ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಸಿನ ಮಳೆಗೆ ಬೆಳಗಾವಿ ತತ್ತರ

Last Updated 5 ಆಗಸ್ಟ್ 2020, 14:58 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಬಿರುಸಿನ ಮಳೆ ಸುರಿದಿದೆ. ದಿನವಿಡೀ ಸುರಿದ ಮಳೆಯು ಅಪಾಯವನ್ನೂ ತಂದೊಡ್ಡಿದೆ. ಕೆಲವು ಕಡೆ ರಸ್ತೆ ಬದಿಯ ಮರಗಳು ಧರೆಗುರುಳಿವೆ. ಹಲವು ತಗ್ಗು ಪ್ರದೇಶಗಳಲ್ಲಿನ ಮನೆಗಳಲ್ಲಿ ನೀರು ನುಗ್ಗಿದೆ. ಹಳ್ಳ– ಕೊಳ್ಳಗಳು ತುಂಬಿ ರಸ್ತೆಯ ಮೇಲೆ ಹರಿದಿವೆ. ವಾಹನಗಳ ಸಂಚಾರಕ್ಕೆ ಅಡಚಣೆಯನ್ನೂ ಉಂಟು ಮಾಡಿದೆ.

ಇಲ್ಲಿನ ಸಂಭಾಜಿ ನಗರದಲ್ಲಿ ಮರವೊಂದು ಬಿದ್ದು ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಎಪಿಎಂಸಿ ಆವರಣ ಗೋಡೆಯು ಶಿಥಿಲಗೊಂಡು ನೆಲಕ್ಕುರುಳಿತು. ಜ್ಯೋತಿ ನಗರಕ್ಕೆ ಹೋಗುವ ರಸ್ತೆಯ ಮೇಲೆ ಕಲ್ಲು, ಮಣ್ಣು ಚದುರಿದ್ದರಿಂದ ಕೆಲಕಾಲ ಸಂಪರ್ಕ ಕಡಿತಗೊಂಡಿತ್ತು. ಬಸವನ ಗಲ್ಲಿಯಲ್ಲಿ ಕಾರೊಂದರ ಮೇಲೆ ಮಣ್ಣಿನ ಗೋಡೆ ಕುಸಿದುಬಿದ್ದಿತು.

ನಗರದ ಹೊರವಲಯದಲ್ಲಿ ಮಾರ್ಕಂಡೇಯ ನದಿ ಮೈದುಂಬಿ ಹರಿದ ಪರಿಣಾಮ ಕಡೋಲಿ– ದೇವಗಿರಿ ರಸ್ತೆಯ ಮೇಲೆ ಎರಡು ಅಡಿಗಳಷ್ಟು ನೀರು ಹರಿಯಿತು. ಮಂಡೋಳಿ– ಸಾವಗಾಂವ ರಸ್ತೆಯು ಜಲಾವೃತಗೊಂಡಿತ್ತು. ಬಳ್ಳಾರಿ ನಾಲಾ ಉಕ್ಕಿ ಹರಿದ ಪರಿಣಾಮ ವಡಗಾಂವ, ಶಹಾಪುರ, ಹಳೇ ಪಿ.ಬಿ. ರಸ್ತೆ, ಯಳ್ಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಮನೆಯೊಳಗೆ ನುಗ್ಗಿತ್ತು. ಮನೆಯೊಳಗಿನ ನೀರು ಹೊರಹಾಕಲು ಜನರು ಪರದಾಡಿದರು. ಇದೇ ಸ್ಥಿತಿ, ಗಾಂಧಿನಗರ, ಅನ್ನಪೂರ್ಣೇಶ್ವರಿ ನಗರ, ವೀರಭದ್ರ ನಗರ, ಶಾಹು ನಗರ, ಟಿಳಕವಾಡಿಯ ಮಹಾತ್ಮ ಗಾಂಧಿ ಕಾಲೊನಿಯಲ್ಲೂ ಕಂಡುಬಂದಿತು.

ಖಾನಾಪುರ ವರದಿ

ಖಾನಾಪುರದಲ್ಲೂ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯವಸ್ಥವಾಗಿದೆ. ರಸ್ತೆ ಸಂಪರ್ಕ ಹಾಗೂ ವಿದ್ಯುತ್‌ ಸಂಪರ್ಕ ಬಹುತೇಕ ಕಡೆ ಕಡಿತಗೊಂಡಿದೆ. ಲೋಂಡಾ ಮೂಲಕ ಪಣಜಿಗೆ ಹೋಗುವ ಮಾರ್ಗ, ಜತ್ತ– ಜಾಂಬೋಟಿ, ಸಿಂಧನೂರು– ಹೆಮ್ಮಡಗಾ ಹೆದ್ದಾರಿಗಳು ಬಂದ್‌ ಆಗಿವೆ.

ನೂರಾರು ಎಕರೆ ಪ್ರದೇಶದ ಜಮೀನುಗಳಲ್ಲಿ ನೀರು ನುಗ್ಗಿದ್ದು, ನಾಟಿ ಮಾಡಿದ ಸಸಿಗಳು ನೀರಲ್ಲಿ ಮುಳುಗಿವೆ. ಕಣಕುಂಬಿ, ಜಾಂಬೋಟಿ, ಗುಂಜಿ, ಅವರೊಳ್ಳಿ, ಕೊಡಚವಾಡ, ಚಿಕ್ಕದಿನಕೊಪ್ಪ, ಮುಗಳಿಹಾಳ, ಪಾರಿಶ್ವಾಡ, ಹಟ್ಟಿಹೊಳಿ, ಬಿಳಕಿ, ಕಗ್ಗಣಗಿ, ಹಿರೇಮುನವಳ್ಳಿ, ಚಿಕ್ಕಮುನವಳ್ಳಿ ಭಾಗದ ಜಮೀನುಗಳಲ್ಲಿ ನೀರು ತುಂಬಿಕೊಂಡಿದೆ.

ಪೊಲೀಸ್‌ ತರಬೇತಿ ಶಾಲೆ ಹಾಗೂ ಶಾಸಕಿ ಅಂಜಲಿ ನಿಂಬಾಳ್ಕರ ಅವರ ನಿವಾಸದೊಳಗೆ ಮಳೆ ನೀರು ನುಗ್ಗಿದೆ.

ಮಲಪ್ರಭಾ ಉಗಮ ಸ್ಥಳ ಕಣಕುಂಬಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನದಿಯ ನೀರಿನ ಹರಿವು ಏರಿಕೆಯಾಗಿದೆ. ಜಾಂಬೋಟಿ ಹತ್ತಿರದ ಹಬ್ಬಾನಟ್ಟಿಯ ಹನುಮಾನ ಮಂದಿರ ಮುಳುಗಡೆಯಾಗಿದೆ. ಕಣಕುಂಬಿಯಲ್ಲಿ 29 ಸೆಂ.ಮೀ ಮಳೆಯಾಗಿದ್ದು, ಪ್ರವಾಹ ಸ್ಥಿತಿ ತಲೆದೋರುವ ಸಾಧ್ಯತೆ ಇದೆ. ನದಿ ದಂಡೆಯ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT