಲ ಸಾಹಸವನ್ನು ಸರ್ಕಾರ ಗುರುತಿಸಬೇಕು’ ಎಂಬ ಒತ್ತಾಯ ಗ್ರಾಮಸ್ಥರದ್ದು.

ಶ್ರೀಶೈಲ
ಶ್ರೀಶೈಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT